ಸರಕಾರದ ತಾರತಮ್ಯ ನೀತಿ ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ - Mahanayaka

ಸರಕಾರದ ತಾರತಮ್ಯ ನೀತಿ ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

belthangady
23/09/2022

ಮದರಸ ಬಗ್ಗೆ ಅಪಪ್ರಚಾರ ಸಹಿಸಲ್ಲ, ಕಲ್ಪಿತ ಹೇಳಿಕೆಗೆ ಕಡಿವಾಣ ಹಾಕಬೇಕು: ಮೌಲಾನಾ ಇಸ್ಹಾಕ್ ಕೌಸರಿ

ಬೆಳ್ತಂಗಡಿ: ಆಡಳಿತದ ಪದವಿಗೆ ಘನತೆ ಮತ್ತು ಪಾವಿತ್ರ್ಯತೆ ಇದೆ. ಅಲ್ಲಿ ಕುಳಿತುಕೊಳ್ಳಬೇಕಾದವರು ಆ ಪಾವಿತ್ರ್ಯತೆಯನು ಕಾಪಾಡಲು ಅನರ್ಹರಾದರೆ ಅವರು ಸ್ಥಾನದಿಂದ ಇಳಿಯಬೇಕು. ಇಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ ಎಂದಾದರೆ ಅದು ಆಡಳಿತದಲ್ಲಿರುವವರ ದೌರ್ಬಲ್ಯಕ್ಕೆ ಸಾಕ್ಷಿ ಎಂದು ಬೆಳ್ತಂಗಡಿ ದಾರುಸ್ಸಲಾಂ ದ‌ಅವಾ ಕಾಲೇಜು ಮುಖ್ಯ ಗುರುಗಳಾದ ಮೌಲಾನಾ ಇಸ್ಹಾಕ್ ಕೌಸರಿ ಹೇಳಿದರು.

ಸುಳ್ಯದ ಮಸೂದ್ ಮತ್ತು ಸುರತ್ಕಲ್‌ ನ ಫಾಝಿಲ್ ಎಂಬಿಬ್ಬರ  ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ, ಇಸ್ಲಾಂ ಧರ್ಮದ ಬಗ್ಗೆ ಹಾಗೂ ಮದರಸಗಳ ಬಗ್ಗೆ ಅಲ್ಲಲ್ಲಿ ಅಪಪ್ರಚಾರಗಳನ್ನು ಮಾಡುತ್ತಾ, ಕಪೋಲ ಕಲ್ಪಿತ ಹೇಳಿಕೆಗಳನ್ನು ನೀಡುವುದಕ್ಕೆ ಕಡಿವಾಣ ಹಾಕಬೇಕು. ಹತ್ಯೆಗೈಯ್ಯಲ್ಪಟ್ಟವರಿಗೆ ಸರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮುಸ್ಲಿಂ ಒಕ್ಕೂಟದ ವತಿಯಿಂದ ಬೆಳ್ತಂಗಡಿ  ಮಿನಿ ವಿಧಾನ ಸೌಧದ ಎದುರು ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸ್ವಾತಂತ್ರ್ಯ ಸಮರದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಮುಸಲ್ಮಾನರು. ಮದರಸಗಳು ಅಂದಿನ ಸ್ವಾತಂತ್ರ್ಯ ಹೋರಾಟದ ಕೇಂದ್ರಗಳಾಗಿತ್ತು. ಅಂತಹಾ ಸಮುದಾಯದ ವಿರುದ್ಧ ಅಪಪ್ರಚಾರ ನಾವು ಸಹಿಸಲಾರೆವು. ಮನುಷ್ಯತ್ವ ಇರುವವರು ಯಾರೂ ಕೂಡ ಯಾವ ಕೊಲೆಗಳನ್ನೂ ಸಮರ್ಥಿಸಲು ಸಾಧ್ಯವಿಲ್ಲ. ಅಂತೆಯೇ ಕರಾವಳಿಯಲ್ಲಿ ನಡೆದ ಮಸೂದ್ ಮತ್ತು ಫಾಝಿಲ್ ಕೊಲೆಗೆ ಸಮಾನ ಪರಿಹಾರ ಮತ್ತು ನ್ಯಾಯ ದಾನದಲ್ಲಿ ಸರಕಾರ ತಾರತಮ್ಯವನ್ನೂ ನಾವು ಒಪ್ಪುವುದಿಲ್ಲ ಎಂದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ  ಪೆರಾಲ್ದರಕಟ್ಟೆ ಮಸ್ಜಿದ್ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ತ್ರಿಬಲ್ ತಲಾಕ್, ಶರೀಅತ್ ಕಾನೂನು, ಆಝಾನ್, ವ್ಯಾಪಾರ ಬಹಿಷ್ಕಾರ, ಜಟ್ಕ ಕಟ್, ಹೀಗೆ ಮುಸ್ಲಿಮರ ವಿರುದ್ಧ ನಿರಂತರ ದಮನಕಾರಿ ನಿಲುವು ತಾಳಿರುವ ಆಡಳಿತಗಾರರು ಇದೀಗ ಎನ್ ‌ಐಎ, ಯುಎಪಿಎ, ಇ. ಡಿ.ಯಂತಹಾ ಉನ್ನತ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಿದೆ. ಮದರಸದಲ್ಲಿ ಭಯೋತ್ಪಾದನೆ ಇದೆ ಎಂದು ಹೇಳಿಕೆ ನೀಡುತ್ತಿದ್ದು, ಸ್ವಾತಂತ್ರ್ಯ ಸಮರ ಕಾಲದಲ್ಲಿ ಇದೇ ಮದರಸ ಅಲ್ಲ ಕಲಿತ ಲಕ್ಷಕ್ಕೂ ಅಧಿಕ ಉಲಮಾಗಳು ಬ್ರಿಟೀಷರ ನೇಣಿಗೆ ಕೊರಳೊಡ್ಡಿದ್ದರು ಎಂಬ‌ ನೈಜ ಚರಿತ್ರೆಯನ್ನು ಅರಿಯಬೇಕು ಎಂದರು.

ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ಸೈಯ್ಯಿದ್ ಅಕ್ರಂ ಅಲೀ ತಂಙಳ್, ಐ.ಕೆ. ಮೂಸಾದಾರಿಮಿ ಕಕ್ಕಿಂಜೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಮುಸ್ಲಿಂ ಒಕ್ಕೂಟದ ಸದಸ್ಯ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಗುರುವಾಯನಕೆರೆ ದರ್ಗಾ ಸಮಿತಿ ಕಾರ್ಯದರ್ಶಿ ಉಮರ್ ಜಿ.ಕೆ.,  ಬೆಳ್ತಂಗಡಿ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ಇಸ್ಮಾಯಿಲ್ ಸಂಜಯನಗರ, ಜನಪರ ಚಳುವಳಿಗಾರ ದಮ್ಮಾನಂದ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಶೇಖರ್ ಲಾಯಿಲ, ಬೆಳ್ತಂಗಡಿ ಮಸ್ಜಿದ್ ಖತೀಬ್ ರಿಯಾಝ್ ಫೈಝಿ ಮೊದಲಾದವರು ಉಪಸ್ಥಿತರಿದ್ದರು.

ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ಪ್ರಾಸ್ತಾವಿಸಿ ಸ್ವಾಗತಿಸಿದರು. ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಸದಸ್ಯ ತಲ್ಹತ್ ಎಂ.ಜಿ., ಮುಸ್ಲಿಂ ಒಕ್ಕೂಟ ಸದಸ್ಯ ಅಬ್ದುಲ್ ಖಾದರ್ ಕಾರ್ಯಕ್ರಮ ನಿರೂಪಿಸಿದರು.


ನ್ಯಾಯಕ್ಕಾಗಿ ನಾವು ಯಾರ ಬಳಿ ಹೋಗಬೇಕು ?

ನನ್ನ ಮಗ ಫಾಝಿಲ್ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಆದರೂ ಅವನನ್ನು ಅನ್ಯಾಯವಾಗಿ ಕೊಲೆಗೈಯ್ಯಲಾಯಿತು. ನಮಗೆ‌ನ್ಯಾಯಕ್ಕಾಗಿ ಉನ್ನತ ಪೊಲೀಸ್ ಅಧಿಕಾರಿಗಳ ಮೊರೆ ಹೋದೆವು. ಆದರೂ ಯಾರೂ ಸ್ಪಂದಿಸಿಲ್ಲ.‌ ಕಮಿಷನರ್ ಸಹಿತ ಎಲ್ಲರಿಗೂ ಸತ್ಯ ಗೊತ್ತಿದ್ದರೂ ಆರೋಪಿಗಳನ್ನು ಬಂಧಿಸುತ್ತಿಲ್ಲ.

ಬಂಧಿತರಾದವರನ್ನೂ ಬಿಡುಗಡೆಗೊಳಿಸಲಾಗಿದೆ.‌ ನಮಗೆ ಪರಿಹಾರನೂ ಇಲ್ಲ.‌ಯಾವ ಮಂತ್ರಿಗಳಿಂದ ಸಾಂತ್ವನ ಭೇಟಿಯೂ ಇಲ್ಲ. ನಮಗೆ ನ್ಯಾಯ ಎಲ್ಲಿದೆ? ನ್ಯಾಯಕ್ಕಾಗಿ ನಾವು ಯಾರ ಬಳಿ ಹೋಗಬೇಕು ? ಎಂದು ಫಾಝಿಲ್ ಅವರ ತಂದೆ ಉಮರುಲ್ ಫಾರೂಕ್ ಪ್ರಶ್ನಿಸಿದರು.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ