ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಗೆ ಡಾ. ಸಿ.ಎನ್. ಮಂಜುನಾಥ್ ಭೇಟಿ: ಹೃದಯದ ಬಗ್ಗೆ ಹೇಳಿದ್ದೇನು?
ಬೆಂಗಳೂರು: ಜನಪ್ರಿಯ ಹೃದ್ರೋಗ ತಜ್ಞ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಇತ್ತೀಚೆಗೆ ಟೊಯೊಟಾ ಕಿರ್ಲೋಸ್ಕರ್(Toyota Kirloskar) ಮೋಟಾರ್ (ಟಿಕೆಎಂ) ಕಂಪನಿಗೆ ಭೇಟಿ ನೀಡಿದರು.
ಹೃದ್ರೋಗ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಪರಿಣತಿ ಹೊಂದಿರುವ ಪ್ರತಿಷ್ಠಿತ ವೈದ್ಯರಾಗಿರುವ ಡಾ. ಸಿ.ಎನ್. ಮಂಜುನಾಥ್ ಅವರು ಈ ಸಂದರ್ಭದಲ್ಲಿ ಪ್ರಸ್ತುತ ಸಮಾಜಕ್ಕೆ ಅವಶ್ಯವಿರುವ “ಹೃದಯದ ಆರೋಗ್ಯ ಕುರಿತ ಸತ್ಯಗಳು ಮತ್ತು ತಪ್ಪು ಅಭಿಪ್ರಾಯಗಳು” ಎಂಬ ವಿಚಾರದ ಕುರಿತು ಮಾಹಿತಿಯುಕ್ತ ಭಾಷಣವನ್ನು ಮಾಡಿದರು.
ಕಂಪನಿಗೆ ಭೇಟಿ ನೀಡಿದ ಸಮಯದಲ್ಲಿ, ಡಾ. ಮಂಜುನಾಥ್ ಅವರು ಟಿಕೆಎಂ ಉದ್ಯೋಗಿಗಳ ಜೊತೆ ಹೃದಯರಕ್ತನಾಳದ ಆರೋಗ್ಯ ಕುರಿತು ಆಸಕ್ತಿಕರ, ಮಾಹಿತಿಪೂರ್ಣ ಸಂವಾದ ನಡೆಸಿದರು. ಈ ವಿಚಾರದ ಕುರಿತು ಸಮಗ್ರವಾಗಿ, ಆಸಕ್ತಿದಾಯಕವಾಗಿ ಮಾತನಾಡಿದ ಅವರು ಹೃದ್ರೋಗದ ಕುರಿತು ಇರುವ ಹಲವಾರು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದರು. ಜೊತೆಗೆ ಈ ಕಾಲದ ಆಧುನಿಕ ಜೀವನ ಶೈಲಿಯಲ್ಲಿ ಹೃದಯದ ಆರೋಗ್ಯಕ್ಕೆ ಯಾವ ರೀತಿ ಆದ್ಯತೆ ನೀಡಬೇಕು ಎಂಬುದರ ಕುರಿತು ಪ್ರಾಯೋಗಿಕ ಸಲಹೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಟಿಕೆಎಂನ ಉದ್ಯೋಗಿಗಳು ಉತ್ಸಾಹದಿಂದ ಪಾಲ್ಗೊಂಡರು.
ಡಾ.ಸಿ.ಎನ್ ಮಂಜುನಾಥ್ ಅವರು ತಮ್ಮ ಮಾತಿನಲ್ಲಿ ಹಲವಾರು ಸಂಕೀರ್ಣ ವಿಚಾರಗಳ ಕುರಿತು ಮಾತನಾಡಿದರು. ನಿಜವಾದ ಅಪಾಯಕಾರಿ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಕುರಿತು ಆರಂಭಿಕ ಹಂತದಲ್ಲಿಯೇ ತಿಳಿದುಕೊಳ್ಳಲು ಪ್ರಸ್ತುತ ಈ ಕುರಿತು ಹರಡಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಿದರು. ಜೊತೆಗೆ ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ದೈನಂದಿನ ಆರೋಗ್ಯ ತಪಾಸಣೆ ಸೇರಿದಂತೆ ದೀರ್ಘಾವಧಿಯಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾಡಬೇಕಾದ ಹಲವಾರು ಜೀವನಶೈಲಿ ಬದಲಾವಣೆಗಳ ಕುರಿತಾದ ಪ್ರಾಯೋಗಿಕ ಸಲಹೆಗಳನ್ನು ನೀಡಿದರು.
ಟಿಕೆಎಂ ಸಂಸ್ಥೆಯ ಸಮಸ್ತರು ಕೂಡ ಡಾ. ಮಂಜುನಾಥ್ ಅವರ ಭೇಟಿ ಮತ್ತು ಅವರ ಚಿಂತನಾಶೀಲ, ವಿಚಾರ ಪ್ರಚೋದಕ ಭಾಷಣವನ್ನು ಮೆಚ್ಚಿಕೊಂಡರು. ಅವರ ಮಾತು ಎಲ್ಲರ ಮೇಲೆಯೂ ಉತ್ತಮ ಪರಿಣಾಮವನ್ನು ಬೀರಿತು. ಡಾ.ಸಿ.ಎನ್ ಮಂಜುನಾಥ್ ಅವರು ಹೃದಯರಕ್ತನಾಳದ ಚಿಕಿತ್ಸೆಯ ಸಂಕೀರ್ಣತೆಯ ಕುರಿತು ಬೆಳಕು ಚೆಲ್ಲಿದರು. ಜೊತೆಗೆ ಕಾರ್ಪೊರೇಟ್ ಜಗತ್ತಿನಲ್ಲಿ ಆಗಬೇಕಾದ ಆರೋಗ್ಯ ಜಾಗೃತಿಯ ಮಹತ್ವವನ್ನು ಸಾರಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು, “ಹೃದಯರಕ್ತನಾಳದ ಕಾಯಿಲೆಗಳು ಜಾಗತಿಕ ಮಟ್ಟದಲ್ಲಿ ಬಹಳವೇ ಕಾಡುವ ಮಹತ್ವದ ಸಮಸ್ಯೆಯಾಗಿದೆ. ಆ ಸಮಸ್ಯೆಯನ್ನು ಪರಿಹರಿಸಲು ಜಾಗೃತಿ, ಶಿಕ್ಷಣ ಮತ್ತು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದು ಬಹಳ ಮುಖ್ಯವಾಗಿದೆ. ಈ ಕುರಿತು ಜನರಿಗೆ ಸೂಕ್ತ ಮಾಹಿತಿ ನೀಡುವುದು ಬಹಳ ಅಗತ್ಯ ಎಂದು ನಾನು ತಿಳಿದಿದ್ದೇನೆ. ಅಪಾಯ ಉಂಟು ಮಾಡಬಹುದಾದ ಅಂಶಗಳನ್ನು ತಿಳಿದುಕೊಳ್ಳುವುದರಿಂದ, ಆರಂಭಿಕ ಹಂತದಲ್ಲಿ ರೋಗ ಲಕ್ಷಣ ಪತ್ತೆ ಮಾಡುವುದರಿಂದ ಮತ್ತು ಸಣ್ಣದೇ ಆದರೂ ಪರಿಣಾಮಕಾರಿಯಾಗಿ ಜೀವನಶೈಲಿ ಬದಲಾವಣೆ ಮಾಡುವ ಮೂಲಕ ನಮ್ಮ ಹೃದ್ರೋಗ ಸಮಸ್ಯೆಯಿಂದ ದೂರ ಇರುವ ಪ್ರಯತ್ನ ಮಾಡಬಹುದಾಗಿದೆ. ಟಿಕೆಎಂನಲ್ಲಿ ಆಯೋಜಿಸಿರುವ ಈ ಅರ್ಥಪೂರ್ಣ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ನನಗೆ ಸಂತೋಷವಾಗಿದೆ ಮತ್ತು ಈ ಮಾಹಿತಿಗಳು ಟಿಕೆಎಂ ಉದ್ಯೋಗಿಗಳ ದೈನಂದಿನ ಆರೋಗ್ಯ ನಿರ್ವಹಣೆಯಲ್ಲಿ ಪ್ರಭಾವ ಬೀರಬಹುದು ಎಂದು ನಾನು ವಿಶ್ವಾಸ ಹೊಂದಿದ್ದೇನೆ.
ಆರೋಗ್ಯ ಜಾಗೃತಿ ಕುರಿತು ಟಿಕೆಎಂ ಸಂಸ್ಥೆಯು ಹೊಂದಿರುವ ಬದ್ಧತೆಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂಥಾ ಹೆಚ್ಚು ಸಂವಾದಗಳು ಆಗುವುದನ್ನು ಎದುರು ನೋಡುತ್ತೇನೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯಕೀಯ ಚಿಕಿತ್ಸೆ ಮಾತ್ರ ಸಾಕಾಗುವುದಿಲ್ಲ, ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರವಾಗಿ, ಉತ್ತಮವಾಗಿ ಹಾಗೂ ಸಂತೃಪ್ತ ಜೀವನವನ್ನು ನಡೆಸುವುದು ಬಹಳ ಮುಖ್ಯ ಎಂಬುದನ್ನು ನಾವೆಲ್ಲರೂ ಮನಸ್ಸಲ್ಲಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು.
ಭಾಷಣದ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಟಿಕೆಎಂ ಉದ್ಯೋಗಿಗಳು ಡಾ. ಮಂಜುನಾಥ್ ಅವರ ಬಳಿ ಪ್ರಶ್ನೆ ಕೇಳಿ ಅನುಮಾನ ಪರಿಹರಿಸಿಕೊಂಡರು. ಕೊಲೆಸ್ಟ್ರಾಲ್ ನಿರ್ವಹಣೆ ಮಾಡುವುದು ಹೇಗೆ ಎಂಬುದರಿಂದ ಹಿಡಿದು ಹೃದ್ರೋಗದ ಮೇಲೆ ಜೆನೆಟಿಕ್ಸ್ ನ ಪರಿಣಾಮ ಏನು ಎಂಬವರೆಗೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಲಾಯಿತು.
ಡಾ.ಮಂಜುನಾಥ್ ಅವರು ಪ್ರಶ್ನೆ ಕೇಳಿದವರ ಪ್ರಶ್ನೆಗೆ ತಕ್ಕಂತೆ ಉತ್ತಮ ರೀತಿಯಲ್ಲಿ ಉತ್ತರ ನೀಡಿದರು. ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ವಿಚಾರಗಳನ್ನು ಹಂಚಿಕೊಂಡರು. ಡಾ.ಸಿಎನ್ ಮುಂಜುನಾಥ್ ಅವರು ತೋರಿದ ಕಾಳಜಿ ಮತ್ತು ಸಮರ್ಪಕ ಉತ್ತರಗಳು ಟಿಕೆಎಂ ಉದ್ಯೋಗಿಗಳನ್ನು ಸಂತೋಷಗೊಳಿಸಿತು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಆರೋಗ್ಯಕರ ಮತ್ತು ಆನಂದಕರ ಕೆಲಸದ ವಾತಾವರಣವನ್ನು ಉಂಟು ಮಾಡುವುದು ಬಹಳ ಮುಖ್ಯ ಎಂದು ಅರಿತುಕೊಂಡಿದೆ. ಅದಕ್ಕೆ ಪೂರಕವಾಗಿ ಟಿಕೆಎಂ ಸಂಸ್ಥೆಯು ಭವಿಷ್ಯದಲ್ಲಿಯೂ ಕೂಡ ಉದ್ಯೋಗಿಗಳ ಯೋಗಕ್ಷೇಮ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಂತಹ ಮಾಹಿತಿಪೂರ್ಣ ಮತ್ತು ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: