ಇಲ್ಲಿ ಗ್ರಾಮಪಂಚಾಯತ್ ಅಭ್ಯರ್ಥಿಗಳು ಹರಾಜಿನಲ್ಲಿ ಆಯ್ಕೆಯಾಗಿದ್ದಾರೆ | ನೋಡಿ ನೀತಿಗೆಟ್ಟವರ ಕರ್ಮಕಾಂಡ - Mahanayaka

ಇಲ್ಲಿ ಗ್ರಾಮಪಂಚಾಯತ್ ಅಭ್ಯರ್ಥಿಗಳು ಹರಾಜಿನಲ್ಲಿ ಆಯ್ಕೆಯಾಗಿದ್ದಾರೆ | ನೋಡಿ ನೀತಿಗೆಟ್ಟವರ ಕರ್ಮಕಾಂಡ

08/12/2020

ಕಲಬುರಗಿ: ಚುನಾವಣೆಯಾದ ಬಳಿಕ ಜನಪ್ರತಿನಿಧಿಗಳನ್ನು ಖರೀದಿಸುವ ವಿಚಾರಗಳನ್ನು ನಾವು ಕೇಳಿದ್ದೇವೆ, ಚರ್ಚಿಸಿದ್ದೇವೆ. ಆದರೆ, ಅದಕ್ಕೂ ಮೇಲೆ ಎಂಬಂತೆ ಗ್ರಾಮ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಗಳನ್ನ  ಹರಾಜಿನ ಮೂಲಕ ಆಯ್ಕೆ ಮಾಡಿರುವ ವಿಲಕ್ಷಣ ಹಾಗೂ ನೀತಿಗೆಟ್ಟ ಘಟನೆಯೊಂದು ಕಲಬುರಗಿ ಜಿಲ್ಲೆಯ  ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ-1ರಲ್ಲಿ ನಡೆದಿದೆ.

 ಯಡ್ರಾಮಿ ತಾಲೂಕಿನ ಬಿಳವಾರ ಒಳಗೊಂಡಂತೆ ವಿವಿಧ ಗ್ರಾಮ ಪಂಚಾಯತಿಗಳಿಗೆ ಇದೇ ಡಿ.27 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಗ್ರಾಮದ ಗೊಲ್ಲಾಳಪ್ಪ ತಂದೆ ಅಯ್ಯಪ್ಪ ಮ್ಯಾಗೇರಿ, ಹಣಮಂತ ತಂದೆ ಭೀಮಯ್ಯ ಭೋವಿ, ಹಣಮಂತರಾಯ ದೊರೆ ಸಾ: ಜಮಖಂಡಿ ಹಾಗೂ ಬಬ್ರುವಾಹನ ತಂದೆ ರಾಮಯ್ಯ ಭೋವಿ ಇವರನ್ನು ಹರಾಜು ಪ್ರಕ್ರಿಯೆಯಲ್ಲಿ 26.55 ಲಕ್ಷ ರೂ. ಗಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಆಯ್ಕೆ ಮಾಡಿದ್ದಾರೆ.

ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ವ್ಯಾಪಕ ಆಕ್ರೋಶಗಳು ಕೇಳಿ ಬಂದಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹರಾಜು ಪ್ರಕ್ರಿಯೆ ಮೂಲಕ ಹಣ ಬಲದಿಂದ ಆಯ್ಕೆ ಮಾಡಿದ ಗ್ರಾಮದ 6 ಜನ ಮುಖಂಡರು ಮತ್ತು ಕಾನೂನು ಬಾಹಿರವಾಗಿ ಆಯ್ಕೆಯಾದ 4 ಜನರು ಸೇರಿಸಿ ಒಟ್ಟು 10 ಜನರ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ