ಕಾರ್ಯಕರ್ತರೊಂದಿಗೆ ಶಾಸಕ ಪ್ರಭು ಚವ್ಹಾಣ, ಶರಣು ಸಲಗರ್ ಶಿರಡಿ ಸಾಯಿಬಾಬಾ ದರ್ಶನ
ಶ್ರಾವಣ ಮಾಸದ ಪ್ರಯುಕ್ತ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರು ಆದ ಪ್ರಭು ಚವ್ಹಾಣ ಅವರು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಏರ್ಪಡಿಸಿದ್ದ ಸಾಯಿಬಾಬಾ ದರ್ಶನ ಮತ್ತು ದಾಸೋಹದಲ್ಲಿ ಬೀದರ ಜಿಲ್ಲೆಯ ಭಾಜಪ ಕಾರ್ಯಕರ್ತರು ಹಾಗೂ ಗಣ್ಯರು ಭಾಗವಹಿಸಿದ್ದರು. ಬಸವಕಲ್ಯಾಣ ಶಾಸಕ ಶರಣು ಸಲಗರ ತಮ್ಮ ತಾಲೂಕಿನ ಭಾಜಪ ಮುಖಂಡರೊಂದಿಗೆ ಭಾಗವಹಿಸಿದ್ದರು.
ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ 1200 ಕಾರ್ಯಕರ್ತರು ಕುಟುಂಬ ಸಮೇತ ಆಗಸ್ಟ್ 11 ರಂದು ಶಿರಡಿ ಸಾಯಿ ಬಾಬಾ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ಶರಣು ಸಲಗರ ಅವರು ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರ ಜೀವನ ಸುಖಮಯವಾಗಲಿ, ನಾಡು ಸಮೃದ್ಧಿಯಾಗಲಿ ಎಂದು ಬೇಡಿಕೊಂಡರು.
ಶಾಸಕ ಪ್ರಭು ಬಿ.ಚವ್ಹಾಣ ಅವರು ಮಾತನಾಡಿ, ಶ್ರಾವಣ ಮಾಸದ ಪ್ರಯುಕ್ತ ಸಾಯಿ ಮಂದಿರದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಹಲವು ವರ್ಷಗಳ ನಂತರ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, ಇಂತಹ ವಿಶೇಷ ಪೂಜೆಯಲ್ಲಿ ಭಾಗವಹಿಸುವ ಸೌಭಾಗ್ಯ ಕ್ಷೇತ್ರದ ಜನರಿಗೆ ಸಿಗಬೇಕಂಬ ಉದ್ದೇಶದಿಂದ ಕಾರ್ಯಕರ್ತರ ಜೊತೆಗೆ ದೇವರ ದರ್ಶನ ಪಡೆಯಲಾಗುತ್ತಿದೆ ಎಂದರು.
ಸಂತ ಸಾಯಿಬಾಬಾ ಪವಾಡ ಪುರುಷರು, ಸಾಧಾರಣ ಫಕೀರನಾಗಿ ಜೀವನ ಸಾಗಿಸಿದ್ದರೂ ಅವರ ಪವಾಡ ಕಾರ್ಯಗಳು ಸಾಕಷ್ಟಿವೆ. ಬಾಬಾರ ಮಹಿಮೆ ದೇಶವಲ್ಲದೇ ಹೊರಜಗತ್ತಿಗೂ ಪರಿಚಿತವಾಗಿದೆ. ಆಷ್ಟ್ರೇಲಿಯಾ, ಜಪಾನ್, ಅಮೇರಿಕಾ ಸೇರಿದಂತೆ ಅನೇಕ ದೇಶಗಳ ಭಕ್ತರು ಶಿರಡಿಗೆ ಆಗಮಿಸಿ ಸಾಯಿಬಾಬಾ ಎದುರು ತಲೆಬಾಗಿ ನಮಿಸುತ್ತಾರೆ. ಕಷ್ಟವೆಂದು ಬರುವ ಭಕ್ತರ ಸಮಸ್ಯೆಗಳು ದೂರವಾಗುತ್ತವೆ. ಶ್ರದ್ಧೆಯಿಂದ ಬೇಡಿಕೊಂಡ ಇಷ್ಟಾರ್ಥಗಳು ಇಲ್ಲಿ ನೆರವೇರುತ್ತವೆ ಎಂದು ಸಾಯಿ ಬಾಬಾರ ಪವಾಡಗಳ ಬಗ್ಗೆ ಕೊಂಡಾಡಿದರು.
ಹಿಂದೆ ಕೇವಲ ಔರಾದ(ಬಿ) ಕ್ಷೇತ್ರದ ಕಾರ್ಯಕರ್ತರಿಗೆ ಶಿರಡಿ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಆಗಮಿಸಿ ಸಾಯಿಬಾಬಾರ ದರ್ಶನ ಪಡೆದಿದ್ದಾರೆ. ಎಲ್ಲರ ಬೇಡಿಕೆಗಳನ್ನು ಸಾಯಿಬಾಬಾ ಈಡೇರಿಸಲಿ ಎಂದು ಬೇಡಿಕೊಂಡರು.
ಇದೇ ವೇಳೆ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ದರ್ಶನ ಪಡೆಯಲಾಯಿತು. ಇದಕ್ಕೂ ಮುನ್ನ ದಿನ ಮಹಾರಾಷ್ಟ್ರದ ಪುಣ್ಯಸ್ಥಳ ಶನಿ ಸಿಂಗನಾಪೂರದ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಬಿಜೆಪಿ ಜಿಲ್ಲಾ ಪ್ರಮುಖರಾದ ಈಶ್ಚರಸಿಂಗ್ ಠಾಕೂರ್, ಮುಖಂಡರಾದ ಬಸವರಾಜ ಆರ್ಯ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಉಮೇಶ್ ನಾಯಕ್, ಬಾಲಾಜಿ ನಾಯಕ್, ಕಿರಣ ಪಾಟೀಲ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಪ್ರದೀಪ ಪವಾರ, ಸಿದ್ದು ಬಿರಾದಾರ, ರಾಜೇಂದ್ರ ಮಾಳಿ, ದಿನೇಶ ರಕ್ಷ್ಯಾಳೆ, ಅಶೋಕ ಅಲ್ಮಾಜೆ, ಔರಾದ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಬಸವಕಲ್ಯಾಣ ಮಂಡಲ ಅಧ್ಯಕ್ಷ ಜ್ಞಾನೇಶ್ವರ ಮೂಳೆ, ಜಿಲ್ಲಾ ಸಹ ವಕ್ತಾರ ಗುರುನಾಥ ರಾಜಗೀರಾ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ವೈಜ್ಞಾನಿಕ ಪರಿಷತ್ತಿನ ರಾಜ್ಯ ಸಂಚಾಲಕ ದಾನಿ ಬಾಬುರಾವ, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ರವಿಕುಮಾರ ಶಿಂದೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth