ವಕೀಲನ ಗುಂಡಿಟ್ಟು ಹತ್ಯೆ: ಕೃತ್ಯಕ್ಕೂ ಒಂದು ಗಂಟೆ ಮುಂಚೆ ಬಾಡಿಗೆಗಾಗಿ ನಡೆದಿತ್ತು ಜಗಳ! - Mahanayaka

ವಕೀಲನ ಗುಂಡಿಟ್ಟು ಹತ್ಯೆ: ಕೃತ್ಯಕ್ಕೂ ಒಂದು ಗಂಟೆ ಮುಂಚೆ ಬಾಡಿಗೆಗಾಗಿ ನಡೆದಿತ್ತು ಜಗಳ!

manjunath
19/10/2026

ಬೆಂಗಳೂರು: ನಗರದ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ತಡರಾತ್ರಿ ವಕೀಲರೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಣೆಗೆ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಕ್ಟೋಬರ್ 18ರ ರಾತ್ರಿ ಸುಮಾರು 11:30ರ ವೇಳೆಗೆ ಈ ಕೃತ್ಯ ನಡೆದಿದ್ದು, ಕೊಲೆಯಾದವರನ್ನು ವಕೀಲ ಮಂಜುನಾಥ್ ಎಂದು ಗುರುತಿಸಲಾಗಿದೆ.

ವೃತ್ತಿಯಲ್ಲಿ ವಕೀಲರಾಗಿದ್ದ ಮಂಜುನಾಥ್ ಅವರು ಕೋಟಿಗಟ್ಟಲೆ ಮೌಲ್ಯದ ಆಸ್ತಿ ಹಾಗೂ ವೈಟ್‌ಫೀಲ್ಡ್‌ ಭಾಗದಲ್ಲಿ ಹತ್ತಾರು ಎಕರೆ ಜಮೀನು ಹೊಂದಿದ್ದರು. ತಮ್ಮ ಜಮೀನಿನಲ್ಲಿದ್ದ ನೂರಕ್ಕೂ ಹೆಚ್ಚು ಶೆಡ್‌ಗಳನ್ನು ಅವರು ಬಾಡಿಗೆಗೆ ನೀಡಿದ್ದರು.

ಕೊಲೆಗೂ ಕೇವಲ ಒಂದು ಗಂಟೆ ಮುಂಚೆ, ಶೆಡ್‌ ಗಳ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಹಾಗೂ ಬಾಡಿಗೆದಾರರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ಗಲಾಟೆ ನಡೆದಿತ್ತು. ಈ ಗಲಾಟೆ ನಡೆದ ಕೆಲವೇ ಗಂಟೆಗಳಲ್ಲಿ ತಡರಾತ್ರಿ 11:30ರ ಸುಮಾರಿಗೆ ದುಷ್ಕರ್ಮಿಗಳು ಅವರ ಮನೆ ಬಳಿ ಬಂದಿದ್ದಾರೆ.

ಮನೆ ಬಾಗಿಲು ಬಡಿದು ಮಂಜುನಾಥ್ ಅವರನ್ನು ಹೊರಗೆ ಕರೆದಿದ್ದಾರೆ. ಮಂಜುನಾಥ್ ಬಾಗಿಲು ತೆರೆಯುತ್ತಿದ್ದಂತೆ, ದುಷ್ಕರ್ಮಿಗಳು ಏಕಾಏಕಿ ಅವರ ಹಣೆಗೆ ನೇರವಾಗಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರು ಮಧ್ಯರಾತ್ರಿ ಹಣ ಎಣಿಕೆ ಮಾಡುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ಬಿಹಾರ ಮೂಲದ ಇಬ್ಬರಿಂದ ಕೃತ್ಯ?

ಬಿಹಾರ ಮೂಲದ ಇಬ್ಬರು ವ್ಯಕ್ತಿಗಳು ಸ್ವಿಗ್ಗಿ (Swiggy) ಡೆಲಿವರಿ ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆಸ್ತಿ ಹಾಗೂ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಹಳೆ ವೈಷಮ್ಯದಿಂದ ಸುಪಾರಿ ನೀಡಿ ಈ ಕೊಲೆ ಮಾಡಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಹಂತಕರ ಪತ್ತೆಗಾಗಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler