ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ವಿದ್ಯಾರ್ಥಿಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯ: DSS - Mahanayaka

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ವಿದ್ಯಾರ್ಥಿಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯ: DSS

cockroach protest
26/07/2026

ಮಂಗಳೂರು: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅವ್ಯವಹಾರಗಳ ವಿರುದ್ಧ ದೇಶದಾದ್ಯಂತ ವಿದ್ಯಾರ್ಥಿಗಳು, ಯುವಜನರು ಮತ್ತು ವಿವಿಧ ಸಂಘಟನೆಗಳು ನಡೆಸಿದ ನಿರಂತರ ಪ್ರಜಾಪ್ರಭುತ್ವ ಹೋರಾಟಕ್ಕೆ ಮಹತ್ವದ ಜಯ ಸಿಕ್ಕಿದೆ. ಈ ಹೋರಾಟದಿಂದ ಮೂಡಿದ ಸಾರ್ವಜನಿಕ ಒತ್ತಡಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ವಿದ್ಯಾರ್ಥಿ ಶಕ್ತಿಗೆ ಸಿಕ್ಕ ಐತಿಹಾಸಿಕ ಫಲಿತಾಂಶವಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ಅಭಿಪ್ರಾಯಪಟ್ಟಿದೆ.

ದಲಿತ ಸಂಘರ್ಷ ಸಮಿತಿಯ ಪ್ರಕಾರ, ಭಾರತದ ಸಂವಿಧಾನದ ಅನುಚ್ಛೇದ 19(1)(a) ಹಾಗೂ 19(1)(b) ಪ್ರಕಾರ ಪ್ರಜೆಗಳಿಗೆ ನೀಡಲಾಗಿರುವ ಶಾಂತಿಯುತ ಪ್ರತಿಭಟನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಿನಲ್ಲೇ ವಿದ್ಯಾರ್ಥಿಗಳು ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಈ ಹೋರಾಟವು ಕೇವಲ ಒಬ್ಬ ಸಚಿವರ ರಾಜೀನಾಮೆಗೆ ಸೀಮಿತವಾಗದೆ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರಾಷ್ಟ್ರದ ಗಮನಕ್ಕೆ ತಂದಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ನ್ಯಾಯ ಸ್ಥಾಪನೆಯಾಗಬೇಕು ಎನ್ನುವ ವಿದ್ಯಾರ್ಥಿ ಸಮುದಾಯದ ಧ್ವನಿಗೆ ದೊರೆತ ನೈತಿಕ ಗೆಲುವು ಇದಾಗಿದೆ.

ಇನ್ನು ಮುಂದೆ ನೀಟ್ ಸೇರಿದಂತೆ ಎಲ್ಲಾ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳು ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಮತ್ತು ಅವ್ಯವಹಾರರಹಿತವಾಗಿ ನಡೆಯುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸುಧಾರಣೆಗಳನ್ನು ಜಾರಿಗೆ ತರಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಎಲ್ಲಾ ತಪ್ಪಿತಸ್ಥರ ವಿರುದ್ಧ ಪಕ್ಷಪಾತವಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವುದೇ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಸಮಿತಿ ಒತ್ತಾಯಿಸಿದೆ.

ದೇಶದಾದ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಈ ಬೃಹತ್ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು, ಪೋಷಕರು ಹಾಗೂ ನಾಗರಿಕ ಸಂಘಟನೆಗಳಿಗೆ ದಲಿತ ಸಂಘರ್ಷ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಕಲಾ ಮಂಡಳಿ ಸಂಚಾಲಕ ಕಮಲಾಕ್ಷ ಬಜಾಲ್ ಮತ್ತು ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ. ರಘು ಎಕ್ಕಾರ್ ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ