ದೋಷಪೂರಿತ ಎಸ್.ಐ.ಆರ್. ಪ್ರಕ್ರಿಯೆ ರದ್ದುಪಡಿಸಲು ಪ್ರಕಾಶ್ ರಾಜ್ ಆಗ್ರಹ! - Mahanayaka
7:04 AM Tuesday 10 - November 2026

ದೋಷಪೂರಿತ ಎಸ್.ಐ.ಆರ್. ಪ್ರಕ್ರಿಯೆ ರದ್ದುಪಡಿಸಲು ಪ್ರಕಾಶ್ ರಾಜ್ ಆಗ್ರಹ!

prakash raj
28/09/2026

ಮಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ದೋಷಪೂರಿತ ಎಸ್.ಐ.ಆರ್. (SIR) ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ 2023ರಿಂದೀಚೆಗೆ ದೇಶದ ಚುನಾವಣಾ ಆಯೋಗ ನಡೆಸಿರುವ ಎಲ್ಲ ಪ್ರಕ್ರಿಯೆಗಳ ಬಗ್ಗೆಯೂ ಸುಪ್ರೀಂ ಕೋರ್ಟ್‌ನಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಖ್ಯಾತ ಚಲನಚಿತ್ರ ನಟ ಹಾಗೂ ಎಸ್.ಐ.ಆರ್. ಪರಿಶೋಧ ಮತ್ತು ಪ್ರತಿರೋಧ ಸಂಘಟನೆಯ ಮುಖಂಡ ಪ್ರಕಾಶ್ ರಾಜ್ ತೀವ್ರವಾಗಿ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1950ರಿಂದಲೂ ಭಾರತದ ಚುನಾವಣಾ ಆಯೋಗವು ಒಂದು ಸ್ವತಂತ್ರ ಮತ್ತು ವಿಶ್ವಾಸಾರ್ಹ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಯಾವುದೇ ಅರ್ಹ ಮತದಾರರು ಚುನಾವಣಾ ಸಂದರ್ಭದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಇದರ ಮೂಲ ಉದ್ದೇಶವಾಗಿತ್ತು. ಆದರೆ, ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಆರಂಭಿಸಲಾಗಿರುವ ಎಸ್.ಐ.ಆರ್. ಪ್ರಕ್ರಿಯೆಯು ಸಂಪೂರ್ಣ ದೋಷಪೂರಿತವಾಗಿದೆ ಎಂದು ಅವರು ಆರೋಪಿಸಿದರು.

ದೇಶದಲ್ಲಿ ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಅರ್ಹರನ್ನು ಸೇರಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿಕೊಂಡಿದ್ದರೂ, ಇದುವರೆಗೆ ಯಾವುದೇ ನುಸುಳುಕೋರರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡದೆ ಬರೋಬ್ಬರಿ 13 ಕೋಟಿ ಮತದಾರರನ್ನು ಮತಪಟ್ಟಿಯಿಂದ ಹೊರಗಿಟ್ಟಿದೆ. ಕರ್ನಾಟಕದಲ್ಲಿ ಬೂತ್ ಮಟ್ಟದಲ್ಲಿ ಐದೂವರೆ ಕೋಟಿ ಮತದಾರರಿದ್ದು, ಈ ಬೃಹತ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇವಲ ಒಂದು ತಿಂಗಳ ಗಡುವು ನೀಡಿ ನಂತರ 15 ದಿನಗಳ ಕಾಲ ವಿಸ್ತರಿಸಲಾಗಿತ್ತು. ರಾಜ್ಯ ಸರ್ಕಾರ ಹೆಚ್ಚಿನ ಕಾಲಾವಕಾಶ ಕೋರಿ ಮಾಡಿದ ಮನವಿಗೆ ಆಯೋಗ ಯಾವುದೇ ಉತ್ತರ ನೀಡಿಲ್ಲ.

ಈ ಅವೈಜ್ಞಾನಿಕ ಪ್ರಕ್ರಿಯೆಯಿಂದಾಗಿ ಜೀವಂತವಿರುವವರನ್ನು ಮೃತರ ಪಟ್ಟಿಗೆ ಸೇರಿಸಲಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ ವ್ಯಕ್ತಿ ಲಭ್ಯವಿಲ್ಲದಿದ್ದರೆ ಅವರ ಹೆಸರುಗಳನ್ನು ಅನಧಿಕೃತವಾಗಿ ಕೈಬಿಡಲಾಗಿದೆ. ಅನಾರೋಗ್ಯ ಪೀಡಿತರು, ಅನಕ್ಷರಸ್ಥರು, ಲಿಂಗ ಪರಿವರ್ತನೆಗೊಂಡವರು, ಕೆಲಸದ ನಿಮಿತ್ತ ವಾಸ ಸ್ಥಳದಿಂದ ದೂರವಿರುವವರು ಹಾಗೂ ಅಗತ್ಯ ದಾಖಲೆಗಳನ್ನು ಹೊಂದಿರದ ನೈಜ ಭಾರತೀಯ ಪ್ರಜೆಗಳು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಬಿ.ಎಲ್.ಒ.ಗಳಿಗೆ ಮಾಹಿತಿಯ ಕೊರತೆ ಇರುವುದು ಮತ್ತು ಸ್ಥಳಕ್ಕೆ ಭೇಟಿ ನೀಡದೆ ಕಾರ್ಯನಿರ್ವಹಿಸುತ್ತಿರುವುದು ಈ ಗೊಂದಲಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಪ್ರಕಾಶ್ ರಾಜ್ ಕಳವಳ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler