ಒತ್ತಡ ಹೆಚ್ಚಾದರೆ, ನಿಮ್ಮ ಮನೆಯಲ್ಲಿ ಪಾತ್ರೆ ತೊಳೆಯಿರಿ: ಸಂಶೋದಕರು ಹೀಗೆ ಹೇಳುತ್ತಿರುವುದೇಕೆ?
ಪ್ರತಿ ಮನೆಯಲ್ಲೂ ಪಾತ್ರೆ ತೊಳೆಯುವುದು ಒಂದು ಸವಾಲಿನ ಕೆಲಸ. ಬ್ಯಾಚಲರ್ಸ್ ಗಳಂತೂ ಉದ್ಯೋಗದ ನಿಮಿತ್ತ ಬೇರೆ ಊರುಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಂದರ್ಭಗಳಲ್ಲಿ ಪಾತ್ರೆ ತೊಳೆಯುವ ವಿಚಾರಕ್ಕೆ ತಮ್ಮ ಸಹೋದ್ಯೋಗಿಗಳ ಜೊತೆಗೆ ಜಗಳ, ಮಹಾ ಯುದ್ಧ ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಪಾತ್ರೆ ತೊಳೆಯುವುದು ಮನುಷ್ಯನ ಮನಸ್ಸಿನ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಲಿದೆ ಅನ್ನೋದನ್ನ ನಾವಿಂದು ತಿಳಿದುಕೊಳ್ಳೋಣ..
ಅಮೆರಿಕದ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ಗುಂಪು ನಡೆಸಿದ ಸಮೀಕ್ಷೆಯು ಪಾತ್ರೆ ತೊಳೆಯುವುದರಿಂದ ಆಗುವ ಬದಲಾವಣೆಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.
ನಿಮಗೆ ಆತಂಕ ಮತ್ತು ಒತ್ತಡ ಹೆಚ್ಚಾದರೆ, ಪಾತ್ರೆಗಳನ್ನು ತೊಳೆಯಿರಿ ಎಂದು ಈ ಅಮೆರಿಕದ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ಗುಂಪು ಹೇಳಿದೆ. ಯಾಕಂದ್ರೆ, ಪಾತ್ರೆ ತೊಳೆಯುವುದರಿಂದ ಮನುಷ್ಯನ ಒತ್ತಡ ನಿವಾರಣೆಯಾಗುತ್ತದೆಯಂತೆ!
ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ ಆಡಮ್ ಹ್ಯಾನ್ಲೆ ಅವರ ಪ್ರಕಾರ, ಹೆಚ್ಚಿನ ಜನರು ಪಾತ್ರೆಗಳನ್ನು ತೊಳೆಯುವಾಗ ಆ ಕೆಲಸದ ಬಗ್ಗೆ ತುಂಬಾ ಗಮನ ಹರಿಸುತ್ತಾರೆ. ಇದರ ಪರಿಣಾಮವಾಗಿ, ಅವರ ಒತ್ತಡದ ವಿಷಯಗಳು ಅವರ ಆಲೋಚನೆಯಿಂದ ದೂರ ಸರಿಯುತ್ತವೆ. ಇದು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಒಟ್ಟು 51 ವಿದ್ಯಾರ್ಥಿಗಳನ್ನು ದೀರ್ಘಕಾಲ ಗಮನಿಸಿದ ನಂತರ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಪ್ರಕಾರ, ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿದೆ.
ಪಾತ್ರೆಗಳನ್ನು ತೊಳೆಯುವಾಗ ಸಾಬೂನಿನ ವಾಸನೆ ಮತ್ತು ನೀರಿನ ತಾಪಮಾನವೂ ತುಂಬಾ ಉಪಯುಕ್ತವಾಗುತ್ತದೆ ಎಂದು ಪ್ರೊಫೆಸರ್ ಹ್ಯಾನ್ಲೆ ಹೇಳುತ್ತಾರೆ. ಇವು ಸುಲಭವಾಗಿ ಜನರ ಗಮನವನ್ನು ಸೆಳೆಯುತ್ತವೆ. ಪರಿಣಾಮವಾಗಿ, ಒತ್ತಡ, ಆತಂಕ ಅಥವಾ ಅವರ ಅಸಮಾಧಾನದ ಭಾವನೆಗಳು ಸುಲಭವಾಗಿ ಕಡಿಮೆಯಾಗುತ್ತವೆ. ಇದನ್ನು ಸುಮಾರು 27 ಪ್ರತಿಶತಕ್ಕೆ ಇಳಿಸಬಹುದು.
ಹೀಗಾಗಿ ಮಾನಸಿಕ ಆರೋಗ್ಯ ಸುಧಾರಣೆಗಾಗಿ ನೀವು ಪಾತ್ರೆ ತೊಳೆಯುವತ್ತ ಯೋಚಿಸಬಹುದು. ಸಾಮಾನ್ಯವಾಗಿ ಪುರುಷರು ಈ ಕೆಲಸ ಮಾಡುವುದು ಕಡಿಮೆ. ನಿಮಗೇನಾದರೂ ಮಾನಸಿಕ ಒತ್ತಡ ಹೆಚ್ಚಿದ್ದರೆ, ಇಂದಿನಿಂದ ನೀವು ಕೂಡಾ ಮನೆಯ ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡಬಹುದು, ಅದರಿಂದ ನೀವು ಬದಲಾವಣೆಯನ್ನು ಗಮನಿಸುತ್ತೀರಿ ಅಂತ ಸಂಶೋಧಕರು ಹೇಳುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: