56ನೇ ವಯಸ್ಸಿನಲ್ಲಿಯೂ ಹುಲಿಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ಧೀರ ಆದಿವಾಸಿ
29/05/2021
ಮೈಸೂರು: ಆದಿವಾಸಿಯೊಬ್ಬರು ಬರೀ ಕೈಯಲ್ಲಿ ಹುಲಿಯನ್ನು ಹೊಡೆದೋಡಿಸಿದ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶಕ್ಕೆ ಗೆಡ್ಡೆ ಗೆಣಸು ತರಲು ಹೋಗಿದ್ದ 56 ವರ್ಷ ವಯಸ್ಸಿನ ಗೋಳೋರು ಹಾಡಿಯ ನಿವಾಸಿ ರಾಜು ಎಂಬವರ ಮೇಲೆ ಏಕಾಏಕಿ ಹುಲಿ ದಾಳಿ ನಡೆಸಿದೆ. ಈ ವೇಳೆ ತಮ್ಮ ಹಿರಿಯ ವಯಸ್ಸಿನಲ್ಲಿಯೂ ರಾಜು ಅವರು ಹುಲಿಯೊಂದಿಗೆ ಸೆಣಸಾಟ ನಡೆಸಿದ್ದು, ಕೊನೆಗೆ ರಾಜು ಅವರ ವಿರುದ್ಧ ನಿಲ್ಲಲು ಸಾಧ್ಯವಾಗದೇ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ.
ಹುಲಿಯೊಂದಿಗೆ ಹೋರಾಟ ನಡೆಸಿದ್ದರಿಂದಾಗಿ ರಾಜು ಅವರು ತೀವ್ರವಾಗಿ ನಿತ್ರಾಣಗೊಂಡಿದ್ದಾರೆ. ಅವರ ಎದೆ ಹಾಗೂ ತೊಡೆಯ ಭಾಗಕ್ಕೆ ಹುಲಿ ಗಾಯ ಮಾಡಿದೆ. ಗಾಯದೊಂದಿಗೆ ಹೇಗೋ ಅವರು ಹಾಡಿಗೆ ಬಂದು ಸೇರಿದ್ದಾರೆ. ಅವರನ್ನು ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.