ಮೂರು ಮಕ್ಕಳ ತಾಯಿ ಬಲಿ: ಪ್ರಿಯಕರನಿಂದಲೇ ಭೀಕರ ಕೊಲೆ
ದಾವಣಗೆರೆ: ಶೇಖರಪ್ಪ ನಗರದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮೂರು ಮಕ್ಕಳ ತಾಯಿಯನ್ನು ಆಕೆಯ ಪ್ರಿಯಕರನೇ ಭೀಕರವಾಗಿ ಕತ್ತು ಸೀಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
45 ವರ್ಷದ ನಾಗರತ್ನ ಕೊಲೆಯಾದ ಮಹಿಳೆಯಾಗಿದ್ದು, 36 ವರ್ಷದ ನಾಗರಾಜ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಪತಿಯನ್ನು ತ್ಯಜಿಸಿ ತನ್ನ ಮೂರು ಮಕ್ಕಳನ್ನು ಬೇರೆಡೆ ಬಿಟ್ಟಿದ್ದ ನಾಗರತ್ನ, ಶೇಖರಪ್ಪ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುವಾಗ ಪರಿಚಯವಾದ ನಾಗರಾಜ್ ಜೊತೆ ಕಳೆದ ಕೆಲವು ವರ್ಷಗಳಿಂದ ಆಕೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಕೆಲವು ದಿನಗಳಿಂದ ಇಬ್ಬರ ನಡುವೆ ಪದೇ ಪದೇ ತೀವ್ರ ಜಗಳ ನಡೆಯುತ್ತಿತ್ತು. ಇವರ ಗಲಾಟೆಯಿಂದ ಬೇಸತ್ತ ಸುತ್ತಮುತ್ತಲಿನ ನಿವಾಸಿಗಳು ನಾಗರತ್ನಳಿಗೆ ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದರು. ಬೆಳಿಗ್ಗೆ ಸುಮಾರು 10:30ರ ವೇಳೆಗೆ ಪ್ರಿಯಕರ ನಾಗರಾಜ್, ನಾಗರತ್ನಳನ್ನು ಆಕೆಯ ಮನೆಯ ಮೇಲ್ಛಾವಣಿಗೆ ಕರೆದೊಯ್ದು ಚಾಕುವಿನಿಂದ ಇರಿದು ಕತ್ತು ಸೀಳಿದ್ದಾನೆ. ನಾಗರತ್ನ ಅವರ ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದಾಗ ಪರಾರಿಯಾಗಲು ಯತ್ನಿಸಿದ ಆರೋಪಿ ನಾಗರಾಜನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಆತನನ್ನು ತೆಂಗಿನ ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ನಾಗರಾಜನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕೊಲೆಗೆ ನಿಖರವಾದ ಕಾರಣ ಏನು ಎಂಬ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




























