ಮೂಡಿಗೆರೆ: ಮೇ 29 ರಂದು ಬಿಜೆಪಿ ಎಸ್ಸಿ ಮೋರ್ಚಾದಿಂದ ಅಂಬೇಡ್ಕರ್ ಜಯಂತಿ ಆಚರಣೆ - Mahanayaka

ಮೂಡಿಗೆರೆ: ಮೇ 29 ರಂದು ಬಿಜೆಪಿ ಎಸ್ಸಿ ಮೋರ್ಚಾದಿಂದ ಅಂಬೇಡ್ಕರ್ ಜಯಂತಿ ಆಚರಣೆ

mudigere bjp
28/05/2026

ಮೂಡಿಗೆರೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಹಾಗೂ ಆದರ್ಶಗಳನ್ನು ಯುವ ಜನತೆಗೆ ತಿಳಿಸುವ ಸಲುವಾಗಿ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಮೇ 29ರಂದು ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ 135ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರ ಜನ್ಮ ಸ್ಥಳ ಸೇರಿದಂತೆ ಒಟ್ಟು 5 ಪ್ರಮುಖ ಸ್ಥಳಗಳನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಇಂದು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಕಾರಣದಿಂದಲೇ ಏಪ್ರಿಲ್ 14 ಅನ್ನು ವಿಶ್ವದಾದ್ಯಂತ ‘ವಿಶ್ವ ಜ್ಞಾನದ ದಿನ’ ಎಂದು ಆಚರಿಸಲಾಗುತ್ತಿದೆ. ಅಂತಹ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಮತ್ತು ಆಶಯಗಳ ಬಗ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲಾ ಸಮುದಾಯದ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದರು.

ಬಳಿಕ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಸಚಿನ್ ಬಾನಳ್ಳಿ ಮಾತನಾಡಿ, “ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಕೊಳ್ಳೆಗಾಲದ ಶಾಸಕರಾದ ಎನ್. ಮಹೇಶ್ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಗೌರವಾನ್ವಿತ ಉಪಸ್ಥಿತರಾಗಿ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಸೇರಿದಂತೆ ಪಕ್ಷದ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಎಸ್ಸಿ ಮೋರ್ಚಾ ಉಪಾಧ್ಯಕ್ಷ ಶರತ್ ಮಾಕೋನಹಳ್ಳಿ, ಬಾಳೂರು ಹೋಬಳಿ ಅಧ್ಯಕ್ಷ ರಘುಪತಿ ಹಾಗೂ ನಗರ ಕಾರ್ಯದರ್ಶಿ ರಘು ಮೂಡಿಗೆರೆ ಉಪಸ್ಥಿತರಿದ್ದರು.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

ಇತ್ತೀಚಿನ ಸುದ್ದಿ