“ಮಹಾನಾಯಕ” ಹೆಸರಿನಲ್ಲಿ ಕ್ಯಾಂಟೀನ್ ತೆರೆದ ಯುವಕ
ಹುಬ್ಬಳ್ಳಿ: ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕಥೆ ಆಧರಿತ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಾಮಾಜಿಕ ಬದಲಾವಣೆಗಳಾಗುತ್ತಿವೆ.
ಒಂದು ಕಾಲದಲ್ಲಿ ತಮ್ಮ ಜಾತಿಯನ್ನು ಹೇಳಿಕೊಳ್ಳಲು ಕೂಡ ಹೆದರುತ್ತಿದ್ದವರು. ಇದೀಗ ಇಡೀ ಸಮಾಜದೆದುರು ತಮ್ಮ ಜಾತಿಯ ಹೆಸರನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ದೇಶಕ್ಕೆ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಂಶಸ್ಥರು ನಾವು ಎಂದು ಎದೆ ಉಬ್ಬಿಸಿ ಹೇಳುತ್ತಿದ್ದಾರೆ. ಇದೀಗ ತಮ್ಮ ಎಲ್ಲ ಕೆಲಸ ಕಾರ್ಯಗಳಿಗೂ ಮಹಾನಾಯಕ ಎನ್ನುವ ಹೆಸರನ್ನೇ ಇಡುತ್ತಿದ್ದು, ಇದೀಗ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ನೊಂದ ಸಮುದಾಯ ಸಾಗಿದೆ.
ಈಗಾಗಲೇ ಮಹಾನಾಯಕ ಎನ್ನುವ ಹೆಸರಿನಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಿವೆ. ಕ್ರಿಕೆಟ್ ಪಂದ್ಯಾಟಗಳಿಗೆ “ಮಹಾನಾಯಕ ಟ್ರೋಫಿ” ಎಂದು ನೀಡಲಾಗುತ್ತಿದೆ. ವಿವಿಧ ಅಂಗಡಿಗಳಿಗೆ ಮಹಾನಾಯಕ ಎಂಬ ಹೆಸರನ್ನು ನೀಡಲಾಗಿದೆ. ಈ ನಡುವೆ ಗದಗ ಜಿಲ್ಲೆಯ ಯುವಕರೊಬ್ಬರು ಚಿಕ್ಕದಾದ ಮೊಬೈಲ್ ಕ್ಯಾಂಟೀನ್ ತೆರೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯುವಕಗೆ ಅಭಿನಂದನೆಯ ಮಹಾಪೂರ ಹರಿದು ಬಂದಿದೆ.
ಮಹಾನಾಯಕ ಧಾರವಾಹಿಯಲ್ಲಿ ಬಾಲ ಭೀಮ ಹೇಳುವಂತೆ “ಬದಲಾವಣೆ ನಮ್ಮಿಂದಲೇ ಆಗಬೇಕು” ಎನ್ನುವತ್ತ ಶೋಷಿತ ಸಮುದಾಯಗಳು ಸಾಗುತ್ತಿವೆ. ನಮಗಾಗಿ ಯಾರೂ ಬದಲಾಗುವುದಿಲ್ಲ, ನಾವು ಬದಲಾದರೆ ಸಮಾಜ ಬದಲಾಗುತ್ತದೆ ಎನ್ನುವ ಸತ್ಯವನ್ನು ಸಮುದಾಯ ಕಂಡುಕೊಂಡಿದೆ.