ಮಂಗಳೂರು: ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಜರ್ನಿ ಥೇಟರ್ ಗ್ರೂಪ್’ನಿಂದ ಕ್ಯಾಂಪಸ್ ಥೇಟರ್ ರಂಗ ಕಾರ್ಯಾಗಾರ - Mahanayaka

ಮಂಗಳೂರು: ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಜರ್ನಿ ಥೇಟರ್ ಗ್ರೂಪ್’ನಿಂದ ಕ್ಯಾಂಪಸ್ ಥೇಟರ್ ರಂಗ ಕಾರ್ಯಾಗಾರ

campus theater
29/07/2026

ಮಂಗಳೂರು: ನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 25ರಂದು ‘ಜರ್ನಿ ಥೇಟರ್ ಗ್ರೂಪ್ (ರಿ.)’ ವತಿಯಿಂದ ಈ ಶೈಕ್ಷಣಿಕ ಸಾಲಿನ ಮೊದಲ ‘ಕ್ಯಾಂಪಸ್ ಥೇಟರ್’ ಎಂಬ ಏಕದಿನ ರಂಗ ಕಾರ್ಯಾಗಾರವು ಯಶಸ್ವಿಯಾಗಿ ನೆರವೇರಿತು. ಕಳೆದ 16 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜರ್ನಿ ಥೇಟರ್ ಗ್ರೂಪ್, ನಾಟಕ ಪ್ರದರ್ಶನಗಳ ಜೊತೆಗೆ ಅನೇಕ ಕಮ್ಮಟ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುತ್ತಾ ಬಂದಿದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ಅನ್ವೇಷಣಾ, ರಂಗಸಮಾಗಮ ಮತ್ತು ಕ್ಯಾಂಪಸ್ ಥೇಟರ್ ನಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಾಗೂ ಭವಿಷ್ಯದ ಸಮಾಜ ನಿರ್ಮಾಣದಲ್ಲಿ ಯುವಜನತೆಯನ್ನು ಸಜ್ಜುಗೊಳಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ. ಶೈಕ್ಷಣಿಕ ಕಲಿಕೆಯೊಂದಿಗೆ ರಂಗಭೂಮಿಯಂತಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಯು ಬೌದ್ಧಿಕವಾಗಿ ಮತ್ತು ತಾತ್ವಿಕವಾಗಿ ಗಟ್ಟಿಯಾಗುತ್ತಾನೆ ಎಂಬುದು ಸಂಸ್ಥೆಯ ಬಲವಾದ ನಂಬಿಕೆಯಾಗಿದೆ. ರಂಗಾಟ, ಹಾಡು ಮತ್ತು ಕುಣಿತಗಳಂತಹ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿನ ಅಂಜಿಕೆ ಹಾಗೂ ಸಂಕೋಚವನ್ನು ದೂರಮಾಡಿ, ನಾಯಕತ್ವ ಗುಣ, ಮುಕ್ತ ಸಂವಹನ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಬೆಳೆಸಲು ಈ ಕಾರ್ಯಾಗಾರ ನೆರವಾಗುತ್ತದೆ. ಇದು ಮುಂದಿನ ಔದ್ಯೋಗಿಕ ಜೀವನದಲ್ಲಿ ಮುಕ್ತವಾಗಿ ಸಂವಹನ ನಡೆಸಲು ಹಾಗೂ ದೃಢ ನಿಲುವನ್ನು ಹೊಂದಲು ಬೇಕಾದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ರಂಗಭೂಮಿಯ ಆಂಗಿಕ, ಆಹಾರ್ಯ, ವಾಚಿಕ ಮತ್ತು ಸಾತ್ವಿಕ ವಿಷಯಗಳನ್ನು ಆಧರಿಸಿ ವಿವಿಧ ಅಭ್ಯಾಸಗಳನ್ನು ನಡೆಸಲಾಯಿತು. ದೇಹದ ಭಂಗಿ, ಚಲನೆ, ಮನಸ್ಸು, ಕಲ್ಪನೆ, ಕ್ರಿಯೆ-ಪ್ರತಿಕ್ರಿಯೆ, ವೇಗ-ಲಯ, ನೃತ್ಯ, ಅಭಿನಯ ಹಾಗೂ ಸಂಗೀತ ಸಂಬಂಧಿತ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.

ಈ ಕಾರ್ಯಾಗಾರದಲ್ಲಿ ವಿದ್ದು ಉಚ್ಚಿಲ್, ಸುಧೀಶ್ ಕೂಡ್ಲು, ಮೇಘನಾ ಕುಂದಾಪುರ ಮತ್ತು ಚಿನ್ಮಯಿ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಅವಧಿಗಳನ್ನು ನಿರ್ವಹಿಸಿದರು. ಜರ್ನಿ ಸಂಸ್ಥೆಯ ಸದಸ್ಯರಾದ ಶರಣ್ಯ, ಶಮಿತ, ಶ್ರೀಶ, ಗೌತಮ್, ತೃಪ್ತಿ ಹಾಗೂ ರಾಹುಲ್ ಕಾರ್ಯಾಗಾರದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜರ್ನಿ ಥೇಟರ್ ಗ್ರೂಪ್‌ನ ರೋಹನ್ ಉಚ್ಚಿಲ್, ಸುನಿಲ್ ಪಲ್ಲಮಜಲು, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಶೆಟ್ಟಿ ಹಾಗೂ ಉಪನ್ಯಾಸಕರಾದ ಅಕ್ಷತಾ, ಮೆಲಿಸಾ ಲೂವಿಸ್ ಮತ್ತು ನವೀನ್ ಹೆಗಡೆ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ