ಮಾನಸ-ಸಿಕ್ರಂ, ಮೈಸೂರು ಜಿಲ್ಲಾ ಘಟಕ ವತಿಯಿಂದ ಕಾನೂನು ಸಲಹಾ ಶಿಬಿರ
ಮೈಸೂರು: ಮಾನಸ–ಸಿಕ್ರಂ, ಮೈಸೂರು ಜಿಲ್ಲಾ ಘಟಕದ ವತಿಯಿಂದ ಸೆ.14 ರಂದು ಮೈಸೂರು ಜಿಲ್ಲೆಯ, ನಂಜನಗೂಡು ತಾಲೂಕಿನ, ಕಳಲೆ ಗ್ರಾಮದಲ್ಲಿ ಕಾನೂನು ಸಲಹಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾನೂನು ಸಲಹಾ ಶಿಬಿರದಲ್ಲಿ ನಂಜನಗೂಡಿನ ವಕೀಲರಾದ ಮಹದೇವಸ್ವಾಮಿ ರವರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ತಮ್ಮ ಹಕ್ಕು ಮತ್ತು ರಕ್ಷಣೆಯನ್ನು ಖಾತ್ರಿಪಡಿಸಿರುವ ಕಾಯ್ದೆ ಕಾನೂನುಗಳನ್ನು ತಿಳಿಸಿದರು. ವರದಕ್ಷಿಣೆ ನಿಷೇಧ ಕಾಯ್ದೆ, ಮಾತೃತ್ವ ಸೌಲಭ್ಯ ಕಾಯ್ದೆ, ಗ್ರಾಹಕರ ರಕ್ಷಣಾ ಕಾಯ್ದೆ ಹಾಗೂ ಸಮಾನ ವೇತನ ಕಾಯ್ದೆಗಳ ಕುರಿತು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಸಂವಿಧಾನ ಬದ್ಧವಾಗಿ ಸ್ಥಾಪಿಸಿಕೊಳ್ಳಲಾಗಿರುವ ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸ್ವಯಂ ಸರ್ಕಾರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆಯನ್ನು ತಿಳಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರ, ಮಕ್ಕಳ ಮತ್ತು ಗ್ರಾಮದ ಅಭಿವೃದ್ಧಿಗೆ ಇರುವ ಯೋಜನೆಗಳು, ಅನುದಾನ, ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಗ್ರಾಮ ಪಂಚಾಯಿತಿಯಿಂದ ಮನೆಗಳ ನಿರ್ಮಾಣಕ್ಕೆ ಅನುದಾನ, ವಿದ್ಯಾರ್ಥಿ ವೇತನ, ಕುಡಿಯುವ ನೀರು, ಚರಂಡಿ ನಿರ್ವಹಣೆ, ನೈರ್ಮಲ್ಯ, ಮನೆಯ ಜಮೀನುಗಳಿಗೆ ಪೋಡಿ ಮಾಡಿಸಿಕೊಳ್ಳುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ನ್ಯಾಯಬೆಲೆ ಅಂಗಡಿಗಳಲ್ಲಿ, ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಹಾಗೂ ಇನ್ನಿತರ ದಿನಬಳಕೆಯ ವಸ್ತುಗಳ ಖರೀದಿಯಲ್ಲಿ ಹಳ್ಳಿಯ ಮುಗ್ಧ ಜನರಿಗೆ ಆಗುತ್ತಿರುವ ಮೋಸ ಮತ್ತು ಅನ್ಯಾಯವನ್ನು ಸೂಕ್ಷ್ಮವಾಗಿ ಸಭಿಕರಿಗೆ ಮನವರಿಕೆ ಮಾಡಿದರು. ಇಂತಹ ಮೋಸ ಮತ್ತು ವಂಚನೆಗಳಿಗೆ ಒಳಗಾಗದೆ ಎಲ್ಲರೂ ಧೈರ್ಯದಿಂದ ಪ್ರಶ್ನಿಸಬೇಕೆಂದರೆ ಕಾನೂನು ಜ್ಞಾನ ಅತ್ಯಾವಶ್ಯಕ ಎಂದು ತಿಳಿಸಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ಕುಶಾಲ್, ಇಂಗ್ಲಿಷ್ ಉಪನ್ಯಾಸಕರು ಹಾಗೂ ಸಂಶೋಧಕರು, ಮಾನಸಗಂಗೋತ್ರಿ ಮೈಸೂರು ಇವರು , ಡಾ.ಬಿ.ಆರ್ ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಮಹಿಳಾ ಹಕ್ಕುಗಳು ಮತ್ತು ಕಾನೂನು ವಿಷಯದ ಕುರಿತು ಮಾತನಾಡುತ್ತಾ, ಸಂವಿಧಾನ ಪೂರ್ವ ಹಾಗೂ ಪ್ರಸ್ತುತದಲ್ಲಿ ಮಹಿಳಾ ಹಕ್ಕುಗಳ ಸ್ಥಿತಿಗತಿಗಳನ್ನು ಅವಲೋಕಿಸಿದರು. ಅಲ್ಲದೆ, ಇತ್ತೀಚೆಗೆ ಭ್ರೂಣ ಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಇದನ್ನು ತಡೆಗಟ್ಟಲು ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಸಾಮಾನ್ಯ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣ ನೀಡಿ ಜೀವನದ ಮೌಲ್ಯಗಳನ್ನು ಬಾಲ್ಯದಿಂದಲೇ ಕಲಿಸಬೇಕೆಂದು ತಿಳಿಸಿದರು.
ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ದೊಡ್ಡದು ಆದುದರಿಂದ ಪೋಷಕರು ಹೇಗೆ ಇರುತ್ತಾರೆಯೋ ಅದೇ ರೀತಿ ಅವರನ್ನು ನೋಡಿ ಅವರ ಮಕ್ಕಳು ಸಹ ಇರುತ್ತಾರೆ. ಹಾಗಾಗಿ ಪೋಷಕರು ಬಾಲ್ಯದಿಂದಲೇ ಮಕ್ಕಳ ಮೇಲೆ ನಿಗಾವಹಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾಗಬೇಕೆಂದು ಸಲಹೆ ನೀಡಿದರು.
ಮಾನಸ –ಸಿಕ್ರಂ, ಮೈಸೂರು ಡಿ.ಆರ್.ಸಿ ಯ ಜಿಲ್ಲಾ ಸಂಯೋಜಕರಾದ ಡಾ.ದೇವರಾಜು ಎಸ್.ಎಸ್.ರವರು ಮಾತನಾಡುತ್ತಾ, ಸಿಕ್ರಂ ಸಂಸ್ಥೆಯ ಉದ್ದೇಶಗಳು, ಹಾಗೂ ಕಾನೂನು ಸಲಹಾ ಶಿಬಿರದ ಕುರಿತು ಸಂಕ್ಷಿಪ್ತ ಮಾಹಿತಿ ಹಿಡಿದರು. ಅಲ್ಲದೆ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. ಇವೆಲ್ಲವೂ ಸಹ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಇವೆ. ಇವುಗಳನ್ನು ಯಾರಾದರೂ ಉಲ್ಲಂಘಿಸಿದರೆ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ತಿಳಿಸಿದರು.
ಮಹಿಳಾ ಸಾಮಖ್ಯ ಸಂಘದ ಸದಸ್ಯೆಯಾದ “ಕಳಲೆ ಕಲ್ಯಾಣಿ” ಅವರು ಗೀತೆಯ ಮೂಲಕ ಮಹಿಳೆಯರು ಮತ್ತು ಸಂವಿಧಾನದ ಮಹತ್ವವನ್ನು ಪ್ರಸ್ತುತಪಡಿಸಿದರು.
ಕಳಲೆಯ ” ಮಹಾನಾಯಕ” ಯುವಕರ ಸಂಘದ ಅಧ್ಯಕ್ಷರಾದ ಕೃಷ್ಣರವರು ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಜನರು ಸಂವಿಧಾನ ಮತ್ತು ಕಾನೂನನ್ನು ತಿಳಿದುಕೊಂಡು ಅನುಸರಿಸುವುದಕ್ಕೆ ಬದಲಾಗಿ ಮೂಡನಂಬಿಕೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಅಲ್ಲದೆ ಇಂದಿನ ಯುವ ಸಮುದಾಯ ಶಿಕ್ಷಣದಿಂದ ವಿಮುಖರಾಗಿ ದುಶ್ಚಟಗಳಿಗೆ ದಾಸರಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದುದರಿಂದ ಯುವ ಸಮುದಾಯಕ್ಕೆ ಅಗತ್ಯ ನೈತಿಕ ಮಾರ್ಗದರ್ಶನ ನೀಡಿ ಕಾನೂನು ಅರಿವು ಮೂಡಿಸುವ ತುರ್ತು ಅಗತ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಗ್ರಾಮಸ್ಥರಾದ ನಂದೀಶ್ ರವರು ನಿರೂಪಿಸಿದರು. ಈ ಕಾನೂನು ಸಲಹಾ ಶಿಬಿರದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಗ್ರಾಮಸ್ಥರು ಗಮನಸೆಳೆದು ಗ್ರಾಮ ಪಂಚಾಯಿತಿ ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಕಳಲೆಯಲ್ಲಿ ಗ್ರಾಮ ಸಭೆ ನಡೆದಿಲ್ಲ ಇದರಿಂದಾಗಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗದೆ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದರು.
ಈ ಕಾನೂನು ಸಲಹಾ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾದ ಶಶಿಕುಮಾರಿ, ರಾಜಮ್ಮ ಗ್ರಾಮಸ್ಥರಾದ ಧರ್ಮ, ನಂದೀಶ ಹಾಗೂ ಗ್ರಾಮದ ಜನರು ಹಾಗೂ ವಿಶೇಷವಾಗಿ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾನೂನು ಸಲಹಾ ಶಿಬಿರದ ಉಪಯೋಗ ಪಡೆದುಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: