ಗಣೇಶ ವಿಸರ್ಜನೆ ವೇಳೆ ಜಾತಿ ನಿಂದನೆ ಪ್ರಕರಣ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ನಿರಾಕರಣೆ - Mahanayaka

ಗಣೇಶ ವಿಸರ್ಜನೆ ವೇಳೆ ಜಾತಿ ನಿಂದನೆ ಪ್ರಕರಣ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ನಿರಾಕರಣೆ

pratap simha
25/09/2026

ಬೆಂಗಳೂರು: ಮೈಸೂರಿನ ಟಿ.ನರಸೀಪುರದಲ್ಲಿ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ದಲಿತ ಸಮುದಾಯ ಹಾಗೂ ದಲಿತ ಸಂಘಟನೆಗಳ ಹೋರಾಟಗಾರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ದಾಖಲಾಗಿರುವ ಜಾತಿ ನಿಂದನೆ ಪ್ರಕರಣದಲ್ಲಿ, ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದೆ.

ಪ್ರಕರಣ ರದ್ದು ಕೋರಿ ಪ್ರತಾಪ್‌ ಸಿಂಹ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಪೀಠ ನಡೆಸಿತು.

ಎಸ್‌ ಸಿ/ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಬಲವಂತದ ಕ್ರಮ ಜರುಗಿಸದಂತೆ ಅಥವಾ ಮಧ್ಯಂತರ ತಡೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದು, ಈ ಹಿನ್ನೆಲೆಯಲ್ಲಿ ಮಧ್ಯಂತರ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.

ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದ ನ್ಯಾಯಪೀಠ, ಮಂಗಳವಾರದವರೆಗೆ (ಸೆಪ್ಟೆಂಬರ್ 30) ಪ್ರತಾಪ್ ಸಿಂಹ ಅವರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಪ್ರತಾಪ್ ಸಿಂಹ ಪರ ವಕೀಲರ ವಾದ:

ಸೆ.18ರಂದು ಟಿ.ನರಸೀಪುರದಲ್ಲಿ ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ಮಸೀದಿ ಹತ್ತಿರ ಪಟಾಕಿ ಹೊಡೆಯುವುದು ಹಾಗೂ ಡಿಜೆ ಹಾಕಿ ಹೋಗುವುದನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಮತ್ತು ದಲಿತ ಸಂಘಟನೆಗಳ ವಿರುದ್ಧ ಮಾತನಾಡಿದ್ದನ್ನು ವಿವರಿಸುತ್ತಾ, ಇದು ಒಂದೇ ಘಟನೆಗೆ ಎರಡೆರಡು ಎಫ್‌ ಐಆರ್ ದಾಖಲಿಸಲಾಗಿದೆ ಎಂದು ವಾದಿಸಿದರು. ಅರ್ಜಿದಾರರು “ಅಂಬೇಡ್ಕರ್ ಬಗ್ಗೆ ಓದಿಕೊಳ್ಳಿ” ಎಂದಷ್ಟೇ ಹೇಳಿದ್ದಾರೆ, ಅದರಲ್ಲಿ ಅಪರಾಧವೇನಿದೆ ಎಂದು ಪ್ರಶ್ನಿಸಿ ರಕ್ಷಣೆ ಕೋರಿದರು.

ಸರ್ಕಾರಿ ಅಭಿಯೋಜಕರ ವಾದ:

ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್ ವಾದ ಮಂಡಿಸಿ, ಮಂಡ್ಯ ಸೇರಿದಂತೆ ಇತರ ಕಡೆಗಳಲ್ಲಿ ಗಣೇಶ ವಿಸರ್ಜನೆ ವೇಳೆ ವಿವಾದ ತಡೆಯಲು ಪೊಲೀಸರು ಶಾಂತಿಯುತವಾಗಿ ತೆರಳುವಂತೆ ಸೂಚಿಸಿದ್ದರು. ಆದರೆ ಪ್ರತಾಪ್ ಸಿಂಹ ಅವರು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದಿದ್ದಾರೆ ಎಂದು ಆಕ್ಷೇಪಿಸಿದರು. ತನಿಖೆ ಮುಂದುವರಿಯಲಿದ್ದು, ನ್ಯಾಯಾಲಯದ ಅನುಮತಿ ಪಡೆದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಭಯ ಪಕ್ಷಕಾರರ ವಾದಗಳನ್ನು ಆಲಿಸಿದ ನ್ಯಾಯಪೀಠ, “ಅರ್ಜಿದಾರರು ಅಂಬೇಡ್ಕರ್ ಬಗ್ಗೆ ಓದಿ ಎಂದಷ್ಟೇ ಹೇಳಿಲ್ಲ, ಇನ್ನೂ ಹೆಚ್ಚು ಮಾತನಾಡಿದ್ದಾರೆ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟು ವಿಚಾರಣೆಯನ್ನು ಸೆ.28ಕ್ಕೆ ಮುಂದೂಡಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler