ಮಂಜೇಶ್ವರ: ಗಲ್ಫ್ ಉದ್ಯೋಗಿಯನ್ನು ಮರಕ್ಕೆ ಕಟ್ಟಿ ಹಾಕಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ‘ಕಾಪಾ’ ಕಾಯ್ದೆಯಡಿ ಬಂಧನ
ಮಂಜೇಶ್ವರ: ಗಲ್ಫ್ ಉದ್ಯೋಗಿಯೊಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ತಲೆಕೆಳಗಾಗಿ ಕಟ್ಟಿಹಾಕಿ ಥಳಿಸಿ ಭೀಕರವಾಗಿ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಪೈವಳಿಕೆ ನಿವಾಸಿ ಅಬೂಬಕರ್ ಸಿದ್ದೀಕ್ ಅಲಿಯಾಸ್ ನೂರ್ ಶಾ (43) ಬಂಧಿತ ಆರೋಪಿಯಾಗಿದ್ದು, ಈತನ ಕುಖ್ಯಾತ ಹಿನ್ನೆಲೆಯನ್ನು ಪರಿಗಣಿಸಿ ಕಠಿಣ ‘ಕಾಪಾ’ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಗಲ್ಫ್ ನಿಂದ ಊರಿಗೆ ಬಂದಿದ್ದ ಸೀತಾಂಗೋಳಿ ಮುಗು ನಿವಾಸಿ ಅಬೂಬಕರ್ ಸಿದ್ದೀಕ್ ಅವರನ್ನು ಚಿನ್ನದ ವ್ಯವಹಾರದ ಬಗ್ಗೆ ಮಾತನಾಡಲು ಇದೆ ಎಂದು ಹೇಳಿ ಪೈವಳಿಕೆಗೆ ಕರೆಸಿಕೊಳ್ಳಲಾಗಿತ್ತು. ನಂತರ ನೂರ್ ಶಾ ನೇತೃತ್ವದ ಎಂಟು ಮಂದಿಯ ತಂಡವು ಅವರನ್ನು ಕಾರಿನಲ್ಲಿ ನಿರ್ಜನ ಗುಡ್ಡಗಾಡು ಪ್ರದೇಶಕ್ಕೆ ಅಪಹರಿಸಿ ಒಯ್ದು, ತಲೆಕೆಳಗಾಗಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿತ್ತು. ಈ ಕುಖ್ಯಾತ ಕೃತ್ಯದಲ್ಲಿ ನೂರ್ ಶಾ ಪ್ರಮುಖ ಆರೋಪಿಯಾಗಿದ್ದನು.
ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ನೂರ್ ಶಾ, ಇತ್ತೀಚೆಗೆ ಕಣ್ಣೂರಿನಲ್ಲಿ ಯುವಕನೊಬ್ಬನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದನು. ಈತನ ವಿರುದ್ಧದ ಸರಣಿ ಅಪರಾಧ ಕೃತ್ಯಗಳನ್ನು ಪರಿಗಣಿಸಿ ಕಠಿಣ ‘ಕಾಪಾ’ ಕಾಯ್ದೆಯನ್ನು ಹೂಡಲಾಗಿದ್ದು, ಸದ್ಯ ಈತನನ್ನು ವೀಯ್ಯೂರು ಜೈಲಿಗೆ ಸ್ಥಳಾಂತರಿಸಲಾಗಿದೆ.
ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಇತರೆ ಕ್ರಿಮಿನಲ್ ಹಿನ್ನೆಲೆಯುಳ್ಳವರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸುತ್ತಿದ್ದು, ಅಂತಹವರ ಮೇಲೂ ‘ಕಾಪಾ’ ಕಾಯ್ದೆ ಜಾರಿಗೊಳಿಸಲು ಅಗತ್ಯ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























