ಅವ್ಯವಹಾರ ಆರೋಪ: ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಮೇಲೆ ಲೋಕಾಯುಕ್ತ ದಾಳಿ - Mahanayaka
8:28 PM Wednesday 9 - September 2026

ಅವ್ಯವಹಾರ ಆರೋಪ: ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಮೇಲೆ ಲೋಕಾಯುಕ್ತ ದಾಳಿ

lokayukta
09/09/2026

ದಕ್ಷಿಣ ಕನ್ನಡ: ವ್ಯಾಪಕ ಅವ್ಯವಹಾರ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಕಚೇರಿಗೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ಅಧಿಕಾರಿಗಳ ತಂಡವು ಕಚೇರಿಗೆ ಭೇಟಿ ನೀಡಿ, ವಿವಿಧ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿತು.

ಗ್ರಾಮ ಪಂಚಾಯತ್‌ಗೆ ಲೋಕಾಯುಕ್ತರು ದಾಳಿ ನಡೆಸಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು, ಪಂಚಾಯತ್‌ನಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಲೋಕಾಯುಕ್ತ ತಂಡಕ್ಕೆ ದೂರುಗಳ ಸುರಿಮಳೆಗೈದರು. ಪರವಾನಿಗೆ ನವೀಕರಣ ಸೇರಿದಂತೆ ಇತರೆ ಕೆಲಸಗಳಿಗೆ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಡಿವೈಎಸ್ಪಿ:

ಸಾರ್ವಜನಿಕರ ದೂರುಗಳನ್ನು ಆಲಿಸಿದ ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿ ಅವರು ಪಂಚಾಯತ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಅರ್ಜಿಗಳನ್ನು ಸ್ವೀಕರಿಸಿ ಅದಕ್ಕೆ ಬೇಕಾದ ಹಿಂಬರಹ ನೀಡುವುದು ನಿಮ್ಮ ಕರ್ತವ್ಯ. ಪಿಡಿಒ ಹೇಳಲಿಲ್ಲ ಎಂಬ ಕಾರಣಕ್ಕೆ ಅರ್ಜಿಗಳನ್ನು ಸ್ವೀಕರಿಸದೆ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ದೂರುದಾರರ ಬಳಿಯಿದ್ದ ಅರ್ಜಿಗಳನ್ನು ತಕ್ಷಣವೇ ಆನ್‌ ಲೈನ್‌ನಲ್ಲಿ ಅ ಪ್‌ಲೋಡ್ ಮಾಡಿ ಹಿಂಬರಹ ನೀಡುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಿಡಿಒ ವಿರುದ್ಧ ಗಂಭೀರ ಆರೋಪ:

ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನಲ್ಲಿ ಪಿಡಿಒ ಸೂಚನೆ ಇಲ್ಲದೆ ಸಿಬ್ಬಂದಿ ಯಾವುದೇ ಕೆಲಸ ಮಾಡುತ್ತಿಲ್ಲ. ಲಂಚ ನೀಡಿದರೆ ಮಾತ್ರ ಕೆಲಸ ಮಾಡಿಕೊಡಲಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದರು. ಈ ಭ್ರಷ್ಟಾಚಾರದಲ್ಲಿ ಪಿಡಿಒ ಜೊತೆಗೆ ಕೆಲ ಸಿಬ್ಬಂದಿ, ಮಾಜಿ ಗ್ರಾ.ಪಂ. ಸದಸ್ಯರು ಹಾಗೂ ಓರ್ವ ಉದ್ಯಮಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು. ಲೋಕಾಯುಕ್ತ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಭಾರ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಕಚೇರಿಯಲ್ಲಿ ಗೈರುಹಾಜರಾಗಿರುವುದು ತಿಳಿದುಬಂದಿದೆ.

ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಡಿವೈಎಸ್ಪಿ ಗಾನ ಕುಮಾರಿ, ಸಾರ್ವಜನಿಕರ ಎಲ್ಲ ದೂರುಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti