ಇಂದಿಗೆ ಹೆಚ್ಚು ಪ್ರಸ್ತುತವಾಗಿರುವ ಮಹಾರ್ ಸಮುದಾಯವನ್ನುದ್ದೇಶಿಸಿ ಅಂಬೇಡ್ಕರರು ಹೇಳಿದ ಆ ಮಾತುಗಳು! - Mahanayaka

ಇಂದಿಗೆ ಹೆಚ್ಚು ಪ್ರಸ್ತುತವಾಗಿರುವ ಮಹಾರ್ ಸಮುದಾಯವನ್ನುದ್ದೇಶಿಸಿ ಅಂಬೇಡ್ಕರರು ಹೇಳಿದ ಆ ಮಾತುಗಳು!

dr b r ambedkar
05/05/2022

  • ರಘೋತ್ತಮ ಹೊ.ಬ
1941 ಮಾರ್ಚ್ 28 ರಂದು ಬಾಬಾಸಾಹೇಬ್ ಅಂಬೇಡ್ಕರ್ ರವರು ಬಾಂಬೆಯ “ಭಟ್ ಹೈಸ್ಕೂಲ್ ಸಭಾಂಗಣ”ದಲ್ಲಿ ತನ್ನ ಸಮುದಾಯ ಅಂದರೆ ಮಹಾರ್ ಸಮುದಾಯದ ಹಣಕಾಸು ಪರಿಸ್ಥಿತಿ ಕುರಿತು ಮಾತನಾಡುತ್ತಾರೆ. ಮುಖ್ಯವಾಗಿ ಮಹಾರ್ ಸಮುದಾಯದ ಸಮುದಾಯದ ಸದಸ್ಯರು ಮಾಡಿಕೊಂಡಿದ್ದ “ಸಮುದಾಯದ ಪಂಚಾಯತಿ” ಕುರಿತು ಅವರು ಅಂದು ಮಾತಾಡುತ್ತಾರೆ. ತಮ್ಮ ಸಮುದಾಯದ ಆ ಪಂಚಾಯತಿ ಸದಸ್ಯರ ಕುರಿತು ಅವರಿಗೆ ಅಂದು ಆಕ್ರೋಶವಿತ್ತು. ಯಾಕೆಂದರೆ ಸಮುದಾಯದಿಂದ ಹಣ ಸಂಗ್ರಹಿಸುತ್ತಿದ್ದ ಪಂಚಾಯತಿಯ ಆ ಸದಸ್ಯರು ಆ ಹಣವನ್ನು ಸಮುದಾಯದ ಏಳಿಗೆಗೆ ಖರ್ಚು ಮಾಡದೆ ಸಾರಾಯಿ ಕುಡಿಯಲು ಬಳಸುತ್ತಿದ್ದರು. ಆ ಸಮಯದಲ್ಲಿ ಸರ್ಕಾರ ಸಾರಾಯಿ ನಿಷೇಧಿಸಿದಾಗ ಸಾರಾಯಿ ಸಿಗದೆ ಸದಸ್ಯರು ಆ ಹಣವನ್ನು ಬತ್ತಾಸು (ಒಂದು ಬಗೆಯ ಸಿಹಿ) ತಿನ್ನಲು ಬಳಸುತ್ತಿದ್ದರು.
ಇದನ್ನು ತಿಳಿದ ಅಂಬೇಡ್ಕರ್ ರು ಸಭೆಯಲ್ಲಿ ಅಂದು ಮಾತಾಡುತ್ತ “ಸಮುದಾಯದ ಹಿರಿಯ ಸದಸ್ಯರೇ ಮತ್ತು ಯಜಮಾನರುಗಳೇ, ನಿಮಗೆ ಏನಾಗಿದೆ? ಜೀವನಕ್ಕಾಗಿ ನಮ್ಮ ಸಮುದಾಯ ಇಂದು ಇತರೆ ಸಮುದಾಯದೊಡನೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ‌. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾಕೆ ಹೀಗೆ ನೀವು ಚಿಕ್ಕ ಮಕ್ಕಳ ಥರ ವರ್ತಿಸುತ್ತಿದ್ದೀರಿ? ಸಮುದಾಯದ ಸಾರ್ವಜನಿಕ ಹಣದಿಂದ ಯಾಕೆ ಹೀಗೆ ಸಿಹಿ ಖರೀದಿಸಿ ತಿನ್ನುತ್ತಿದ್ದೀರಿ? ಮಕ್ಕಳ ರೀತಿಯ ನಿಮ್ಮ ಇಂತಹ ವರ್ತನೆ ಬಿಟ್ಟು ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಗೆ ಗಂಭೀರವಾಗಿ ತೊಡಗಿಸಿಕೊಳ್ಳದಿದ್ದಲ್ಲಿ ನಮ್ಮ ಪರಿಸ್ಥಿತಿ ಈಗ ಏನಿದೆಯೊ ಅದಕ್ಕಿಂತ ತಳ ಮಟ್ಟಕ್ಕೆ ಕುಸಿಯಲಿದೆ” ಎನ್ನುತ್ತಾರೆ.
ಈ ಸಮಯದಲ್ಲಿ ಮುಂದುವರಿದ ಜಾತಿಗಳ ಉದಾಹರಣೆ ಕೊಡುವ ಅವರು “ಮುಂದುವರಿದ ಜಾತಿಗಳಲ್ಲಿ ಜನ, ಅದರಲ್ಲೂ ಕೆಲವು ವ್ಯಕ್ತಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಹೊಗಳಿಕೆ ಬಯಸದೆ ಜೀವನ ಪೂರ್ತಿ ತಮ್ಮ ಸಮುದಾಯದ ಶೈಕ್ಷಣಿಕ ಏಳಿಗೆಗೆ, ಸಾಮಾಜಿಕ ಸಂಸ್ಥೆಗಳನ್ನು ನಡೆಸಲು ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಆದರೆ ನೀವು?” ಎಂದು ಬಾಬಾಸಾಹೇಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮುಂದುವರಿದು ಯುವಕರನ್ನು ಕುರಿತು ಮಾತಾಡುವ ಅವರು “ಶಿಕ್ಷಣ ಪಡೆದ ಸಮುದಾಯದ ಯುವಕರು ನಗರಸಭೆ, ಪುರಸಭೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನ ಗಿಟ್ಟಿಸಲು ಹವಣಿಸುತ್ತಾರೆ. ಇದು ಎಲ್ಲರಿಗೂ ಸಿಗುವುದಿಲ್ಲ. ಇಂತಹ ಸ್ಥಾನಗಳು ಸಿಗದಿದ್ದರೆ ಅಂತಹವರು ತಮ್ಮ ಸಾರ್ವಜನಿಕ ಜೀವನವನ್ನೇ ತ್ಯಜಿಸುತ್ತಾರೆ, ಸಮುದಾಯದಿಂದ ಸಂಪೂರ್ಣ ವಿಮುಖರಾಗುತ್ತಾರೆ ” ಎನ್ನುತ್ತಾರೆ.
ಹಾಗೆ ಹೇಳುತ್ತಾ ಬಾಬಾಸಾಹೇಬರು “ಇನ್ನೊಂದು ಬಗೆಯ ಜನರಿದ್ದಾರೆ. ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ ಒಂದು ಸಾರಿ ಒಂದು ಬಗೆಯ ಕೆಲಸ ಮಾಡುತ್ತಾರೆ, ಕೆಲ ಕಾಲ ಅದನ್ನು ಮುಂದುವರಿಸಿ ಮತ್ತೊಂದು ಸಾರಿ ಮತ್ತೊಂದು ಬಗೆಯ ಕೆಲಸದಲ್ಲಿ ತೊಡಗುತ್ತಾರೆ. ಕೆಲ ಸಮಯದ ನಂತರ ಮಗದೊಂದು ಸಂಸ್ಥೆಗೆ ಜಂಪ್ ಆಗುತ್ತಾರೆ. ಯಾವುದೇ ಕೆಲಸವನ್ನು ಸ್ಥಿರವಾಗಿ ಮಾಡದ ಅಂತಹವರು ತಾವು ಮಾಡುವ ಸಂಘ ಸಂಸ್ಥೆಗಳ ಕೆಲಸಗಳನ್ನು ಅರ್ಧಕ್ಕೆ ಕೈಬಿಟ್ಟು ಇಡೀ ಸಮುದಾಯವನ್ನು ದಿಕ್ಕುತಪ್ಪಿಸುತ್ತಾರೆ, ಗೊಂದಲದ ಪರಿಸ್ಥಿತಿಗೆ ದೂಡುತ್ತಾರೆ” ಎನ್ನುತ್ತಾರೆ.(Babasaheb Ambedkar writings, Vol 17, part 3, Pp.222)
ಅಂದಹಾಗೆ ಬಾಬಾಸಾಹೇಬ್ ಅಂಬೇಡ್ಕರರು ಅಂದು ಅಂದರೆ 1941 ಮಾರ್ಚ್ 28 ರಂದು ಹೇಳಿರುವ ಮಾತುಗಳು, ಇಂದು ಏನಾಗಿದೆ ಎಂದು ನಾವು ಶೋಷಿತ ಸಮುದಾಯಗಳ ಜನರು ಯೋಚಿಸಬೇಕಾಗುತ್ತದೆ‌‌. ಯಾಕೆಂದರೆ ಬಾಬಾಸಾಹೇಬರು ಅಂದು ಹೇಳಿರುವ ರೀತಿಯೇ ಇಂದು ಯುವಕರು ವಿವಿಧ ರಾಜಕೀಯ ಸ್ಥಾನ ಮಾನಗಳಿಗೆ ಹವಣಿಸುತ್ತ ಸಮುದಾಯದ ಹಿತ ಕಡೆಗಣಿಸುತ್ತಿದ್ದಾರೆ. ಮದ್ಯಪಾನವಂತು ಹೇಳತೀರದಂತಿದೆ. ಬಾಬಾಸಾಹೇಬ್ ಅಂಬೇಡ್ಕರರ ಕಾಲದಲ್ಲಿ ಹಿರಿಯರು ಅದಕ್ಕೆ ದಾಸರಾಗಿದ್ದರೆ ಇಂದು ಹಿರಿ ಕಿರಿಯರೆನ್ನದೆ, ನೌಕರರೆನ್ನದೆ ಎಲ್ಲರೂ ಅದಕ್ಕೆ ದಾಸರಾಗಿದ್ದಾರೆ. ಸಂಘ ಸಂಸ್ಥೆಗಳು ಮತ್ತು ರಾಜಕೀಯ ಮುಖಂಡರ ಕತೆಯಂತು ಒಮ್ಮೆ ಈ ಪಕ್ಷ ಈ ಸಿದ್ಧಾಂತ, ಒಮ್ಮೆ ಆ ಪಕ್ಷ ಆ ಸಿದ್ಧಾಂತ ಎಂದು ಇಡೀ ಸಮುದಾಯವನ್ನು ತಮ್ಮ ಸ್ವಾರ್ಥಕ್ಕಾಗಿ ದಿಕ್ಕುತಪ್ಪಿಸುತ್ತಿದ್ದಾರೆ ಗೊಂದಲದ ಪರಿಸ್ಥಿತಿಗೆ ತಳ್ಳುತ್ತಿದ್ದಾರೆ‌. ಈ ನಿಟ್ಟಿನಲ್ಲಿ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಗಾಗಿ ಯಾರು ತೊಡಗಿಸಿಕೊಳ್ಳುತ್ತಿದ್ದಾರೆ? ಅದರಲ್ಲೂ ಸಮುದಾಯದ ಹಣಕಾಸು ಪರಿಸ್ಥಿತಿ ಭೀಕರವಾಗಿದೆ ಇದರ ಕಾಳಜಿ? ಬಾಬಾಸಾಹೇಬ್ ಅಂಬೇಡ್ಕರರು ಮಹಾರ್ ಸಮುದಾಯದ ಪಂಚಾಯತಿ ಸದಸ್ಯರನ್ನು ಉದ್ದೇಶಿಸಿ ಹೇಳಿರುವ ಈ ಮಾತುಗಳನ್ನು ಶೋಷಿತ ಸಮುದಾಯಗಳ ಪ್ರತಿಯೊಬ್ಬರೂ ಮತ್ತೆ ಮತ್ತೆ ಓದಬೇಕು. ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೆ ತಿದ್ದಿಕೊಳ್ಳಬೇಕು. ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಗೆ ತೊಡಗಿಸಿಕೊಳ್ಳಬೇಕು ಎಂಬುದೇ ಕಳಕಳಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…


Provided by

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ