ಹಸುವನ್ನು ಏಕೆ ಕಡಿಯಬಾರದು ಎಂಬ ಹೇಳಿಕೆ ವಿರುದ್ಧ  ಮಾಜಿ ಸಚಿವ ಪ್ರಭು ಚೌಹಾಣ್ ಕಿಡಿ - Mahanayaka

ಹಸುವನ್ನು ಏಕೆ ಕಡಿಯಬಾರದು ಎಂಬ ಹೇಳಿಕೆ ವಿರುದ್ಧ  ಮಾಜಿ ಸಚಿವ ಪ್ರಭು ಚೌಹಾಣ್ ಕಿಡಿ

prabhu chauhan
04/06/2023

ಗೋವುಗಳನ್ನು ಏಕೆ ಕಡಿಯಬಾರದು ಎನ್ನುವ ನಿಮ್ಮ ಮನಸ್ಥಿತಿಯೇ ನನಗೆ ವಿಚಿತ್ರವಾಗಿ ಕಾಣಿಸುತ್ತಿದೆ. ಒಂದಿಷ್ಟು ಕಸಾಯಿ ಕಾಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಗೋವುಗಳ ದಾರುಣ ಅಂತ್ಯ ಎಲ್ಲವನ್ನು ನೋಡಿದ ನಂತರ ಮತ್ತೊಮ್ಮೆ ಆಲೋಚನೆ ಮಾಡಿ ಹೇಳಿಕೆ ನೀಡಿ ಎಂದು ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಪ್ರಭು ಚೌಹಾಣ್ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನ ನಿಜ ಬಣ್ಣವನ್ನು ತೋರಿಸಲು ಪ್ರಾರಂಭಿಸಿದೆ. ಯಾರ ಹೊಟ್ಟೆಯನ್ನು ತುಂಬಲು ಗೋವುಗಳನ್ನು ಕಡಿಯಲು ಪ್ರೇರಣೆ ನೀಡುತ್ತಿದ್ದೀರಿ?ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಕಾಂಗ್ರೆಸ್ ಅವಧಿಯಲ್ಲಿ 1964ರಿಂದಲೂ ಅಸ್ತಿತ್ವದಲ್ಲಿತ್ತು ಆಗಲೂ ಸಹ ಹಸುವನ್ನು ಕಡಿಯಬಾರದು ಎಂದು ಕಾನೂನಾಗಿತ್ತು. ಆದರೆ ಆ ಕಾನೂನಿನಲ್ಲಿದ್ದ ಕೆಲ ದುರ್ಬಲವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಬಲಪಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೇವಲ ರಾಜಕೀಯ ಲಾಭ ನಷ್ಟದ ದೃಷ್ಟಿಯಿಂದ ನೋಡುವ ಬದಲು ಜನಸಾಮಾನ್ಯನ, ರೈತನ ಜೀವನದಲ್ಲಿ ಇರುವ ಅದರ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ.

ಮನೆಯಲ್ಲಿ ಗೋವು ಸಾಕುವುದಿಲ್ಲವೆಂದ ಮಾತ್ರಕ್ಕೆ ಅದರ ಬಗ್ಗೆ ಭಾವನಾತ್ಮಕ ಸಂಬಂಧ ಇರಬಾರದು ಎಂದೇನಿಲ್ಲ. ಅದು ತಾಯಿಯಂತೆ ನಿತ್ಯ ಪೂಜೆಗೊಳಗಾಗುವ ದೈವ ಎಂದು ಅವರು ಬಣ್ಣಿಸಿದ್ದಾರೆ. ಅದರ ಸಂರಕ್ಷಣೆ, ಪೋಷಣೆ ಮತ್ತು ಗೋ ತಳಿಗಳ ಅಭಿವೃದ್ಧಿ ಸರ್ಕಾರದ ಮೂಲ ಕರ್ತವ್ಯವಾಗಿರಬೇಕೇ ಹೊರತು ಗೋವುಗಳನ್ನು ಕಡಿಯುವುದಕ್ಕೆ ಪ್ರೇರೇಪಿಸುವುದಲ್ಲ ಎಂದು ಸಚಿವ ಕೆ ವೆಂಕಟೇಶ್ ಅವರ ಹೇಳಿಕೆಯ ವಿರುದ್ಧ ಮಾಜಿ ಪಶು ಸಂಗೋಪನ ಸಚಿವ ಪ್ರಭು ಚೌಹಾಣ್ ಕಿಡಿ ಕಾರಿದ್ದಾರೆ

ನಮ್ಮ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ಗೋವುಗಳ ಸಂರಕ್ಷಣೆಗೆ ಶ್ರಮ ಪಟ್ಟಿದ್ದೇವೆ. ಪ್ರಾಣಿ ಕಲ್ಯಾಣ ಸಹಾಯವಾಣಿ, ಪ್ರಾಣಿ ಕಲ್ಯಾಣ ಮಂಡಳಿ, ಜಿಲ್ಲೆಗೊಂದು ಗೋಶಾಲೆ, ಪಶು ಚಿಕಿತ್ಸಾ ವಾಹನ ಹೀಗೆ ಗೋ ಸಂರಕ್ಷಣೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

ಗೋವನ್ನು ಒಮ್ಮೆ ವೈಜ್ಞಾನಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಧ್ಯಯನ ನಡೆಸಿ ನಂತರ ತೀರ್ಮಾನಿಸಿ ಎಂದು ಕಾಂಗ್ರೆಸ್ಸಿನ ಪಶುಸಂಗೋಪನಾ ಸಚಿವ ವೆಂಕಟೇಶ್ ಅವರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ