ವಾಲ್ಮೀಕಿ ಸೃಷ್ಟಿಸಿದ ರಾಮ ಎಲ್ಲರಿಗೂ ಬೇಕು ಆದರೆ, ವಾಲ್ಮೀಕಿ "ಬೇಡ" ಅಲ್ಲವೇ? - Mahanayaka
2:38 PM Thursday 12 - September 2024

ವಾಲ್ಮೀಕಿ ಸೃಷ್ಟಿಸಿದ ರಾಮ ಎಲ್ಲರಿಗೂ ಬೇಕು ಆದರೆ, ವಾಲ್ಮೀಕಿ “ಬೇಡ” ಅಲ್ಲವೇ?

31/10/2020

ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ.  ಮಹರ್ಷಿ ವಾಲ್ಮೀಕಿ ಅಸ್ಪೃಶ್ಯ ಸಮುದಾಯದ ಅದ್ಭುತ ಪ್ರತಿಭೆ. ರಾಮಾಯಣವೆಂಬ ಸ್ವಾರಸ್ಯಕರವಾದ ಮಹಾಕಾವ್ಯವನ್ನು ಅವರು ರಚಿಸುತ್ತಾರೆ. ಆ ಮಹಾಕಾವ್ಯದ ಪಾತ್ರಗಳು ಇಂದು ಜೀವ ಪಡೆದುಕೊಂಡು, ಜನರಿಂದ ಪೂಜಿಸಲ್ಪಡುತ್ತಿದೆಯೆಂದರೆ, ವಾಲ್ಮೀಕಿಯ ಕಾವ್ಯ ಶಕ್ತಿ ಅದೆಂತಹದ್ದು ಅಲ್ಲವೇ?


ವಾಲ್ಮೀಕಿ ರಾಮಾಯಣದಲ್ಲಿ ರಾಮ ಸೀತೆಯರ ಕಥೆಯನ್ನು ಬರೆಯುತ್ತಾರೆ. ಆದರೆ ವಾಲ್ಮೀಕಿಯ ಕಥೆಯನ್ನು ಬೇರೆಯವರೇ ಬರೆಯುತ್ತಾರೆ. ವಾಲ್ಮೀಕಿಯ ಮಹಾ ಪ್ರತಿಭೆಗೆ ನಾವು ಕಾರಣ, ನಮ್ಮಿಂದಾಗಿ ವಾಲ್ಮೀಕಿ ರಾಮಾಯಣ ಬರೆದ ಎಂದು ಹೇಳುವವರೂ ಇದ್ದಾರೆ. ಅದು ಹೇಗೆಂದರೆ, ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿಲ್ಲ ಎಂದು ವಾದಿಸುವ ರೀತಿಯಲ್ಲಿ. ವಾಲ್ಮೀಕಿ ರಾಮಾಯಣ ಬರೆಯಲು ಬ್ರಾಹ್ಮಣ ಸಮುದಾಯದ ನಾರದನ ಉಪದೇಶ ಕಾರಣ, ನಾರದ ಉಪದೇಶ ಮಾಡಿದ ಬಳಿಕ ವಾಲ್ಮೀಕಿ ರಾಮಾಯಣ ಬರೆದರು ಎಂದು ರಾಮಾಯಣದ ಬರೆದ ವಾಲ್ಮೀಕಿಯ ಮಹಾನ್ ಜ್ಞಾನಕ್ಕೆ ಕೆಲವರು ಅವಮಾನ ಮಾಡುತ್ತಿದ್ದಾರೆ. ಬಹುತೇಕ ಪುಸ್ತಕಗಳಲ್ಲಿಯೂ ಈ ಬಗ್ಗೆ ಬರೆದು ಜನರನ್ನು ದಾರಿ ತಪ್ಪಿಸಿದ್ದಾರೆ. ಜ್ಞಾನ, ಪಾಂಡಿತ್ಯ ಎಂಬುವುದು ಬ್ರಾಹ್ಮಣ್ಯದ ಸೊತ್ತು ಎಂದು ಬಿಂಬಿಸುವ ಕೆಲಸ ಇದಾಗಿದ್ದು, ಅಸ್ಪೃಶ್ಯ ಸಮುದಾಯಗಳು ನಾವಿಲ್ಲದೇ ಏನನ್ನೂ ಸಾಧಿಸಲಾರವು ಎನ್ನುವ ಭಾವನೆಗಳನ್ನು ಹುಟ್ಟು ಹಾಕಿ ಜೀವಂತವಾಗಿರಿಸುವ ಷಡ್ಯಂತ್ರ ಇದಾಗಿದೆ.


ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಇಂದು ಎಲ್ಲರೂ ಆಚರಿಸುತ್ತಾರೆ. ಆದರೆ, ವಾಲ್ಮೀಕಿ ಬಗ್ಗೆ ನಿಜವಾದ ಕಾಳಜಿ ಯಾರಿಗಿದೆ? ವಾಲ್ಮೀಕಿ ಬರೆದ ರಾಮಾಯಣವನ್ನು ದೇವರ ಕೋಣೆಯಲ್ಲಿರಿಸಿ, ವಾಲ್ಮೀಕಿ ಜನಾಂಗದವರು ಬಂದಾಗ ಅಂಗಳದಲ್ಲಿ ನಿಲ್ಲಿಸುವ ದುಷ್ಟರನ್ನು ಇಂದಿಗೂ ನಾವು ಕಾಣಬಹುದಾಗಿದೆ. ಅಷ್ಟೇ ಯಾಕೆ, ರಾಮನ ಬಗ್ಗೆ ರಾಮಾಯಣದ ಬಗ್ಗೆ ಇಷ್ಟೆಲ್ಲ ಮಾತನಾಡುವ ಸಂಘಟನೆಗಳು, ಉತ್ತರಪ್ರದೇಶದಲ್ಲಿ ವಾಲ್ಮೀಕಿ ಸಮುದಾಯದ ಹೆಣ್ಣುಮಗಳನ್ನು ನಾಲ್ವರು ಠಾಕೂರ್ ಸಮುದಾಯದವರು ಹುರಿದು ಮುಕ್ಕಿದಾಗ, “ಆ ಹೆಣ್ಣು ಸರಿ ಇರಲಿಲ್ಲ, ಅವಳು ಮೈ ತುಂಬಾ ಬಟ್ಟೆ ಹಾಕಬೇಕಿತ್ತು, ಅವಳ ಮೇಲೆ ಅತ್ಯಾಚಾರವೇ ನಡೆಸಲಾಗಿಲ್ಲ” ಎಂದು ಹೇಳಿದ್ದರು. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್, ಈ ಪ್ರಕರಣವನ್ನು ಮುಚ್ಚಿ ಹಾಕಲು ರಾತ್ರೋ ರಾತ್ರಿ ಸಂತ್ರಸ್ತೆ ಯುವತಿಯ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸುತ್ತಾರೆ. ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಬಾರದಂತೆ ಸೆಕ್ಷನ್ ಗಳನ್ನು ಹಾಕಿಸುತ್ತಾರೆ. ಇದಲ್ಲವೇ ವಾಲ್ಮೀಕಿಗೆ ನೀಡುತ್ತಿರುವ ಗೌರವ?



Provided by

ಇಂದು ಯಾರಿಗೂ ವಾಲ್ಮೀಕಿ ಬೇಕಿಲ್ಲ, ಅವರು ಬರೆದ ಪುಸ್ತಕ ಬೇಕಿದೆ. ವಾಲ್ಮೀಕಿಯ ಸಮುದಾಯ ಹೇಗಿದೆ ಎನ್ನುವುದು ಬೇಕಾಗಿಲ್ಲ, ರಾಮ, ಸೀತೆಯ ಪಾತ್ರಬೇಕಿದೆ. ಯಾಕೆಂದರೆ ಈ ಪಾತ್ರಗಳನ್ನು ಹಿಡಿದುಕೊಂಡು ಮಾತ್ರವೇ ರಾಜಕೀಯ ಮಾಡಲು ಸಾಧ್ಯವಾಗುತ್ತದೆ. ವಾಲ್ಮೀಕಿ ಸೃಷ್ಟಿಸಿದ ರಾಮ, ಸೀತೆ ಸೇರಿದಂತೆ ರಾಮಾಯಣದ ಎಲ್ಲ ಪಾತ್ರಗಳು ಇಂದಿಗೂ ಜೀವಂತವಿದೆ. ಆದರೆ ವಾಲ್ಮೀಕಿಯನ್ನು ವರ್ಷದಲ್ಲಿ ಒಂದು ಬಾರಿ ಮಾತ್ರವೇ ಎಲ್ಲರು ನೆನೆಯುತ್ತಾರೆ ಮತ್ತು ಇದೊಂದು ಸರ್ಕಾರಿ ಕಾರ್ಯಕ್ರಮವಾಗಿ ಮಾತ್ರವೇ ಆಚರಣೆಯಾಗುತ್ತಿರುವುದು ದುರಂತ ಅಲ್ಲವೇ?


ಇತ್ತೀಚಿನ ಸುದ್ದಿ