ಪ್ರತಿಭಾ ಕಾರಂಜಿಯ ಅನುದಾನ ಹೆಚ್ಚಳಕ್ಕೆ ಪ್ರಯತ್ನ: ಎಂ.ಪಿ.ಕುಮಾರಸ್ವಾಮಿ ಅಭಿಮತ - Mahanayaka
11:49 PM Wednesday 11 - December 2024

ಪ್ರತಿಭಾ ಕಾರಂಜಿಯ ಅನುದಾನ ಹೆಚ್ಚಳಕ್ಕೆ ಪ್ರಯತ್ನ: ಎಂ.ಪಿ.ಕುಮಾರಸ್ವಾಮಿ ಅಭಿಮತ

prathibha karanji
17/11/2022

ಕೊಟ್ಟಿಗೆಹಾರ:ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಬರುವ ಅನುದಾನವನ್ನು ಹೆಚ್ಚಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅನುದಾನ ಹೆಚ್ಚಳಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಬಂಕೇನಹಳ್ಳಿಯ ಸಕಿಪ್ರಾ ಶಾಲೆಯ ವತಿಯಿಂದ ಬಂಕೇನಹಳ್ಳಿಯಲ್ಲಿ ಸೋಮವಾರ ನಡೆದ ಮೂಡಿಗೆರೆ ತಾಲ್ಲೂಕು ಮಟ್ಟದ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮೂಡಿಗೆರೆ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಥಿಲಾವಸ್ಥೆಯಲ್ಲಿದ್ದ ಸುಮಾರು 13 ಶಾಲೆಗಳ 21 ಕೊಠಡಿಗಳನ್ನು ಜೀರ್ಣೋದ್ದಾರ ಮಾಡಲಾಗುತ್ತಿದೆ. 2 ಕೋಟಿ 60 ಲಕ್ಷ ಅನುದಾನ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಮಲೆನಾಡು ಭಾಗದಲ್ಲಿ ಆರ್‍ಸಿಸಿ ಕಟ್ಟಡದ ಬದಲಾಗಿ ಹೆಂಚಿನ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕೂಡ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಪ್ರತಿಭಾವಂತರು ಸರ್ಕಾರ ಶಾಲೆಗಳಿಂದ ಹೊರ ಹೊಮ್ಮುತ್ತಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಕೀಳಿರಿಮೆ ಬೇಡ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆ ಇದ್ದರೂ ಕೂಡ ಅದನ್ನು ಮೊದಲಿಗೆ ಗುರುತಿಸುವುದು ಶಿಕ್ಷಕರು. ಶಿಕ್ಷಕರು ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರ ಪ್ರತಿಭೆಗೆ ನಿರೆರೆದು ಪ್ರೋತ್ಸಾಹಿಸುತ್ತಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆಗೆ ವೇದಿಕೆ ಸಿಕ್ಕುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳ ಜ್ಞಾನ ಹೊರ ಹೊಮ್ಮಿಸಲು ಸೂಕ್ತ ವೇದಿಕೆಯಾಗಿದೆ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ವೇದಿಕೆ ಒದಗಿಸಿ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಮಕ್ಕಳಲ್ಲಿ ನಿಸರ್ಗ ಸಹಜವಾಗಿ ಬಂದ ಪ್ರತಿಭೆಯನ್ನು ಪೋಷಕರು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದರು.

ಬಂಕೇನಹಳ್ಳಿ ಸಕಿಪ್ರಾ ಶಾಲೆಯ ಮುಖ್ಯಶಿಕ್ಷಕ ಮಂಜಪ್ಪ ಮಾತನಾಡಿ ಗ್ರಾಮದ ಶಾಲೆಯ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಗ್ರಾಮಸ್ಥರೆಲ್ಲರೂ ಸೇರಿ ಹಬ್ಬದಂತೆ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಗ್ರಾಮಸ್ಥರು, ಶಿಕ್ಷಕರು, ಪೋಷಕರು ಸೇರಿದಂತೆ ಸರ್ವರ ಸಹಕಾರದಿಂದ ಶಾಲೆಯ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ಶೀಲಾ, ಸದಸ್ಯರಾದ ಶಶಿಕಲಾ, ಜಾಬೀರ್ ಹುಸೇನ್, ಕೋಮಲ, ಕವೀಶ್, ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜ್, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಆಶಾ, ಗ್ರಾಮದ ಮುಖಂಡರಾದ ನಾರಾಯಣಗೌಡ, ಸುರೇಶ್‍ಗೌಡ, ಬಾಪುದಿನೇಶ್, ಗಜೇಶ್, ಕನ್ನಡ ಹೋರಾಟಗಾರರಾದ ಹೊರಟ್ಟಿ ರಘು, ಶಿಕ್ಷಕರಾದ ಪುಟ್ಟರಾಜು, ಯಾಸ್ಮಿನ್, ಜೀಟಾಲೋಬೋ, ವೆಂಕಟೇಶ್ ನಾಯಕ್, ಜಯಂತ್ ನಾಯಕ್, ಚಂದ್ರಶೇಖರ್, ಮಾರ್ಗರೇಟ್, ಶಿವನಂಜೆಗೌಡ, ವೀಣಾ, ಲಲಿತಮ್ಮ, ಸೌಭಾಗ್ಯ, ಶೋಭಾ, ಪೂರ್ಣೇಶ್ ಮತ್ತಾವರ ಹಾಗೂ ಶಾಲೆಯ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ