ಈಶ್ವರಪ್ಪ, ಮಲ್ಲಿಕಾರ್ಜುನ ಗೌಡ, ಸೋ ಕಾಲ್ಡ್ ದೇಶಭಕ್ತರ ಮೇಲೆ ಯಾಕೆ ಸುಮೊಟೊ ದಾಖಲಾಗುತ್ತಿಲ್ಲ? - Mahanayaka

ಈಶ್ವರಪ್ಪ, ಮಲ್ಲಿಕಾರ್ಜುನ ಗೌಡ, ಸೋ ಕಾಲ್ಡ್ ದೇಶಭಕ್ತರ ಮೇಲೆ ಯಾಕೆ ಸುಮೊಟೊ ದಾಖಲಾಗುತ್ತಿಲ್ಲ?

sumoto
23/02/2022

  • ಪ್ರಶಾಂತ್ ದಾನಪ್ಪ, ಮಸ್ಕಿ

ರಾಷ್ಟ್ರ ಧ್ವಜಕ್ಕೆ , ದಿನನಿತ್ಯ ಸಂವಿಧಾನಕ್ಕೆ ಅವಮಾನ ಮಾಡುವ, ರಾಷ್ಟ್ರ ನಾಯಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವ, ಭಾರತದ ಕಾನೂನು ಸರಿ ಇಲ್ಲ ಎನ್ನುವ, ಗಾಂಧಿಯವರನ್ನ ಕೊಂದದ್ದನ್ನು ಸಂಭ್ರಮಿಸುವ, ಕೋಮು ಸಂಘರ್ಷ ಎಬ್ಬಿಸಿ ಸಮಾಜದ ಸಾಮರಸ್ಯ ಹಾಳುಮಾಡುವ,  ಅಟ್ರಾಸಿಟಿಗಳನ್ನೇ ತಿರುಚುವ ಪೊಲೀಸರ ಮೇಲೆ, ದಲಿತ ಆದಿವಾಸಿ ಬುಡಕಟ್ಟುಗಳ ಬದುಕುವ ಹಕ್ಕನ್ನೆ ಅಸ್ಪೃಶ್ಯತೆ ಬಹಿಷ್ಕಾರದ ಮೂಲಕ ಕಿತ್ತುಕೊಳ್ಳುವ ಕ್ರಿಮಿನಲ್ ಗಳ ಮೇಲೆ,   ಕಾನೂನಿನ ಮೇಲೆ ಜನರ ಅಪನಂಬಿಕೆಯನ್ನ ದಿನನಿತ್ಯ ಬಿತ್ತುವ  ಜನದ್ರೋಹಿ, ದೇಶದ್ರೋಹಿಗಳ ಮೇಲೆ ಸುಮೊಟೊ ದೂರು ದಾಖಲಿಸಿಕೊಳ್ಳುವುದೇ ಆದರೆ, ಈ ದೇಶದ ಬಹುತೇಕ ಸೋ ಕಾಲ್ಡ್ ದೇಶಭಕ್ತರು ಜೈಲಿನಲ್ಲಿರುತ್ತಿದ್ದರು.

ಆದರೆ ನಮ್ಮ ಸರ್ಕಾರ, ಪೊಲೀಸರು  ತಮಗೆ ಸಂವಿಧಾನ ಜನಪರವಾಗಿ ಬಳಸಲು ನೀಡಿದ ಕಾನೂನಿನ ಅಸ್ತ್ರವಾದ ಸುಮೋಟೊವನ್ನು ಯಾಕೆ ಜನರ ಪರವಾಗಿ ಧ್ವನಿ ಎತ್ತುವವರ  ಮೇಲೆ ಬಳಸಲು ಅತೀ ಉತ್ಸಾಹ ತೋರುತ್ತೆ ಎನ್ನುವ ಪ್ರಶ್ನೆಯು ಚೇತನ್ ಅಹಿಂಸಾರವರ ಪ್ರಕರಣದಲ್ಲಿ ನಮಗೆ ಕಾಡಬಹುದು. ಪ್ರಗತಿಪರ ಚಿಂತಕ, ನಟ , ಸಂವಿಧಾನದ ಆಶಯಗಳಲ್ಲಿ ನಂಬಿಕೆಯುಳ್ಳ ಚೇತನ್ ಅಹಿಂಸಾರವನ್ನ ಭಯೋತ್ಪಾದಕರಂತೆ ಕದ್ದು ಮುಚ್ಚಿ, ಸರಿಯಾಗಿ ಕಾನೂನು ರೀತ್ಯಾ ಬಂಧಿಸದೇ , ಮನೆಯವರಿಗೂ ತಿಳಿಸದೇ, ಯಾರ ಭೇಟಿಗೂ ಸಿಗದಂತೆ ಅಕ್ರಮವಾಗಿ ಬಂಧನದಲ್ಲಿ ಇಡುವುದರ ಹಿಂದೆ ಈ ದೇಶದ ಕಾನೂನಿನ ಮೇಲೆ ನಂಬಿಕೆ ಇಡದ, ಮತ್ತು ಕಾನೂನನ್ನು ದುರುಪಯೋಗ ಮಾಡ್ತಾನೆ ಬಂದ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿವೆ ಎನ್ನುವ ಅನುಮಾನಕ್ಕೆ ಕಾರಣವಾಗಿದೆ

“ಚೇತನ್ ಹಿಜಾಬ್ ಬಗ್ಗೆ ಬರೆದ್ರು, ಈಗ ಹಿಜಾಬ್ ವಿಚಾರಣೆಯಲ್ಲಿರುವ ಜಡ್ಜ್ ನ ಬಗ್ಗೆ ಬರೆದ್ರು ಹಾಗಾಗಿ ಕಾನೂನಿನ ಮೇಲೆ ಜನರ ನಂಬಿಕೆ ಹೋಗುತ್ತೆ , ಶಾಂತಿಭಂಗ ಆಗುತ್ತದೆ, ಸಾಮರಸ್ಯ ಕೆಡುತ್ತದೆ ” ಎಂದು ಸುಮೊಟೊ ದಾಖಲಿಸಿದ್ದಾರೆ. ಖಂಡಿತ ಅದನ್ನು ಒಪ್ಪೋಣ. ಆದರೆ, ಪಾರದರ್ಶಕವಾದ ಕಾನೂನು ಪ್ರಕ್ರಿಯೆಗಳ ಮೂಲಕ ಮಾಡದೆ ಕದ್ದುಮುಚ್ಚಿ ಮಾಡುವ ಅಗತ್ಯ ಏನಿತ್ತು. ಚೇತನ್ ಏನು ಮೋಸ್ಟ್ ವಾಂಟೆಂಡ್ ಕ್ರಿಮಿನಲ್ಲಾ? ತಪ್ಪಿಸಿಕೊಂಡು ಹೋಗ್ತಾ ಇದ್ರಾ?   ಚೇತನ್ ಈ ದೇಶದ ವ್ಯವಸ್ಥೆ, ಪ್ರಭುತ್ವದ ಬಗ್ಗೆ ಮಾತಾಡಿದ್ದು ಇದೇ ಮೊದಲಲ್ಲ. ಆದ್ರು, ಈಗ ಯಾಕೆ ಇಷ್ಟು ತರಾತುರಿಯಲ್ಲಿ ಬಂಧಿಸಲಾಯಿತು?  ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.

ಅಂಬೇಡ್ಕರ್ ಫೋಟೋವನ್ನ ತೆಗೆಸಿ ಉದ್ಧಟತನ ಮೆರೆದಿದ್ದ ರಾಯಚೂರು ಜಿಲ್ಲಾ ಜಡ್ಜ್ ಮಲ್ಲಿಕಾರ್ಜುನ ಗೌಡರ ವಿರುದ್ದ ಕರ್ನಾಟಕದಲ್ಲಿ ಎಲ್ಲಾ ದಲಿತರು, ಹಿಂದುಳಿದವರು ಒಗ್ಗಟ್ಟಾಗಿ ದೊಡ್ಡ ಚಳುವಳಿ ನಡೆಸಿದ್ದವು. ಅದರ ಕಾವು ಇನ್ನೂ ಆರಿಲ್ಲ. ಅವುಗಳನ್ನು ಡೈವರ್ಟ್ ಮಾಡಲು ಚೇತನ್ ಅವರ ಪೋಸ್ಟ್ ಅನ್ನು ದಾಳವಾಗಿ ಬಳಸಲಾಗಿದೆಯೇ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.

ಈ ದೇಶದಲ್ಲಿ ಸಂವಿಧಾನ ಬದಲಿಸ್ತೇವೆ , ನಾವು ಬಂದಿದ್ದೇ ಸಂವಿಧಾನ ಬದಲಿಸೋಕೆ ಎನ್ನುವವರ ಮೇಲೆ ಸುಮೋಟೊ ಯಾಕೆ ಹಾಕುತ್ತಿಲ್ಲ?   ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ತೆಗೆದು ಭಗವಾಧ್ವಜ ಹಾರಿಸ್ತೇವೆ ಎನ್ನುವ ಈಶ್ವರಪ್ಪರ ಮೇಲೆ ಯಾಕೆ ಸುಮೋಟೊ ಹಾಕಿಲ್ಲ !   ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಕೋಮು ಸಂಘರ್ಷ ಏರಿ, ದೇಶದ ಸಾಮರಸ್ಯದ ಬದುಕು ಹಾಳುಮಾಡಿ, ಸಾವಿರಾರು ಕೋಟಿ ಸಾರ್ವಜನಿಕ ಆಸ್ತಿ ಹಾಳು ಮಾಡ್ತಾ ಬಂದವರ ಮೇಲೆ ಸರ್ಕಾರ, ಪೊಲೀಸರು ಯಾಕೆ ಸುಮೋಟೊ ಹಾಕುತ್ತಿಲ್ಲ !  ದಿನಂಪ್ರತಿ ಅಂಬೇಡ್ಕರ್ ಬರೆದ ಸಂವಿಧಾನ ಎನ್ನುವ ಒಂದೇ ಕಾರಣಕ್ಕೆ, ಸಂವಿಧಾನ ಸರಿ ಇಲ್ಲ ,ಈ ದೇಶದ ಕಾನೂನು ಸರಿ ಇಲ್ಲ ನಮಗೆ ಹಳೆ ಕಾನೂನು ಬೇಕು ಎಂದು ಸಾರ್ವಜನಿಕವಾಗಿ ಮಾತಾಡೋ ಪುಂಡರಿ ಮೇಲೆ ಸುಮೊಟೊ ಯಾಕೆ ಹಾಕಲ್ಲ!  ಎನ್ನುವ ಪ್ರಶ್ನೆಗಳು ಈ ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.

ದೇಶದಲ್ಲಿ ಶೋಷಿತರ ಲಕ್ಷಾಂತರ ಕೊಲೆ, ಅತ್ಯಾಚಾರ ಪ್ರಕರಣಗಳು ಸಾಕ್ಷಿ ಇದ್ದರೂ ಪ್ರೂವ್ ಮಾಡಲಾಗದೆ, ಸಾವು ಬದುಕಿನ ಮಧ್ಯೆ ಇವೆ. ಸಂತ್ರಸ್ಥರಿಗೆ ಇರೋ ಜೀವ ಬೆದರಿಕೆಗೊ ಏನೋ ಹಾಗೆ ಉಳಿದಿವೆ. ಅಂತವುಗಳನ್ನು ಸುಮೋಟೊದಡಿ ರಿ ಓಪನ್ ಮಾಡಿಯೋ , ಭದ್ರತೆ ನೀಡಿಯೋ ನ್ಯಾಯಕೊಡಿಸಲು ಯಾಕೆ ಮನಸು ಮಾಡೋದಿಲ್ಲ!  ಎನ್ನುವ ಪ್ರಶ್ನೆಗಳು ಸಮಾಜದಲ್ಲಿ ಮೂಡುತ್ತಿದೆ.

ಡಾ.ಅಂಬೇಡ್ಕರ್ ನೀಡಿದ ಸಂವಿಧಾನಲ್ಲಿರುವ ವಿಶೇಷವಾದ ಸುಮೋಟೋ ಕಾಗ್ನಿಜೆನ್ಸ್ ಅನ್ನು ಸರಿಯಾಗಿ ಅನ್ಯಾಯಕ್ಕೊಳಗಾದವರ ಪರ, ಕಾನೂನನ್ನು ನಿಜಕ್ಕೂ ಉಲ್ಲಂಘಿಸಿದವರ ವಿರುದ್ಧ, ನಿಜಕ್ಕೂ ದೇಶದಲ್ಲಿ ಜಾತಿ ಧರ್ಮ ಭಾಷೆ ಎಂದು ವಿಷಬೀಜ ಬಿತ್ತಿ, ಶಾಂತಿ ಕದಡೋರ ವಿರುದ್ಧ ದಾಖಲಿಸಿ ಸುಮೋಟೊಗೆ ಇರುವ ಕಾನೂನಿನ ಘನತೆಯನ್ನು ಕಾಪಾಡಬೇಕು. ಚೇತನ್ ಅಹಿಂಸಾ ಸಂವಿಧಾನ, ಕಾನೂನು ಎಂದರೆ, ತಲೆ ಬಾಗಿ ನಡೆಯುತ್ತಿದ್ದಾರೆ. ಯಾವುದೇ ವಿಚಾರಕ್ಕೆ ಅವರನ್ನು ಪೊಲೀಸ್ ಠಾಣೆಗೆ ಕರೆದರೂ, ಕಾನೂನಿಗೆ ತಲೆ ಬಾಗಿ ಅವರು ಪೊಲೀಸರ ಎದುರು ಹಾಜರಾಗುತ್ತಿದ್ದರು. ಆದರೆ, ಅವರನ್ನು ಅಪಹರಿಸಿದಂತೆ ಬಂಧಿಸುವ ಮೂಲಕ, ಅವರ ಕುಟುಂಬಸ್ಥರಿಗೆ ಮಾನಸಿಕ ಹಿಂಸೆ ನೀಡಿರುವುದು ಎಷ್ಟು ಸರಿ ಎನ್ನುವ ಬೇಸರದ ಮಾತುಗಳು ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಅಂಬೇಡ್ಕರ್ ಫೋಟೊವನ್ನ ಮಾತ್ರ ತೆಗಿಸಿ, ಸಂವಿಧಾನ ದಿನವನ್ನ ಆಚರಿಸಿದ ಜಡ್ಜ್ ಮಲ್ಲಿಕಾರ್ಜುನ ಗೌಡನಿಂದ ಅದೆಷ್ಟು ಭಾರತಿಯರ ಸಂವಿಧಾನ ಪ್ರೇಮಿಗಳ, ಅಂಬೇಡ್ಕರ್ ಅನುಯಾಯಿಗಳ ಭಾವನೆಗೆ ಧಕ್ಕೆ ಆಗಿದೆ. ಸಮಾಜದಲ್ಲಿ ಕೋಲಾಹಲ ಆದಾಗ ಆ ಜಡ್ಜ್ ಮೇಲೆ ಸುಮೋಟೊವನ್ನ ಯಾಕೆ ದಾಖಲಿಸಲಾಗಲಿಲ್ಲ? ಇಂತಹ ಘಟನೆಗಳು, ಸುಮೋಟೊ ಬಳಸುವ  ಅಧಿಕಾರ ಇರುವ ಕೈಗಳು ಮೇಲ್ಜಾತಿಯವು ಎನ್ನುವ ಭಾವನೆಯನ್ನು ಸೃಷ್ಟಿಸುವುದಿಲ್ಲವೇ? ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿದೆ.

ಎಲ್ಲಿಯತನಕ ನ್ಯಾಯಾಲಯಗಳಲ್ಲಿ ಸಾಮಾಜಿಕ ಪ್ರಾತಿನಿಧಿತ್ವ ಬರಲ್ವೋ , ಎಲ್ಲಿಯವರೆಗೆ ತಳಸಮುದಾಯಗಳ ಬಗ್ಗೆ ಅಂತಃಕರಣ ಇರುವ ನ್ಯಾಯಾಧೀಶರು ಆ ಸ್ಥಾನಗಳಲ್ಲಿ ಹೆಚ್ಚಾಗಲ್ವೋ ಅಲ್ಲಿಯತನಕ ಮಲ್ಲಿಕಾರ್ಜುನ ಗೌಡರಂತಹ ಜಾತಿವಾದಿ ನ್ಯಾಯಾಧೀಶರು, ಪೂರ್ವಾಗ್ರಹ ಪೀಡಿತ ಮನಸ್ಥಿತಿಯವರು ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವುದು ಅನುಮಾನದ ಸಂಗತಿಯಾಗಿದೆ ಎನ್ನುವ ಭಾವನೆಗಳಿಗೆ ಕಾರಣವಾಗಿದೆ.

ನಟ ಚೇತನರನ್ನ ಜೈಲಿಗೆ ಕಳುಹಿಸುವ ಉದ್ದೇಶ ಇದ್ದರೆ ಅವರ ಅದೆಷ್ಟೋ ಪೋಸ್ಟ್ ಗಳು ಇದ್ದವು. ಅವರು ಸುಮಾರು ವರ್ಷಗಳಿಂದಲೂ ತುಂಬಾ ನೇರವಾಗಿ ಬರೆಯುತ್ತಿದ್ದಾರೆ. ಆದರೆ,  ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದ ಬೆನ್ನಲ್ಲೇ, ಅವರನ್ನು ಏಕಾಏಕಿ ಯಾವುದೇ ಸೂಚನೆ ನೀಡದೇ ಪೊಲೀಸರು ಬಂಧಿಸಿರುವುದು, ಪ್ರಕರಣವನ್ನು ಡೈವರ್ಟ್ ಮಾಡುವ ಪ್ರಯತ್ನವೇ? ಎನ್ನುವ ಅನುಮಾನಗಳಿಗೂ ಕಾರಣವಾಗಿದೆ.

ಆದರೆ ದಲಿತ ಚಳುವಳಿಗಾರರು ಹೋರಾಟಗಾರರು ಅಷ್ಟು ದಡ್ಡರಲ್ಲ,  ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ.ಬಿ.ಕೆ. ಕೃಷ್ಣಪ್ಪನವರು ಹೇಳಿದಂತೆ “ದಲಿತರ ಗುಡಿಸಲಲ್ಲಿ ದೀಪ ಹಚ್ಚಿದ್ದೇನೆ. ಅದು ಆರದಂತೆ ಉಳಿಸಿಕೊಳ್ಳಿ” ಎಂಬ ಮಾತನ್ನು ಇಂದಿಗೂ ದಲಿತ ಚಳುವಳಿಗಾರರು ಎದೆಯಲ್ಲಿಯೇ ದೀಪ ಮತ್ತು ಬೆಂಕಿ ಎರಡನ್ನೂ ಹೊತ್ತು ಈ ದೇಶದ ಸಂವಿಧಾನ ಕಾನೂನಿಗೆ ಗೌರವ ನೀಡುತ್ತಲೇ ಸದಾ ಇಪ್ಪತ್ನಾಲ್ಕು ಗಂಟೆ ಹೋರಾಟವನ್ನು  ಮಾಡುತ್ತಲೇ ಇದ್ದಾರೆ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಪ್ರಕರಣವನ್ನು ದಿಕ್ಕು ತಪ್ಪಿಸಲು ನೂರು ಪ್ರಯತ್ನ ಮಾಡಿದರೂ, ಸಂವಿಧಾನ ಪರ ಹೋರಾಟಗಾರರು ಎಂದಿಗೂ ದಿಕ್ಕುತಪ್ಪುವುದಿಲ್ಲ ಎನ್ನುವ ಅರಿವು ಆ ಹಿತಾಸಕ್ತಿಗಳಿಗಿರಲಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ