ಸಿದ್ದರಾಮಯ್ಯನವರ ಕಾಲದಲ್ಲೂ ಮೀಸಲಾತಿ ಕೇಳಿದ್ದಕ್ಕೆ ಲಾಠಿ ಬೀಸಲಾಗಿತ್ತು! - Mahanayaka
10:10 AM Sunday 15 - December 2024

ಸಿದ್ದರಾಮಯ್ಯನವರ ಕಾಲದಲ್ಲೂ ಮೀಸಲಾತಿ ಕೇಳಿದ್ದಕ್ಕೆ ಲಾಠಿ ಬೀಸಲಾಗಿತ್ತು!

siddaramaiha
13/12/2022

ನ್ಯಾ.ಸದಾಶಿವ ಆಯೋಗದ ವರದಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪರಿಶಿಷ್ಟರ ಮೇಲೆ ರಾಜ್ಯ ಬಿಜೆಪಿ ಸರ್ಕಾರ ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಿದ ವಿಚಾರ ಇದೀಗ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಆದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ‘ಖಾಸಗಿರಂಗದಲ್ಲಿ ಮೀಸಲಾತಿಗೆ ಒತ್ತಾಯಿಸಿ, ಬೆಂಗಳೂರಿಗೆ ಆಗಮಿಸಿದ ಲಕ್ಷಾಂತರ ಸಂಖ್ಯೆಯ ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಲಾಠಿ ಬೀಸಿರುವುದನ್ನು ಸಿದ್ದರಾಮಯ್ಯನವರು ಮರೆತ್ತಿದ್ದಾರೆಯೇ ಅನ್ನೋ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.

03–02–2016ರಂದು ಬಹುಜನ ವಿದ್ಯಾರ್ಥಿ ಸಂಘ(ಭಾರತೀಯ ವಿದ್ಯಾರ್ಥಿ ಸಂಘ—BVS) ನೇತೃತ್ವದಲ್ಲಿ ಬೆಂಗಳೂರಿನಲ್ಲಿ  ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ನಡೆದಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ಅಟ್ಟಾಡಿಸಿ, ಅಮಾನವೀಯವಾಗಿ ಲಾಠಿ ಚಾರ್ಜ್ ಮಾಡಿದ್ದೇ ಅಲ್ಲದೇ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಫೆಬ್ರವರಿ 03, 2016 ರಂದು ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ”(GIM) ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಖಾಸಗಿ ರಂಗದಲ್ಲಿ ನಮಗೆ ಮೀಸಲಾತಿ ನೀಡಬೇಕು ಎಂದು ನ್ಯಾಯಯುತವಾದ, ಶಾಂತಿಯುತವಾದ ಪ್ರತಿಭಟನೆ ನಡೆಸುತ್ತಿದ್ದರು. ಈ ಹೋರಾಟವನ್ನು ಹತ್ತಿಕ್ಕಲು ಸಿದ್ದರಾಮಯ್ಯನವರ ಸರ್ಕಾರ ಪ್ರಯೋಗಿಸಿದ್ದು ಮಾತ್ರ ಲಾಠಿ ಚಾರ್ಜ್ ಅನ್ನೋ ಮಂತ್ರ. ಅದೂ ಅಂತಿಂಥ ಲಾಠಿ ಚಾರ್ಜ್ ಅಲ್ಲ, ವಿದ್ಯಾರ್ಥಿಗಳು ಕನಸಿನಲ್ಲೂ ಬೆಚ್ಚಿ ಬೀಳುವಂತಿತ್ತು.

ಸಿದ್ದರಾಮಯ್ಯನವರು ಸಂವಿಧಾನದ ತಿಳುವಳಿಕೆ ಉಳ್ಳವರು, ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸುತ್ತಾರೆ ಅನ್ನೋ ನಿರೀಕ್ಷೆಯೊಂದಿಗೆ ವಿದ್ಯಾರ್ಥಿಗಳು ಬಂದಿದ್ದರು. ಆದರೆ ಅಂದು ಸಿಕ್ಕಿದ್ದು ಮಾತ್ರ ಪೊಲೀಸರು ಲಾಠಿ ಏಟು, ಬೂಟಿನ ಒದೆ.  ಪ್ರತಿಭಟನೆಗೆ ಆಗಮಿಸಲೆಂದು ರೈಲು ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಭಯೋತ್ಪಾದಕರನ್ನು ಹಿಡಿಯುವಂತೆ ಹಿಡಿದು ಲಾಠಿ ಬೀಸಲಾಗಿತ್ತು. ವಿದ್ಯಾರ್ಥಿನಿಯರು ಅನ್ನೋದನ್ನೂ ನೋಡದೇ ಲಾಠಿ ಏಟು ನೀಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಸುಮಾರು 28 ಜನ ವಿದ್ಯಾರ್ಥಿಗಳನ್ನು ಜೈಲಿಗೆ ತಳ್ಳಲಾಯ್ತು. ಖಾಸಗಿ ರಂಗದಲ್ಲಿ ಮೀಸಲಾತಿ ಸಿಗುತ್ತದೆ ಎಂದು ಬಂದ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಂದು ನೀಡಿದ್ದು, ಬೂಟಿ ಏಟು, ಲಾಠಿ ಏಟು, ಜೈಲು ಎಂದು ಅಂದಿನ ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.

ಅಂದು ಸಿದ್ದರಾಮಯ್ಯನವರು ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ್ದರೆ, ಕನಿಷ್ಠ ಪಕ್ಷ ಪ್ರತಿಭಟಿಸಲು ಬಂದ ವಿದ್ಯಾರ್ಥಿಗಳಿಗೆ ಸರ್ಕಾರದ ಮೂಲಕ ಭರವಸೆಯನ್ನಾದರೂ ನೀಡಿದ್ದರೆ, ಇಂದು ಒಳ ಮೀಸಲಾತಿ ವಿಚಾರವಾಗಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆದಾಗ ಅವರು ವಿರೋಧಿಸುವುದರಲ್ಲಿ ಅರ್ಥ ಇತ್ತು. ಆದರೆ, ಕಾಂಗ್ರೆಸ್ ಸರ್ಕಾರ ಇರುವಾಗ ಏನು ಮಾಡಿದೆಯೋ ಅದನ್ನೇ, ಬಿಜೆಪಿ ಇಂದು ಮಾಡಿದೆ. ಒಂದು ವೇಳೆ ರಾಜ್ಯದಲ್ಲಿ ಇಂದು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಇದ್ದಿದ್ದರೂ, ದಲಿತರು ಪೊಲೀಸರ ಲಾಠಿ ಏಟು, ಬೂಟಿನ ಏಟು ತಿನ್ನುವುದು ತಪ್ಪುತ್ತಿರಲಿಲ್ಲ ಅನ್ನೋದು ವಾಸ್ತವ.

ಒಳ ಮೀಸಲಾತಿ ಬೇಡಿಕೆ ಅಲ್ಲ, ಪರಿಶಿಷ್ಟರ ಹಕ್ಕು:

ಒಳ ಮೀಸಲಾತಿ ಅನ್ನೋದು ಬೇಡಿಕೆ ಅಲ್ಲ. ಪರಿಶಿಷ್ಟರ ಹಕ್ಕು. ಸಾಮಾಜಿಕ ಅಸಮಾನತೆಯಿಂದ ನೊಂದಿರುವವರ ಸೌಲಭ್ಯ ಸವಲತ್ತುಗಳು ಕಂಡವರ ಪಾಲಾಗುತ್ತಿದೆ. ಇಂದು ಸಾಕಷ್ಟು ಮೇಲ್ವರ್ಗಗಳು ಪರಿಶಿಷ್ಟ ಜಾತಿಗೆ ಸಿಗಬೇಕಾದ ಸೌಲಭ್ಯಗಳು ನಮಗೂ ಬೇಕು ಎಂದು ಕೈ ಚಾಚಿ ನಿಂತಿವೆ. ಆದರೆ ಪರಿಶಿಷ್ಟರು ಅನುಭವಿಸುತ್ತಿರುವ ಅಸಮಾನತೆಯನ್ನು ಹಂಚಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಆದರೆ ಇವರನ್ನು ಮೇಲೆತ್ತುವಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ವಿಫಲವಾಗಿದೆ. ಈ ವೈಫಲ್ಯತೆ ಉದ್ದೇಶ ಪೂರ್ವಕ ವೈಫಲ್ಯತೆ ಅನ್ನೋದು ಜಗಜ್ಜಾಹೀರಾಗಿರುವ ವಿಚಾರವಾಗಿದೆ.

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜಾಣ ಸಿಎಂ:

ಸಿಎಂ ಬೊಮ್ಮಾಯಿ ಅವರು ತಮ್ಮ ಆಡಳಿತದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಈವರೆಗೆ ನಡೆಸಿಕೊಂಡು ಬಂದಿದ್ದಾರೆ.  ಕೋರ್ಟ್ ಆವರಣದಲ್ಲಿ ಇಟ್ಟಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ಎಂಬವರು ತೆರವುಗೊಳಿಸಿ ಉದ್ಧಟತನ ಮೆರೆದಿದ್ದರು. ಇವರ ವಿರುದ್ಧ ಎಲ್ಲ ಸಂವಿಧಾನ ಪರ ಸಂಘಟನೆಗಳು ಬೃಹತ್ ಹೋರಾಟ ನಡೆಸಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿ, ಕಾನೂನು ಕ್ರಮದ ಭರವಸೆ ನೀಡಿದ ಬೊಮ್ಮಾಯಿ ಅವರು ಜಿಲ್ಲಾ ನ್ಯಾಯಾಧೀಶರನ್ನು ಅಮಾನತ್ತು ಮಾಡುವ ಬದಲು ವರ್ಗಾವಣೆ ಮಾಡುವ ಮೂಲಕ ನೊಂದವರಿಗೆ ನ್ಯಾಯ ನೀಡಲು ವಿಫಲವಾದರು.

ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಆದರೆ, ಮೀಸಲಾತಿ ಪ್ರಮಾಣವನ್ನು 50%ಕ್ಕಿಂತ ಹೆಚ್ಚಿಸುವ ಪ್ರಸ್ತಾಪ ಇಲ್ಲವೆಂದು ಲೋಕಸಭೆಯಲ್ಲಿ ಕೇಂದ್ರ ಸಚಿವರೇ ಹೇಳುವ ಮೂಲಕ ಬೊಮ್ಮಾಯಿ ಸರ್ಕಾರ ಸುಳ್ಳು ಹೇಳುವ ಮೂಲಕ ಬೀಸುವ ದೊಣ್ಣೆಯಿಂದ ಪರಾಗುವ ತಂತ್ರವನ್ನು ಅನುಸರಿಸುತ್ತಿದೆ ಅನ್ನೋದು ಸ್ಪಷ್ಟವಾಗಿದೆ. ಡಬಲ್ ಇಂಜಿನ್ ಸರ್ಕಾರ ಇರುವ ಬಿಜೆಪಿಗೆ ಒಳ ಮೀಸಲಾತಿ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವುದು ಕಠಿಣವಾದ ಕೆಲಸ ಅಲ್ಲವೇ ಅಲ್ಲ. ಇನ್ನೊಂದೆಡೆ, ಒಳ ಮೀಸಲಾತಿಗಾಗಿ ಒತ್ತಾಯಿಸಿದ ಪರಿಶಿಷ್ಟರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ನಡೆಸುವ ಮೂಲಕ ರಾಜ್ಯ ಸರ್ಕಾರ ಪರಿಶಿಷ್ಟರಿಗೆ ತನ್ನ ಬಾಗಿಲು ಮುಚ್ಚಿದೆ ಅನ್ನೋ ಸಂದೇಶ ನೀಡಿದೆಯೇ? ಅನ್ನೋ ಪ್ರಶ್ನೆಗಳು ಕೇಳಿ ಬಂದಿದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಂದ ರಾಜ್ಯದಲ್ಲಿ ಪರಿಶಿಷ್ಟರಿಗೆ ನ್ಯಾಯ ಸಿಗುವುದು ಕನಸಿನ ಮಾತಾಗಿದೆ. ಹಾಗಾಗಿ ಪರ್ಯಾಯ ರಾಜಕೀಯ ಶಕ್ತಿ ರೂಪುಗೊಳ್ಳಬೇಕಾದ ಅಗತ್ಯವಿದೆ ಅನ್ನೋ ಚರ್ಚೆಗಳು ಆರಂಭವಾಗಿದೆ. ಪರಿಶಿಷ್ಟರು ತಮ್ಮ ಶಕ್ತಿಯನ್ನು ಈ JCB ಸರ್ಕಾರಕ್ಕೆ ತೋರಿಸದ ಹೊರತು, ಇವರು ಪರಿಶಿಷ್ಟರ ಪರವಾಗಿ ಕೆಲಸ ಮಾಡುವುದಿಲ್ಲ ಅನ್ನೋದು ಇದೀಗ ಪರಿಶಿಷ್ಟರಲ್ಲಿ ಕೇಳಿ ಬರುತ್ತಿರುವ ಭಾರೀ ಚರ್ಚೆಯಾಗಿದೆ. ಮೇಲ್ವರ್ಗಗಳನ್ನು ಸಂತೈಸಿಸಲು ಪರಿಶಿಷ್ಟರನ್ನು ಕಡೆಗಣಿಸುವುದು ಇನ್ನಾದರೂ ನಿಲ್ಲಬೇಕು. ಕೆಲವು ಜಾತಿಗಳಿಗೆ ಹೋರಾಟ ಮಾಡದೆಯೇ ಮೀಸಲಾತಿ ನೀಡುತ್ತೀರಿ! ಪರಿಶಿಷ್ಟರು ಲಾಠಿ ಏಟು ತಿಂದರೂ, ನಿಮ್ಮ ಮನ ಕರಗುವುದಿಲ್ಲ ಅನ್ನೋ ಬೇಸರದ ಮಾತುಗಳು ಇದೀಗ ಕೇಳಿ ಬರುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ