ಕುರ್ಚಿ ಆಸೆಗಾಗಿ ವಿರೋಧಿ ಬಣದ ನಾಯಕರನ್ನು ಮುಗಿಸುತ್ತಿದ್ದಾರೆ ಡಿಕೆಶಿ: ಜೆಡಿಎಸ್ ಗಂಭೀರ ಆರೋಪ - Mahanayaka

ಕುರ್ಚಿ ಆಸೆಗಾಗಿ ವಿರೋಧಿ ಬಣದ ನಾಯಕರನ್ನು ಮುಗಿಸುತ್ತಿದ್ದಾರೆ ಡಿಕೆಶಿ: ಜೆಡಿಎಸ್ ಗಂಭೀರ ಆರೋಪ

d k shivakumar
16/04/2026

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಧಿಕಾರದ ಆಸೆಗಾಗಿ ತಮ್ಮ ವಿರೋಧಿ ಬಣದ ನಾಯಕರನ್ನು ಗುರಿಯಾಗಿಸಿಕೊಂಡು ರಾಜಕೀಯವಾಗಿ ಮುಗಿಸುತ್ತಿದ್ದಾರೆ ಎಂದು ಜೆಡಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಿಡಿಕಾರಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಮತ್ತು ದಲಿತ ನಾಯಕರನ್ನು ಡಿಕೆಶಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ಅನ್ಯಾಯ ತಾಂಡವವಾಡುತ್ತಿದೆ. ವಾಲ್ಮೀಕಿ ಸಮುದಾಯದ ನಾಯಕ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಏಕಾಏಕಿ ಕೆಳಗಿಳಿಸಲಾಯಿತು. ಈಗ ಅಲ್ಪಸಂಖ್ಯಾತ ಸಮುದಾಯದ ನಾಯಕ ಅಬ್ದುಲ್ ಜಬ್ಬರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಸಂಘರ್ಷ ತಾರಕಕ್ಕೇರಿದೆ. ಕುರ್ಚಿ ಉಳಿಸಿಕೊಳ್ಳುವ ಮತ್ತು ಪಡೆಯುವ ಹಪಾಹಪಿಯಲ್ಲಿ ಡಿಕೆಶಿ ಅವರು ತಮ್ಮ ಎದುರಾಳಿ ಬಣದವರನ್ನು ಸಂಚು ರೂಪಿಸಿ ಒಂದೊಂದಾಗಿ ಮುಗಿಸುತ್ತಿದ್ದಾರೆ.  “ಅಧ್ಯಕ್ಷರು ತಪ್ಪು ಮಾಡಿದರೆ ಕೇವಲ ಕ್ಷಮೆ ಕೇಳಿದರೆ ಸಾಕು, ಆದರೆ ದಲಿತ ಮತ್ತು ಅಲ್ಪಸಂಖ್ಯಾತ ನಾಯಕರಿಗೆ ಮಾತ್ರ ವಜಾ ಮತ್ತು ಉಚ್ಚಾಟನೆಯ ಶಿಕ್ಷೆ ನೀಡಲಾಗುತ್ತಿದೆ” ಎಂದು ಜೆಡಿಎಸ್ ಟೀಕಿಸಿದೆ.

ಹಣಬಲ ಮತ್ತು ತೋಳ್ಬಲ ಬಳಸಿ ಡಿಕೆಶಿ ಅವರು ತಳಮಟ್ಟದಲ್ಲಿ ಪಕ್ಷ ಕಟ್ಟಿದ ನಾಯಕರ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇದು ಕಾಂಗ್ರೆಸ್‌ನ ಅಸಲಿ ಮುಖ ಎಂದು ಜೆಡಿಎಸ್ ಕಿಡಿಕಾರಿದೆ.

ಇತ್ತೀಚೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಾಸೀರ್ ಅಹ್ಮದ್ ಅವರನ್ನು ವಜಾ ಮಾಡಿದ ಬೆನ್ನಲ್ಲೇ ಜೆಡಿಎಸ್ ಈ ರೀತಿಯ ಹರಿತವಾದ ವಿಮರ್ಶೆ ನಡೆಸಿದೆ. ಕಾಂಗ್ರೆಸ್ ಆಂತರಿಕ ಕಲಹ ಈಗ ಬೀದಿಗೆ ಬಂದಂತಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ