ಮಂಗಳೂರು ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಕಡೆಗಣನೆ: ಯು.ಟಿ. ಖಾದರ್ ರಾಜೀನಾಮೆಗೆ ದಲಿತ ಮುಖಂಡರ ಆಗ್ರಹ - Mahanayaka

ಮಂಗಳೂರು ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಕಡೆಗಣನೆ: ಯು.ಟಿ. ಖಾದರ್ ರಾಜೀನಾಮೆಗೆ ದಲಿತ ಮುಖಂಡರ ಆಗ್ರಹ

u t khadar
22/09/2026

ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಲಿತ ಸಮುದಾಯದ 30 ವರ್ಷಗಳ ಹಳೆಯ ಬೇಡಿಕೆಯಾದ ‘ಡಿಸಿ ಮನ್ನಾ’ (Depressed Class) ಭೂಮಿ ಹಂಚಿಕೆ ಮತ್ತು ಒತ್ತುವರಿ ತೆರವು ವಿಚಾರವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ದಲಿತರಿಗೆ ದ್ರೋಹ ಬಗೆದಿರುವ ಸಚಿವ ಯು.ಟಿ. ಖಾದರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮುಖಂಡರಾದ ರಘು ಎಕ್ಕಾರ್ ಹಾಗೂ ಅಶೋಕ್ ಕೊಂಚಾಡಿ ನೇರ ಎಚ್ಚರಿಕೆ ರವಾನಿಸಿದ್ದಾರೆ.

ಬ್ರಿಟಿಷರ ಕಾಲದಲ್ಲೇ ದಲಿತರ ಸಬಲೀಕರಣಕ್ಕಾಗಿ ಮೀಸಲಿಟ್ಟಿದ್ದ ಡಿಸಿ ಮನ್ನಾ ಭೂಮಿಗಾಗಿ ಕಳೆದ 30 ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಮಂಗಳೂರಿನಲ್ಲೇ ಸಚಿವ ಸಂಪುಟ ಸಭೆ ನಡೆದಿದ್ದರಿಂದ, ಸಚಿವರು ಈ ವಿಚಾರವನ್ನು ಸಂಪುಟದ ಮುಂದಿಟ್ಟು ದಲಿತರಿಗೆ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ಇತ್ತು. ಆದರೆ ಅದು ಹುಸಿಯಾಗಿದೆ. ದಲಿತರ ಬಗ್ಗೆ ಕಾಳಜಿ ಇಲ್ಲದಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಹಿಂದೆ ಭರವಸೆ ನೀಡಿದ್ದ ಕಂದಾಯ ಸಚಿವರೂ ಸಹ ತಮ್ಮ ಮಾತನ್ನು ಉಳಿಸಿಕೊಂಡಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಶೋಕ್ ಕೊಂಚಾಡಿ ಮಾತನಾಡಿ, “ಸಂಪುಟ ಸಭೆಗೂ ಮುನ್ನ ಸಚಿವ ಯು.ಟಿ. ಖಾದರ್ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಮಾಡಿದ್ದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಸಂಪುಟ ಸಭೆಯಲ್ಲಿ ಪ್ರಮುಖ ಮುಖಂಡರೊಬ್ಬರ ಸೂಚನೆಯಂತೆ ಈ ವಿಷಯವನ್ನು ದಿಢೀರನೆ ಬದಿಗಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡವಾಳಶಾಹಿಗಳು, ಪ್ರಭಾವಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ನೂರಾರು ಎಕರೆ ಡಿಸಿ ಮನ್ನಾ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದು, ಈ ಒತ್ತುವರಿದಾರರ ಹಿತಾಸಕ್ತಿಗೆ ಮಣಿದು ಸಚಿವರು ದಲಿತರಿಗೆ ದ್ರೋಹ ಮಾಡಿದ್ದಾರೆ” ಎಂದು ಆರೋಪಿಸಿದರು..

ಭೀಮಸೇನೆಯಿಂದ ಘೇರಾವ್ ಎಚ್ಚರಿಕೆ:

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ದಲಿತ ಸಮುದಾಯಕ್ಕೆ ಈಗ ಅನ್ಯಾಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲೆಯ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದರೂ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶಿಸಿ, ಘೇರಾವ್ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭೀಮಸೇನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler