ಮಂಗಳೂರು: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗಾಂಗ ದಾನ: ನಾಲ್ವರಿಗೆ ಮರುಜೀವ - Mahanayaka
7:05 AM Tuesday 10 - November 2026

ಮಂಗಳೂರು: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗಾಂಗ ದಾನ: ನಾಲ್ವರಿಗೆ ಮರುಜೀವ

prakash acharya
20/09/2026

ಮಂಗಳೂರು: ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದ ನಡುವೆಯೂ ಕುಟುಂಬಸ್ಥರು ತೆಗೆದುಕೊಂಡ ದಿಟ್ಟ ಹಾಗೂ ನಿಸ್ವಾರ್ಥ ನಿರ್ಧಾರದಿಂದಾಗಿ ನಾಲ್ವರು ರೋಗಿಗಳಿಗೆ ಹೊಸ ಜೀವ ಸಿಕ್ಕಿದೆ. ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಉಳ್ಳಾಲ ತಾಲೂಕಿನ ಕೋಟೇಕಾರ್ ಸಮೀಪದ ಬೀರಿ, ಮದೂರು ಸೈಟ್ ನಿವಾಸಿಯಾಗಿದ್ದ 50 ವರ್ಷದ ಪ್ರಕಾಶ್ ಆಚಾರ್ಯ ಅಂಗಾಂಗ ದಾನ ಮಾಡಿದ ಮಹಾನ್ ದಾನಿ.

ಪ್ರಕಾಶ್ ಆಚಾರ್ಯ ಅವರು ಸೆಪ್ಟೆಂಬರ್ 14ರಂದು ತಮ್ಮ ಮನೆಯ ಮುಂಭಾಗದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟು ಮಾಡಿಕೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 17ರಂದು ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ವೈದ್ಯಕೀಯ ಸಮಿತಿ ಘೋಷಿಸಿತು.

ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಸೆಪ್ಟೆಂಬರ್ 19ರಂದು ‘ಜೀವನ್ ಸಾರ್ಥಕತೆ’ ಮಾರ್ಗದರ್ಶನದಲ್ಲಿ ಅಂಗಾಂಗ ಸಂಗ್ರಹ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಕೆಎಂಸಿ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ತಂಡವು ಎರಡು ಕಿಡ್ನಿಗಳನ್ನು ಪಡೆದುಕೊಂಡಿದ್ದು, ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರು ಕಿಡ್ನಿ ವೈಫಲ್ಯದ ರೋಗಿಗಳಿಗೆ ಅವುಗಳನ್ನು ಅಳವಡಿಸಲಾಗುತ್ತದೆ. ಇದರ ಜೊತೆಗೆ, ಕೆಎಂಸಿ ಅತ್ತಾವರ ವೈದ್ಯಕೀಯ ತಂಡವು ಎರಡು ಕಾರ್ನಿಯಾಗಳನ್ನು (ಕಣ್ಣಿನ ಪರೆ) ಸಂಗ್ರಹಿಸಿದ್ದು, ಅಂಧಕಾರದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಇದು ಬೆಳಕಾಗಲಿದೆ.

ಈ ಸಂಕೀರ್ಣ ಪ್ರಕ್ರಿಯೆಯನ್ನು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ಅವರ ನೇತೃತ್ವದಲ್ಲಿ, ನರಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಫೋರೆನ್ಸಿಕ್ ತಂಡ ಮತ್ತು ರಾಜ್ಯ ಅಂಗಾಂಗ ಕಸಿ ಸಂಸ್ಥೆಯ (SOTTO) ಸಮನ್ವಯದೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಕುಟುಂಬದ ಈ ನಿಸ್ವಾರ್ಥ ಹಾಗೂ ದೃಢ ನಿರ್ಧಾರವು ನಾಲ್ಕು ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿಸಿದ್ದು, ಅಂಗಾಂಗ ದಾನವು ಜೀವನದಾಚೆಗಿನ ಅತ್ಯಂತ ಶ್ರೇಷ್ಠ ಉಡುಗೊರೆ ಎಂದು ಡಾ. ಶಿವಪ್ರಕಾಶ್ ಅವರು ಶ್ಲಾಘಿಸಿದ್ದಾರೆ. ಅಲ್ಲದೆ, ಪ್ರಕಾಶ್ ಆಚಾರ್ಯ ಅವರ ಕುಟುಂಬದ ಮಾನವೀಯ ಕಾರ್ಯಕ್ಕೆ ಆಸ್ಪತ್ರೆಯ ಪರವಾಗಿ ಸಾಷ್ಟಾಂಗ ನಮನಗಳನ್ನು ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler