ಅತ್ತೆಯ ವಿರುದ್ಧ 20 ರೂ. ನೋಟಿನಲ್ಲಿ ದೇವರಿಗೆ ವಿಚಿತ್ರ ಹರಕೆಯಿಟ್ಟ ಸೊಸೆ!
ಅಫಜಲಪುರ: ಕುಟುಂಬ ಅಂದ ಮೇಲೆ ಮನಸ್ತಾಪಗಳು ಇದ್ದಿದ್ದೆ. ಆದ್ರೆ ಕೆಲವೊಂದು ಮನಸ್ತಾಪಗಳು ಮತ್ತೊಬ್ಬ ವ್ಯಕ್ತಿಯ ಸಾವನ್ನು ಬಯಸುವ ಮಟ್ಟಕ್ಕೆ ಇರುತ್ತದೆ ಎನ್ನುವುದೇ ದುರಂತ, ಕಷ್ಟಗಳನ್ನ ಸಹಿಸಿ ಸಾಕಾದ ಸೊಸೆಯೊಬ್ಬಳು ದೇವರಿಗೆ ವಿಚಿತ್ರ ಬೇಡಿಕೆಯನ್ನಿಟ್ಟು ನೋಟಿನ ಮೇಲೆ ಬರೆದು ಹರಕೆ ಹುಂಡಿಗೆ ಹಾಕಿದ್ದಾಳೆ. ಈ ನೋಟಿನಲ್ಲಿ ಬರೆದ ಸಾಲು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಫಜಲಪುರ ತಾಲೂಕಿನ ಘತ್ತರಗಾ ಭಾಗ್ಯವಂತಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು. ಇದೇ ವೇಳೆ ಸಿಕ್ಕಿದ ನೋಟಿನ ಮೇಲೆ ಸೊಸೆಯೊಬ್ಬಳು ಅತ್ತೆಯ ವಿರುದ್ಧ ದೇವರಿಗೆ 20 ರೂಪಾಯಿ ನೋಟಿನಲ್ಲಿ ವಿಚಿತ್ರ ಬೇಡಿಕೆಯಿಟ್ಟಿದ್ದಾಳೆ.
ತಾಯಿ…, ನಮ್ಮ ಅತ್ತೆ ಬೇಗ ಸಾಯಬೇಕು ಎನ್ನುವುದು ಸೊಸೆ ದೇವರಿಗೆ ಇಟ್ಟ ಬೇಡಿಕೆಯಾಗಿದೆ. ಅತ್ತೆಯ ಕಾಟ ಸಹಿಸಲಾರದ ಸೊಸೆ ನೋಟಿನ ಮೇಲೆ ಬರೆದು ದೇವರಿಗೆ ಅರ್ಪಿಸಿದ್ದಾಳೆ.
ಜನರು ತಾವು ಹಾಕುವ ಕಾಣಿಕೆ ಹಣವನ್ನು ದೇವರೇ ತೆಗೆದುನೋಡುತ್ತಾರೆ ಎನ್ನುವ ಭಾವನೆ ಹೊಂದಿರುತ್ತಾರೆ. ಸೊಸೆಯ ಮನಸ್ಸಿನೊಳಗಿನ ಕ್ರೋಧದ ಜೊತೆಗೆ ಆಕೆಯ ಅಮಾಯಕತನವೂ ಬಯಲಾಗಿದೆ. ತಾನು ಕಾಣಿಕೆ ಹಾಕುವ ನೋಟಿನಲ್ಲಿ ಬರೆದರೆ ದೇವರು ಓದುತ್ತಾರೆ ಎಂದು ಸೊಸೆ ಭಾವಿಸಿದ್ದಾಳೆ. ಆದರೆ ಕಾಣಿಕೆ ಎಣಿಕೆಯನ್ನ ದೇವಸ್ಥಾನದ ಸಿಬ್ಬಂದಿ ನಿರ್ವಹಿಸುತ್ತಾರೆ ಎನ್ನುವ ತಾಂತ್ರಿಕ ಅರಿವೂ ಕೂಡ ಆಕೆಗೆ ಇದ್ದಂತಿಲ್ಲ.
ಒಟ್ಟಿನಲ್ಲಿ ಅತ್ತೆ ಸೊಸೆ ಜಗಳ ಕಾಣಿಕೆ ಹುಂಡಿಯವರೆಗೆ ತಲುಪಿದೆ. ಅವರ ಕುಟುಂಬದಲ್ಲಿ ಅತ್ತೆ ಸೊಸೆ ಹೊಂದಾಣಿಕೆಯಾಗಲಿ, ಅತ್ತೆ ಸೊಸೆ ಇಬ್ಬರಿಗೂ ದೇವರು ಬುದ್ದಿ ನೀಡಲಿ ಎಂದು ಜನ ಪ್ರಾರ್ಥಿಸುವಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: