ಮಣಿಪುರದಲ್ಲಿ ಜನಾಂಗೀಯ ಸಂಘರ್ಷ: ಸಿಎಂ ವಿರುದ್ಧ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಸ್ಫೋಟ
ಮಣಿಪುರದಲ್ಲಿ ಜನಾಂಗೀಯ ಸಂಘರ್ಷವನ್ನು ನಿಭಾಯಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರ ವಿರುದ್ಧ ಬಿಜೆಪಿ ಶಾಸಕರಲ್ಲಿ ಇರುವ ಅಸಮಾಧಾನ ಭುಗಿಲೆದ್ದಿದ್ದು, ಸಿಎಂ ಕರೆದ ಸಭೆಗೆ 37 ಶಾಸಕರ ಪೈಕಿ 19 ಮಂದಿ ಗೈರುಹಾಜರಾಗಿದ್ದಾರೆ. ಮಣಿಪುರ ಸಂಘರ್ಷ ನಿಭಾಯಿಸುವಲ್ಲಿ ಸಿಎಂ ವಿಫಲರಾಗಿದ್ದಾರೆ ಎಂದು ಆಪಾದಿಸಿ ಮೇಘಾಲಯ ಸಿಎಂ ಕೊನಾರ್ಡ್ ಸಂಗ್ಮಾರವರು ಎನ್ ಡಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಚರ್ಚಿಸಲು ಮಿತ್ರಕೂಟದ ಶಾಸಕರಿಗೆ ಪತ್ರ ಬರೆದು ಸಭೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಸಭೆಗೆ ಗೈರುಹಾಜರಾದ ಸಂಬಂಧ ಸಿಎಂ ಕಾರ್ಯಾಲಯದಿಂದ ಸಚಿವರೂ ಸೇರಿದಂತೆ 11 ಮಂದಿ ಎನ್ ಡಿಎ ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಸೇರಿದ ಜನರ ಹಿತರಕ್ಷಣೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸಿಎಂ ಬಿರೇನ್ ಸಿಂಗ್ ವಿಡಿಯೊ ಸಂದೇಶ ನೀಡಿದ್ದಾರೆ.
60 ಸದಸ್ಯಬಲದ ವಿಧಾನಸಭೆಯಲ್ಲಿ ಎನ್ ಡಿಎ 53 ಶಾಸಕರನ್ನು ಹೊಂದಿದೆ. ಅದರಲ್ಲಿ ಎನ್ ಪಿಪಿಯ ಏಳು, ನಾಗಾ ಪೀಪಲ್ಸ್ ಫ್ರಂಟ್ ನ ಐದು, ಜೆಡಿಯುನ ಒಬ್ಬರು ಶಾಸಕರು ಮತ್ತು ಮೂವರು ಪಕ್ಷೇತರರು ಸೇರಿದ್ದಾರೆ. ಬಿಜೆಪಿಯ 37 ಶಾಸಕರ ಪೈಕಿ ಏಳು ಮಂದಿ ಕುಕಿ ಸಮುದಾಯಕ್ಕೆ ಸೇರಿದವರು. ಈ ಎಲ್ಲರೂ ಸಭೆಗೆ ಗೈರುಹಾಜರಾಗಿದ್ದಾರೆ. ಅಚ್ಚರಿಯ ಅಂಶವೆಂದರೆ ಎನ್ ಪಿಪಿ ಬೆಂಬಲ ವಾಪಾಸು ಪಡೆದರೂ, ಪಕ್ಷದ ಏಳು ಶಾಸಕರ ಪೈಕಿ 4 ಮಂದಿ ಸಿಎಂ ಸಭೆಗೆ ಹಾಜರಾಗಿದ್ದರು.
ಜಿರಿಬಾಮ್ ನಲ್ಲಿ ಆಸರೆ ಪಡೆದಿದ್ದ ಮೈತೈ ಸಮುದಾಯಕ್ಕೆ ಸೇರಿದ ಆರು ಮಂದಿಯನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾದ ಕುಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj