“ನೀನು ಬೀಫ್ ತಿನ್ನುತ್ತೀಯಾ?”: ಜಾತಿ ತಾರತಮ್ಯದಿಂದ ನೊಂದು ತಮಿಳುನಾಡಿನಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ!
ಕೊಯಮತ್ತೂರು / ತಮಿಳುನಾಡು: ತಮಿಳುನಾಡಿನ ಕೊಯಮತ್ತೂರಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆತನ ಪೋಷಕರು ಜಾತಿ ತಾರತಮ್ಯ ಮತ್ತು ಕಿರುಕುಳವೇ ಪ್ರಮುಖ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೊಯಮತ್ತೂರಿನ ಪೀಲಮೇಡು ನಿವಾಸಿಯಾದ ಎ. ಅಖಿಲನ್ ಎಂಬ ದಲಿತ ವಿದ್ಯಾರ್ಥಿ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯ ನಂತರ ಆತನ ಕುಟುಂಬಸ್ಥರು ಮತ್ತು ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ಹಾಗೂ ಪರಿಸರದಲ್ಲಿ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಮೃತನ ತಾಯಿ ಕೌಸಲ್ಯ ಅವರು ಪೀಳಮೇಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ಮಗ ದಲಿತ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದವನೆಂದು ತಿಳಿದು ಶಾಲೆಯ ಇತರ ವಿದ್ಯಾರ್ಥಿಗಳು ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು “ನೀನು ಗೋಮಾಂಸ (ಬೀಫ್) ತಿನ್ನುತ್ತೀಯಾ?” ಎಂದು ಪ್ರಶ್ನಿಸಿ ಕಿರುಕುಳ ನೀಡಿದ್ದರು. ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ತಾಯಿ ಆರೋಪಿಸಿದ್ದಾರೆ.
ತಾಯಿಯ ದೂರಿನನ್ವಯ ಪೀಳಮೇಡು ಪೊಲೀಸರು ಶಿಕ್ಷಕ, ಮುಖ್ಯೋಪಾಧ್ಯಾಯ ಹಾಗೂ ಇಬ್ಬರು ಸಹಪಾಠಿ ವಿದ್ಯಾರ್ಥಿಗಳ ವಿರುದ್ಧ ಮೂರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೋಷಕರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.




























