ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ ಚಿರತೆ ಮಾಡಿದ್ದೇನು ಗೊತ್ತಾ?
ಅಸ್ಸಾಂ: ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ ಚಿರತೆಯೊಂದು ಕಬ್ಬಿಣದ ಸೋಫಾದ ಕೆಳಗಡೆ ಸಿಲುಕಿಕೊಂಡ ಘಟನೆ ನಡೆದಿದ್ದು, ಚಿರತೆ ಹಾಸ್ಟೆಲ್ ಗೆ ಪ್ರವೇಶಿಸಿದ ಸಂದರ್ಭದಲ್ಲಿ 15 ಹುಡುಗಿಯರು ಹಾಸ್ಟೆಲ್ ನಲ್ಲಿದ್ದರು.
ಅಸ್ಸಾಂ ನ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ಬಿಗ್ ಕ್ಯಾಟ್ ಎಂದೇ ಕರೆಯಲ್ಪಡುವ ಚಿರತೆ ಹಾಸ್ಟೆಲ್ ಆವರಣಕ್ಕೆ ಪ್ರವೇಶಿಸಿದ್ದು, ಅಲ್ಲಿ ಕಬ್ಬಿಣದ ಸೋಫಾವೊಂದರ ಕೆಳಗೆ ಆಶ್ರಯಪಡೆದಿತ್ತು. ಹಾಸ್ಟೆಲ್ ನ ಬಾಲಕಿಯೊಬ್ಬಳು ಮೊದಲು ಚಿರತೆಯನ್ನು ಗಮನಿಸಿದ್ದಾಳೆ. ಮೊದಲು ಅದು ಯಾರದ್ದೋ ಬಟ್ಟೆ ಎಂದು ಆಕೆ ಅಂದುಕೊಂಡಿದ್ದಳಂತೆ, ಆದರೆ, ಆ ಬಳಿಕ ಚಲನೆಯನ್ನು ಗಮನಿಸಿ ಅದು ಚಿರತೆ ಎಂದು ಸ್ಪಷ್ಟಪಡಿಸಿಕೊಂಡಿದ್ದಾಳೆ.
ತಕ್ಷಣವೇ ಆಕೆ ಎಲ್ಲರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಹಾಸ್ಟೆಲ್ ನ ಬಾಗಿಲನ್ನು ಮುಚ್ಚಿ ಎಲ್ಲ ಹುಡುಗಿಯರು ಒಂದೇ ಕೋಣೆಯಲ್ಲಿ ಸುರಕ್ಷಿತವಾಗಿ ನಿಂತ ಪರಿಣಾಮ ಚಿರತೆಯ ದಾಳಿಗೆ ಯಾರೂ ತುತ್ತಾಗಲಿಲ್ಲ.
ಹಾಸ್ಟೆಲ್ ನಲ್ಲಿದ್ದ ಬಾಲಕಿಯರು ತಕ್ಷಣವೇ ಹಾಸ್ಟೆಲ್ ಮಾಲಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮತ್ತು ಬರುವ ಇಂಜೆಕ್ಷನ್ ಪ್ರಯೋಗಿಸಿ ಚಿರತೆಯನ್ನು ಹಿಡಿದಿದ್ದಾರೆ. ಈ ಕಾರ್ಯಾಚರಣೆಗೆ ಅರಣ್ಯ ಇಲಾಖಾ ಸಿಬ್ಬಂದಿ ಬರೋಬ್ಬರಿ 3 ಗಂಟೆಗಳನ್ನು ತೆಗೆದುಕೊಂಡರು.