ತಂದೆ ಅಲಿ ಖಮೇನಿ ಅಂತ್ಯಕ್ರಿಯೆಯಿಂದ ದೂರ ಉಳಿಯಲಿರುವ ಪುತ್ರ, ಇರಾನ್ ನಾಯಕ ಮೊಜ್ತಾಬಾ ಖಮೇನಿ: ಕಾರಣ ಏನು?
ಟೆಹ್ರಾನ್: ಇರಾನ್ ನ ನೂತನ ಸರ್ವೋಚ್ಚ ನಾಯಕ (Supreme Leader) ಮೊಜ್ತಾಬಾ ಖಮೇನಿ ಅವರು ತಮ್ಮ ತಂದೆ ಹಾಗೂ ಇರಾನ್ ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ. ಇಸ್ರೇಲ್ ನಿಂದ ಎದುರಾಗಿರುವ ಭದ್ರತಾ ಭೀತಿ ಹಾಗೂ ಕಣ್ಗಾವಲಿನ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಭಾರತದಲ್ಲಿರುವ ಇರಾನ್ ನಾಯಕರ ಪ್ರತಿನಿಧಿ ಆಯತೊಲ್ಲಾ ಹಕೀಮ್ ಇಲಾಹಿ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಇರಾನ್ ತೀವ್ರ ಸಂಘರ್ಷ ಎದುರಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು “ಮೊಜ್ತಾಬಾ ಖಮೇನಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿದೆ (marked for death)” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ, ಇರಾನ್ನ ನಾಯಕತ್ವದ ವಿರುದ್ಧ ಯಾವುದೇ ಬೆದರಿಕೆ ಬಂದರೆ ತಕ್ಷಣವೇ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು.
ಕಳೆದ ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಸುದೀರ್ಘ ಅವಧಿಯ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಹಾಗೂ ಮೊಜ್ತಾಬಾ ಅವರ ಪತ್ನಿ ಜಹ್ರಾ ಹದ್ದಾದ್-ಅಡೆಲ್ ಮೃತಪಟ್ಟಿದ್ದರು. ಭದ್ರತಾ ಕಾರಣಗಳಿಂದಾಗಿ ಮೊಜ್ತಾಬಾ ಅವರು ಈ ಹಿಂದೆ ತಮ್ಮ ಪತ್ನಿಯ ಅಂತ್ಯಕ್ರಿಯೆಗೂ ಹಾಜರಾಗಿರಲಿಲ್ಲ ಎಂದು ವರದಿಗಳು ತಿಳಿಸಿವೆ.
ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಜುಲೈ 4 ರಿಂದ ಜುಲೈ 9 ರವರೆಗೆ ಇರಾನ್ ಮತ್ತು ಇರಾಕ್ನ ವಿವಿಧ ಸ್ಥಳಗಳಲ್ಲಿ ನಡೆಸಲು ಇರಾನ್ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂಬ ಹಿನ್ನೆಲೆಯಲ್ಲಿ ನೂತನ ನಾಯಕ ಮೊಜ್ತಾಬಾ ಈ ಕಾರ್ಯಕ್ರಮಗಳಿಂದ ದೂರ ಉಳಿಯಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























