ಕೊಟ್ಟಿಗೆಹಾರ: ಹೆದ್ದಾರಿಯಲ್ಲೇ ಪಲ್ಟಿಯಾದ ಟ್ಯಾಕ್ಟರ್ — ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತ
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಟರ್ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳಸದಿಂದ ಮೂಡಿಗೆರೆಗೆ ಸಿಮೆಂಟ್ ಶೀಟ್‌ಗಳನ್ನು ಸಾಗಿಸುತ್ತಿದ್ದ ಟ್ಯಾಕ್ಟರ್, ದೇವನಗುಲ್ ಸಮೀಪ ತಲುಪಿದಾಗ ಹಠಾತ್ತಾಗಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಟ್ಯಾಕ್ಟರ್ ರಸ್ತೆಯ ಮಧ್ಯದಲ್ಲೇ ಮಗುಚಿ ಬಿದ್ದಿದೆ. ಅಪಘಾತದ ತೀವ್ರತೆಗೆ ಟ್ಯಾಕ್ಟರ್‌ನಲ್ಲಿದ್ದ ಸಿಮೆಂಟ್ ಶೀಟ್‌ಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿವೆ.
ಟ್ಯಾಕ್ಟರ್ ಪಲ್ಟಿಯಾದ ಸಂದರ್ಭದಲ್ಲಿ ಚಾಲಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಹೆದ್ದಾರಿಯ ಮಧ್ಯದಲ್ಲೇ ಟ್ಯಾಕ್ಟರ್ ಪಲ್ಟಿಯಾದ ಕಾರಣ, ಕೊಟ್ಟಿಗೆಹಾರದಿಂದ ಹೊರನಾಡು–ಶೃಂಗೇರಿ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ನಂತರ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಟ್ಯಾಕ್ಟರ್ ಹಾಗೂ ಸಿಮೆಂಟ್ ಶೀಟ್‌ಗಳನ್ನು ತೆರವುಗೊಳಿಸಲು ಸಹಾಯ ಮಾಡಿದರು. ಪ್ರಸ್ತುತ ವಾಹನ ಸಂಚಾರ ಎಂದಿನಂತೆ ಸುಗಮಗೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























