ಮದ್ಯದಂಗಡಿ ವಿರುದ್ಧ ತಿರುಗಿ ಬಿದ್ದ ಇಡೀ ಗ್ರಾಮ: ಕೊಲ್ಲಮೊಗ್ರದಲ್ಲಿ ತೀವ್ರ ಪ್ರತಿಭಟನೆ
ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಕೊಲ್ಲಮೊಗ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಅಕ್ರಮ ಮದ್ಯದಂಗಡಿ ತೆರೆದಿರುವ ಬಗ್ಗೆ ಪ್ರತಿಭಟನಾ ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಯೂರ ಕಲಾ ಮಂದಿರ ಕೊಲ್ಲಮೊಗ್ರದಲ್ಲಿಂದು ನಡೆಯಿತು.
ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ಮಹೇಶ್ ರೈ ಮೇನಾಲ ಮಾತನಾಡಿ ಮದ್ಯದಂಗಡಿಗೆ ಸಂಬಂಧಪಟ್ಟವರು ನಮ್ಮ ಭಾವನೆಗಳನ್ನು ಒಡೆದು, ನಮ್ಮಲ್ಲಿ ಬಿರುಕು ಉಂಟು ಮಾಡುವಂತೆ ಮಾಡಿ ಹೋರಾಟಕ್ಕೆ ಇಳಿದಂತೆ ಮಾಡಬಹುದು. ಅದಕ್ಕೆ ನಾವ್ಯಾರು ಕಿವಿಗೊಡಬಾರದು. ಇಂದು ಮತ್ತು ಈ ಹಿಂದೆ ಹೋರಾಟದಲ್ಲಿ ಭಾಗವಹಿಸಿದವರೆಲ್ಲರೂ ಒಟ್ಟಾಗಿ ನಿಂತು ಹೋರಾಟದ ನೇತೃತ್ವ ಪಡೆದುಕೊಂಡವರನ್ನು ಬಿಡದೆ ಮುಂದೆಯೂ ಪಾಲ್ಗೊಳ್ಳಬೇಕು ಎಂದರಲ್ಲದೇ ಅಜ್ಜಾವರದಲ್ಲಿ ಓಪನ್ ಆದ ಮದ್ಯದಂಗಡಿ ಬಂದ್ ಮಾಡುವ ಬಗ್ಗೆ ನಡೆಯುತ್ತಿರುವ ಹೋರಾಟದ ಬಗ್ಗೆಯೂ ವಿವರಿಸಿದರು. ಹೋರಾಟದ ಸಂದರ್ಭ ಅನೇಕ ಟೀಕೆಗಳನ್ನು ಎದುರಿಸಿಕೊಂಡು ನಾವು ಯಶಸ್ವಿಯಾಗಬೇಕು. ಅಬಕಾರಿಯವರು ಗ್ರಾಮ ಪಂಚಾಯತ್ ಗೆ ತಿಳಿಸದೆ ಓಪನ್ ಆದ ಮದ್ಯದಂಗಡಿಯನ್ನು ಅವರಿಗೆ ತಿಳಿಯದಂತೆ ಬಂದ್ ಮಾಡಿಸುತ್ತೇವೆ ಎಂದರು. ವೇದಿಕೆಯಲ್ಲಿದ್ದ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಹಿಮ್ಮತ್ ಕೆ.ಸಿ. ಮಾತನಾಡಿ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯಬೇಕಾದರೆ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸುವ ಕಾರ್ಯ ನಡೆಯಬೇಕು. ಇಲ್ಲದಿದ್ದರೆ ಗ್ರಾ.ಮದ ಆರೋಗ್ಯ, ನೆಮ್ಮದಿ ಎಲ್ಲವೂ ಹಾಳಾಗುತ್ತದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿ ಅಧ್ಯಕ್ಷ ಮಾಧವ
ಚಾಂತಾಳ ವಹಿಸಿದ್ದರು. ಪ್ರಸ್ತಾವಿಕವಾಗಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಪಿ. ಗಿರಿಧರ ಮಾತನಾಡಿದರು.
ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಅನೇಕರನ್ನು ಮದ್ಯಮುಕ್ತರನ್ನಾಗಿಸಿ ಊರನ್ನು ಸುಭೀಕ್ಷೆ ಮಾಡಬೇಕೆಂದು ಹೊರಟಿದ್ದರು. ಅದರಂತೆ ಇಲ್ಲಿಯೂ 2 ಸಲ ಮದ್ಯವರ್ಜನ ಶಿಬಿರಗಳಾಗಿದೆ. ಈ ಮೂಲಕ ಅನೇಕ ಕುಟುಂಬಗಳು ಹೊಸ ಜೀವನ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಇಲ್ಲಿ ಮದ್ಯದಂಗಡಿ ತೆರೆದ ಕಾರಣ ಮತ್ತೆ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುಂತಾಗಬಹುದೆಂಬ ಆತಂಕ ಎಲ್ಲರಲ್ಲೂ ಇದೆ. ಊರವರ ವಿರೋಧ ಕಟ್ಟಿಕೊಂಡು ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂಬುದನ್ನು ಅವರು ಯೋಚನೆ ಮಾಡಬೇಕಿತ್ತು. ನೀವಾಗಿಯೇ ತೆರೆದ ಮದ್ಯದಂಗಡಿಯನ್ನು ಪರ್ಮನೆಂಟ್ ಗಿ ನೀವಾಗಿಯೇ ಮುಚ್ಚಿಸಿದರೆ ನಿಮಗೆ ಊರವರ ಮತ್ತು ಎಲ್ಲರ ಗೌರವ ಹೆಚ್ಚಾಗುತ್ತದೆ. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಆಗದಿದ್ದರೆ ಈ ಭಾಗದವರಿಗೆ ತೊಂದರೆ ಎಂದು ಹೇಳಿದರು.
ಸಭೆಯ ಬಳಿಕ ಮೆರವಣಿಗೆಯಲ್ಲಿ ಸಾಗಿ ಪಂಚಾಯತ್ ನಲ್ಲಿ ಮದ್ಯದಂಗಡಿ ನಿಲ್ಲಿಸುವಂತೆ ಮನವಿ ನೀಡಲಾಯಿತು. ಅದಕ್ಕೂ ಮೊದಲು ಕೊಲ್ಲಮೊಗ್ರ ಮುಖ್ಯ ಪೇಟೆಯಲ್ಲಿ ಪ್ರತಿಕೃತಿಯೊಂದನ್ನು ಸುಡಲಾಯಿತು. ಮೆರವಣಿಗೆ ಸಾಗುವ ಸಂದರ್ಭ ಮದ್ಯದಂಗಡಿ ಮುಚ್ಚಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka