ಗರ್ಭ ನಿರೋಧಕ ಮಾತ್ರೆ ಸೇವಿಸಿ ಮಹಿಳೆ ಸಾವು
21/11/2020
ಬಾಗೇಪಲ್ಲಿ: ತನ್ನ ಗರ್ಭದಲ್ಲಿ ಹೆಣ್ಣು ಮಗು ಇದೆ ಎಂದು ಭಾವಿಸಿ ಗರ್ಭಿಣಿ ಮಹಿಳೆಯೊಬ್ಬರು ಗರ್ಭ ನಿರೋಧಕ ಮಾತ್ರೆ ಸೇವಿಸಿದ್ದು, ಪರಿಣಾಮವಾಗಿ ಆಕೆ ಅನಾರೋಗ್ಯಕ್ಕೊಳಗಾಗಿ ಮೃತಪಟ್ಟ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪರಗೋಡು ಪಂಚಾಯಿತಿಯ ಕೊತ್ತಪಲ್ಲಿಯಲ್ಲಿ ನಡೆದಿದೆ.
ಪೂಲವಾರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ (27) ಮೃತಪಟ್ಟ ಮಹಿಳೆಯಾಗಿದ್ದಾಳೆ. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಮುಂದಿನ ಮಗು ಗಂಡು ಆಗಿರಬೇಕು ಎಂದು ಆಕೆ ಬಯಸಿದ್ದಳು, ಆದರೆ ಈ ಬಾರಿಯೂ ತನಗೆ ಹೆಣ್ಣು ಮಗುವೇ ಜನಿಸುತ್ತದೆ ಎಂಬ ಬೇಸರದಿಂದ ಆಕೆ ಗರ್ಭ ನಿರೋಧಕ ಮಾತ್ರ ನುಂಗಿದ್ದಳು ಎಂದು ಹೇಳಲಾಗಿದೆ. ಆದರೆ ಸ್ಪಷ್ಟ ಕಾರಣ ಪೊಲೀಸರ ತನಿಖೆಯಿಂದ ಮಾತ್ರ ತಿಳಿದು ಬರಬೇಕಿದೆ.
ಮಾತ್ರೆ ಸೇವಿಸಿದ ಬಳಿಕ ಗರ್ಭಿಣಿಯಾಗಿದ್ದ ಶ್ರೀಕನ್ಯಾಗೆ ತೀವ್ರ ರಕ್ತ ಸ್ರಾವವಾಗಿತ್ತು. ಕೂಡಲೇ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾಳೆ.