ಅರ್ಜೆಂಟೀನಾದಲ್ಲಿ ಬತ್ತಿಹೋಯ್ತೇ ಸಮುದ್ರ? | ವೈರಲ್ ವಿಡಿಯೋದ ಹಿಂದಿನ ಸತ್ಯವೇನು?
ಬ್ಯೂನಸ್ ಐರಿಸ್: ದಕ್ಷಿಣ ಅಮೆರಿಕದ ಅರ್ಜೆಂಟೀನಾ ದೇಶದ ಕಡಲತೀರ(Argentina Ocean)ದಲ್ಲಿ ಸಮುದ್ರದ ನೀರು ಹಠಾತ್ತನೆ ಹಿಂದೆ ಸರಿದು, ಕಡಲ ಸಮುದ್ರದ ತಳ ಭಾಗ ಬಯಲಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಅಟ್ಲಾಂಟಿಕ್ ಮಹಾಸಾಗರವು ರಾತ್ರೋರಾತ್ರಿ ಬತ್ತಿಹೋಗಿದೆ ಅಥವಾ ಯಾವುದೋ ಮಹಾ ಪ್ರಳಯ ಸಂಭವಿಸಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಾದಿಸುತ್ತಿದ್ದಾರೆ. ಆದರೆ ಇದರ ಹಿಂದಿನ ನೈಜ ಸಂಗತಿ ಏನು ಎಂಬುದು ಈಗ ಬಹಿರಂಗಗೊಂಡಿದೆ.
ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ಪ್ರಮುಖ ಪ್ರವಾಸಿ ನಗರವಾದ ‘ಮಾರ್ ಡೆಲ್ ಪ್ಲಾಟಾ’ (Mar del Plata) ಕಡಲತೀರದಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದೆ. ಇಲ್ಲಿನ ಸಮುದ್ರದ ನೀರು ತೀರದಿಂದ ನೂರಾರು ಮೀಟರ್ ಗಳಷ್ಟು ಹಿಂದೆ ಸರಿದಿದ್ದು, ಇದರಿಂದಾಗಿ ಅಲ್ಲಿ ನಿಲ್ಲಿಸಿದ್ದ ದೋಣಿಗಳು ಹಾಗೂ ಹಡಗುಗಳು ಒಣ ನೆಲದ ಮೇಲೆ ಸಿಲುಕಿಕೊಂಡಂತೆ ಗೋಚರಿಸಿವೆ. ಅಲ್ಲದೆ, ಸಾಮಾನ್ಯವಾಗಿ ನೀರಿನ ಅಡಿಯಲ್ಲಿ ಸಂಪೂರ್ಣವಾಗಿ ಮುಳುಗಿರುತ್ತಿದ್ದ ‘ರೆಸ್ಟಿಂಗಾ ಡೆಲ್ ಫಾರೋ’ (Restinga del Faro) ಎಂಬ ದೊಡ್ಡ ಕಲ್ಲಿನ ರಚನೆಯು ಹೊರಬಂದಿದ್ದು, ಇದನ್ನು ಕಂಡು ಸ್ಥಳೀಯರು ಮತ್ತು ನೆಟಿಜನ್ ಗಳು ಹೊಸ ದ್ವೀಪ ಹುಟ್ಟಿಕೊಂಡಿದೆ ಎಂದು ಆತಂಕಗೊಂಡಿದ್ದರು.
ARGENTINA’S SEA Disappears …? 😱
Hi @grok, why is this video going so viral!! pic.twitter.com/6OMakw5Yxt
— Be Honest (@Be_honest07) September 10, 2026
ಸತ್ಯಾಸತ್ಯತೆ ಏನು?
ವರದಿಗಳ ಪ್ರಕಾರ, ಸಮುದ್ರವು ಶಾಶ್ವತವಾಗಿ ಬತ್ತಿಹೋಗಿದೆ ಎಂಬುದು ಸಂಪೂರ್ಣ ಸುಳ್ಳು ಮತ್ತು ಕೇವಲ ವಾದವಷ್ಟೇ. ಇದು ಹವಾಮಾನ ವೈಪರೀತ್ಯದಿಂದ ಉಂಟಾದ ತಾತ್ಕಾಲಿಕ ಪ್ರಾಕೃತಿಕ ವಿದ್ಯಮಾನವಾಗಿದೆ.
ತೀರದಿಂದ ಸಮುದ್ರದ ಕಡೆಗೆ ಬೀಸಿದ ತೀವ್ರವಾದ ಗಾಳಿಯು ಮೇಲ್ಮೈ ನೀರನ್ನು ತೀರದಿಂದ ದೂರಕ್ಕೆ ತಳ್ಳಿದೆ. ವಾತಾವರಣದ ಒತ್ತಡದಲ್ಲಿ ಉಂಟಾದ ಏರಿಳಿತಗಳು ಕರಾವಳಿ ಪ್ರದೇಶದ ನೀರಿನ ಮಟ್ಟದಲ್ಲಿ ತಾತ್ಕಾಲಿಕ ವ್ಯತ್ಯಾಸವನ್ನುಂಟುಮಾಡಿವೆ. ಈ ಎಲ್ಲ ಹವಾಮಾನ ಬದಲಾವಣೆಗಳೊಂದಿಗೆ ನೈಸರ್ಗಿಕವಾಗಿ ಉಂಟಾದ ಕನಿಷ್ಠ ಉಬ್ಬರವಿಳಿತದ ಸಮಯವೂ ಸೇರಿಕೊಂಡಿದ್ದರಿಂದ ನೀರಿನ ಮಟ್ಟ ತೀವ್ರವಾಗಿ ಕುಸಿದಂತೆ ಕಂಡುಬಂದಿದೆ.
ಸಾಮಾನ್ಯ ಉಬ್ಬರವಿಳಿತದ ಚಕ್ರ ಪೂರ್ಣಗೊಂಡ ನಂತರ, ಅದೇ ದಿನ ಸಮುದ್ರದ ನೀರಿನ ಮಟ್ಟವು ಯಥಾಸ್ಥಿತಿಗೆ ಮರಳಿದ್ದು, ಆ ಕಲ್ಲಿನ ರಚನೆಗಳು ಮತ್ತು ಸಮುದ್ರದ ಅಡಿಗೆರೆಗಳು ಮತ್ತೆ ನೀರಿನಲ್ಲಿ ಮುಳುಗಿವೆ. ಇದು ಯಾವುದೇ ಜಾಗತಿಕ ವಿಪತ್ತು ಅಥವಾ ಪ್ರಳಯದ ಮುನ್ಸೂಚನೆಯಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























