ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟದೇ ಇದ್ದಿದ್ದರೆ?! - Mahanayaka

ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟದೇ ಇದ್ದಿದ್ದರೆ?!

ambedkar
12/02/2024

ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರೇನಾದರೂ ಈ ದೇಶದಲ್ಲಿ ಹುಟ್ಟದೇ ಹೋಗಿದ್ದರೆ ದಲಿತರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿರುತ್ತಿತ್ತು. ಶತಶತಮಾನಗಳಿಂದ ಇದ್ದಂತಹ ಅಸ್ಪೃಶ್ಯತೆಯ ಕರಾಳ ಆಚರಣೆಯು ಇನ್ನೂ ಹೆಚ್ಚಾಗುತ್ತಿತ್ತು.

ಇಂದು ಭಾರತದಲ್ಲಿ ಕೋಟ್ಯಾಂತರ ದಲಿತರಿದ್ದಾರೆ. ಅವರೆಲ್ಲರಿಗೂ ವಿದ್ಯೆ ಕಲಿಯುವ ಅವಕಾಶ ನಿರಾಕರಿಸಲಾಗುತ್ತಿತ್ತು. ಹಾಗಾಗಿ ಕೋಟ್ಯಾಂತರ ದಲಿತರಲ್ಲಿ  ಒಬ್ಬನೇ ಒಬ್ಬ ವ್ಯಕ್ತಿ ವಿದ್ಯಾವಂತನಾಗಿರಲು ಸಾಧ್ಯವಿರುತ್ತಿರಲಿಲ್ಲ. ಇಡೀ ದೇಶದಲ್ಲಿ ಒಬ್ಬನೇ ಒಬ್ಬ ದಲಿತ ವ್ಯಕ್ತಿ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರಲು ಸಾಧ್ಯವಿರುತ್ತಿರಲಿಲ್ಲ. ದಲಿತರಿಗೆ ಮತದಾನ ಮಾಡುವ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸಲಾಗುತ್ತಿತ್ತು. ಹಾಗಾಗಿ ಇಡೀ ದೇಶದಲ್ಲಿ ಒಬ್ಬನೇ ಒಬ್ಬ ದಲಿತ ವ್ಯಕ್ತಿ ಗ್ರಾಮ ಪಂಚಾಯತಿ ಸದಸ್ಯ ಅಥವಾ ತಾಲ್ಲೂಕು ಪಂಚಾಯತ ಸದಸ್ಯ ಅಥವಾ ಜಿಲ್ಲಾ ಪಂಚಾಯತ ಸದಸ್ಯ ಅಥವಾ ವಿಧಾನಸಭಾ ಸದಸ್ಯ ಅಥವಾ ಲೋಕಸಭಾ ಸದಸ್ಯ ನಾಗಲು ಸಾಧ್ಯವೇ ಆಗುತ್ತಿರಲಿಲ್ಲ.  ಭಾರತದ ರಾಜಕೀಯ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ದಲಿತನಿಗೆ ಪ್ರವೇಶ ಸಿಗುತ್ತಿರಲಿಲ್ಲ.

ದಲಿತರಿಗೆ ಭೂಮಿ ಹೊಂದುವ ಅಧಿಕಾರ ನಿರಾಕರಿಸಲಾಗುತ್ತಿತ್ತು. ಹಾಗಾಗಿ ಭಾರತದ ಎಲ್ಲಾ ದಲಿತರೂ ಭೂರಹಿತರಾಗಿರುತ್ತಿದ್ದರು. ಸತ್ತಾಗ ಶವ ಸಂಸ್ಕಾರ ಮಾಡಲು ಸಹ ಜಾಗ ಸಿಗುತ್ತಿರಲಿಲ್ಲ. ದಲಿತರು ಯಾವುದೇ ತರಹದ ಉದ್ಯೋಗ ಮಾಡುವ ಹಾಗಿರಲಿಲ್ಲ. ಅಸ್ಪೃಶ್ಯರನ್ನು ಸಂತೆ, ಬಜಾರ್, ಜಾತ್ರೆ, ಹೋಟೆಲ್, ಸಿನಿಮಾ, ಮಂದಿರ, ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಹಡಗು ನಿಲ್ದಾಣ, ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗುತ್ತಿತ್ತು. ಅದೇ ರೀತಿ ಅಸ್ಪೃಶ್ಯರು ಕಾರುಗಳಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ , ವಿಮಾನಗಳಲ್ಲಿ, ಹಡಗುಗಳು ಸೇರಿದಂತೆ ಯಾವುದೇ ವಾಹನಗಳಲ್ಲಿ ಪ್ರಯಾಣವನ್ನು ನಿಷೇಧಿಸಲಾಗುತ್ತಿತ್ತು. ಹಾಗೂ ಅಸ್ಪೃಶ್ಯರು ಯಾವುದೇ ತರಹದ ಸಂಘ ಸಂಸ್ಥೆಗಳನ್ನು ಸ್ಥಾಪನೆ ಮಾಡಿಕೊಳ್ಳದ ಹಾಗೆ ನಿಷೇಧ ಹೇರಲಾಗುತ್ತಿತ್ತು.

ಉತ್ತಮ ಮನೆಗಳನ್ನು  ಕಟ್ಟಿಕೊಂಡು ವಾಸ ಮಾಡುವ ಹಾಗಿರಲಿಲ್ಲ. ಸ್ವಂತ ವಾಹನಗಳನ್ನು ಹೊಂದುವ ಹಾಗಿರಲಿಲ್ಲ. ಅಸ್ಪೃಶ್ಯ ಹೆಂಗಸರು ಚಿನ್ನ ಬೆಳ್ಳಿಯ ಆಭರಣಗಳನ್ನು ಧರಿಸುವ ಹಾಗಿರಲಿಲ್ಲ. ಒಟ್ಟಿನಲ್ಲಿ ಭಾರತದ ಎಲ್ಲಾ ದಲಿತರು ಭೂಮಿ ಇಲ್ಲದೆ, ಮನೆ ಇಲ್ಲದೆ, ವಿದ್ಯೆ ಇಲ್ಲದೆ, ಹಣ ಇಲ್ಲದೆ, ಅಧಿಕಾರ ಅಂತಸ್ತುಗಳಿಲ್ಲದೆ, ಎಲ್ಲಾ ನಾಗರಿಕ ಹಕ್ಕುಗಳಿಂದ ವಂಚಿತರಾಗಿ,  ನಿರ್ಗತಿಕರಾಗಿ, ಕೂಲಿ ಕಾರ್ಮಿಕರಾಗಿ ತಿನ್ನಲು ಅನ್ನವಿಲ್ಲದೆ ಅಲೆಮಾರಿಗಳಾಗಿ ಪ್ರಾಣಿಗಳಿಗಿಂತಲೂ ಹೀನಾಯವಾದ ಘೋರ ಬದುಕನ್ನು ಈ ದೇಶದಲ್ಲಿ ನಡೆಸಬೇಕಾಗಿತ್ತು.

ಡಾ.ಅಂಬೇಡ್ಕರ್ ರವರು ಕೇವಲ ಅಸ್ಪೃಶ್ಯರ ವಿಮೋಚನೆಯನ್ನಷ್ಟೇ ಮಾಡಲಿಲ್ಲ. ಜೊತೆಗೆ ಭಾರತದ ಇಡೀ ಶೋಷಿತ ಸಮುದಾಯದ, ಎಲ್ಲಾ ವರ್ಗಗಳ ಬಡವರ, ನಿರ್ಗತಿಕರ , ಕೂಲಿ ಕಾರ್ಮಿಕರ ಹಾಗೂ ಮಹಿಳೆಯರ ವಿಮೋಚನೆಯನ್ನು ಮಾಡಿದ್ದಾರೆ. ಅವರ ಪರವಾಗಿ ತಮ್ಮ ಜೀವನ ಪರ್ಯಂತ ಹೋರಾಟ ನಡೆಸಿದ್ದಾರೆ. ಅಂಬೇಡ್ಕರ್ ರವರ ಜೀವನವೆಂದರೆ:

 “ಪ್ರಾರಂಭದಲ್ಲಿ ಕಷ್ಟ ಮತ್ತು ಅಪಮಾನಗಳ ಜೀವನ,

ನಂತರ ಹೋರಾಟ ಮತ್ತು ಸಾಧನೆಯ ಜೀವನ

ಕೊನೆಗೆ ತ್ಯಾಗ ಮತ್ತು ಸಾರ್ಥಕತೆಯ ಜೀವನವಾಗಿದೆ”

ಕೃತಿ: ಡಾ.ಬಾಬಾಸಾಹೇಬ ಅಂಬೇಡ್ಕರ್ (ಎನ್.ಆರ್.ಶಿವರಾಮ್)

-ಅಜೀತ ಮಾದರ

ಇತ್ತೀಚಿನ ಸುದ್ದಿ