ಮಣಿಪುರದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗುಂಡಿಕ್ಕಿ ಹತ್ಯೆ: ಆರೋಪಿ ಪೊಲೀಸ್ ಕಾನ್ಸ್ ಟೇಬಲ್ ಬಂಧನ
ಮಣಿಪುರ ರಾಜ್ಯದ ಗಲಭೆ ಪೀಡಿತ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಮಣಿಪುರ ಪೊಲೀಸರ ಸಬ್ ಇನ್ಸ್ ಪೆಕ್ಟರ್ ಓರ್ವರನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಕಾನ್ಸ್ ಟೇಬಲ್ ಓರ್ವನನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖಾ ವರದಿಯಲ್ಲಿ, ಕಾನ್ಸ್ ಟೇಬಲ್ ಬಿಕ್ರಮ್‌ಜಿತ್ ಸಿಂಗ್ ಅವರು ಸಬ್-ಇನ್ಸ್ ಪೆಕ್ಟರ್ ಷಹಜಹಾನ್ ರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಬೆಳಿಗ್ಗೆ 11ರ ಸುಮಾರಿಗೆ ಸಿಂಗ್ ತನ್ನ ಸರ್ವೀಸ್ ರೈಫಲ್ ಬಳಸಿ ಷಹಜಹಾನ್ ಮೇಲೆ ಗುಂಡು ಹಾರಿಸಿದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆದರೆ ಗುಂಡಿನ ದಾಳಿಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಪೊಲೀಸ್ ಅಧಿಕಾರಿಗಳು ಈ ಕೃತ್ಯದ ಹಿಂದಿನ ಉದ್ದೇಶಗಳನ್ನು ತನಿಖೆ ಮಾಡುತ್ತಿದ್ದಾರೆ.
ಇಂಫಾಲ್ ಪೂರ್ವ ಜಿಲ್ಲೆಯ ಯಾರೀಪೋಕ್ ತುಲಿಹಾಲ್ ಮೂಲದ ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಷಹಜಹಾನ್ ಅವರನ್ನು ಜಿರಿಬಾಮ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಆರೋಪಿ ಪೊಲೀಸ್ ಕಾನ್ಸ್‌ಟೇಬಲ್ ಅಕೋಯಿಜಮ್ ಬಿಕ್ರಮ್‌ಜಿತ್ ಸಿಂಗ್ ಇಂಫಾಲ್ ಪೂರ್ವ ಜಿಲ್ಲೆಯ ನಹರುಪ್ ಪಾಂಗೊಂಗ್ ಮಖೊಂಗ್ನವರು.
ಜಿರಿಬಾಮ್ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಶಾಂತಿ ಕಾಪಾಡಲು ಮತ್ತು ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಣಿಪುರದ ಪೊಲೀಸ್ ಅಧಿಕಾರಿಗಳನ್ನು ಮೊಂಗ್ಬಂಗ್ ಗ್ರಾಮದಲ್ಲಿ ನಿಯೋಜಿಸಲಾಗಿತ್ತು.
ಪೊಲೀಸರ ಪ್ರಕಾರ, ಸಮಗ್ರ ತನಿಖೆ ನಡೆಸಲು ಜಿರಿಬಾಮ್ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಈ ಘಟನೆ ನಡೆದ ಮೊಂಗ್ಭುಂಗ್ ಗ್ರಾಮವು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದಿಂದಾಗಿ ಪ್ರಸ್ತುತ ಹೆಚ್ಚಿನ ಭದ್ರತೆಯನ್ನು ಹೊಂದಿದೆ.
ಆರೋಪಿ ಕಾನ್ಸ್ ಟೇಬಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj