ಮುಸ್ಲಿಮ್ ವಿದ್ಯಾರ್ಥಿನಿಗೆ ಬೆಂಗಾವಲಾಗಿ ನಿಂತ ನಾಲ್ವರು ಹಿಂದೂ ವಿದ್ಯಾರ್ಥಿನಿಯರು!

ಉಡುಪಿ: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ವೈಮನಸ್ಸು ಮೂಡಿರುವುದರ ನಡುವೆಯೇ ನಾಲ್ವರು ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಮ್ ವಿದ್ಯಾರ್ಥಿನಿಗೆ ಬೆಂಗಾವಲಾಗಿ ನಿಂತು ಕಾಲೇಜಿಗೆ ಕರೆದುಕೊಂಡು ಬರುತ್ತಿರುವ ಚಿತ್ರವೊಂದು ವೈರಲ್ ಆಗಿದೆ.
ಒಂದೇ ಮನೆಯ ಮಕ್ಕಳಂತಿದ್ದ ವಿದ್ಯಾರ್ಥಿಗಳ ನಡುವೆ ಬೀದಿ ರಾಜಕೀಯ ನುಸುಳಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಮನಸ್ಸು, ಹಿಜಾಬ್ ಹಾಗೂ ಕೇಸರಿ ಎಂಬ ಅನಗತ್ಯ ಬೇಧ ಭಾವಗಳಿಂದ ಕಲುಷಿತಗೊಂಡಿದೆ. ಈ ನಡುವೆ ಮುಸ್ಲಿಮ್ ವಿದ್ಯಾರ್ಥಿನಿಗೆ ಬೆಂಗಾವಲಾಗಿ ನಿಂತು ಕಾಲೇಜಿಗೆ ಕರೆದುಕೊಂಡು ಬರುತ್ತಿರುವ ಚಿತ್ರ ಭಾರತದ ಸಹೋದರತೆಯ ಸಂಕೇತವಾಗಿ ಕಂಡು ಬಂದಿದೆ.
ಮೊನ್ನೆಯ ತನಕ ಸಹೋದರತೆಯಿಂದ ವಿದ್ಯಾರ್ಥಿಗಳ ನಡುವೆ ಇದೀಗ ಪರಸ್ಪರ ಬೇಧ ಭಾವ ಸೃಷ್ಟಿಯಾಗಿದೆ. ಪ್ರತೀ ದಿನ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಅಪರಾಧಿಗಳಂತೆ ಗೇಟಿನ ಬಳಿ ನಿಂತುಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರತೀ ದಿನ ಮಾಧ್ಯಮಗಳಿಗೆ ಹೇಳಿಕೆ ನೀಡುವಂತಾಗಿದೆ.
ಕಾಲೇಜಿನತ್ತ ಕಾಲಿಟ್ಟಾಗಲೇ ಪೊಲೀಸರ ದರ್ಪದ ಮಾತುಗಳು, ಕಾಲೇಜು ಆಡಳಿತ ಮಂಡಳಿಯವರ ಚುಚ್ಚು ಮಾತುಗಳನ್ನು ಕೇಳಿ ವಿದ್ಯಾರ್ಥಿನಿಯರು ಮಾನಸಿಕವಾಗಿ ನೊಂದಿದ್ದಾರೆ. ಇನ್ನೊಂದೆಡೆ ಕೋರ್ಟ್ ನ ಆದೇಶವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ. ಈ ಎಲ್ಲ ಘಟನೆಗಳ ನಡುವೆಯೂ ವಿದ್ಯಾರ್ಥಿನಿಯರಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿದೆ ಎನ್ನುವ ನೋವಿನ ಮಾತುಗಳು ಕೇಳಿ ಬಂದಿದೆ.
ಇನ್ನೊಂದೆಡೆ ವಿದ್ಯಾಸಂಸ್ಥೆಗಳಲ್ಲಿ ಸೃಷ್ಟಿಯಾಗಿರುವ ಈ ವಿವಾದವನ್ನು ಪರಿಹರಿಸಬೇಕಾದ ಸರ್ಕಾರ, ಸಚಿವರು, ಬೇಜವಾಬ್ದಾರಿಯಿಂದ ಹೇಳಿಕೆಗಳನ್ನು ನೀಡುತ್ತಿದ್ದು, ಹಿಜಾಬ್ ವಿರುದ್ಧ ವಿವಾದ ಸೃಷ್ಟಿಯಾಗಲು ಪ್ರೇರಣೆ ನೀಡುವಂತೆ ಹೇಳಿಕೆ ನೀಡುತ್ತಿರುವುದು ಕಂಡು ಬಂದಿದೆ. ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ ಮೊದಲಾದ ಬಿಜೆಪಿ ನಾಯಕರು ವಿದ್ಯಾರ್ಥಿಗಳ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆ ನೀಡಿರುವುದು ವಿದ್ಯಾರ್ಥಿಗಳ ನಡುವೆ ಇನ್ನಷ್ಟು ಒಡಕು ಮೂಡಲು ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಒಂದಿಷ್ಟು ಸಂಘಟನೆಗಳು ಹಿಜಾಬ್ ಪರವಹಿಸಿ, ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು, ಇವೆರಡೂ ಕೂಡ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷವನ್ನು ಬಿತ್ತಲು ಕಾರಣವಾಗುತ್ತಿದೆ. ಇಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
30 ಕೋಟಿ ರೂ. ವಂಚನೆ: ಪಂಚಮುಖಿ ಚಿಟ್ ಫಂಡ್ ಡೈರೆಕ್ಟರ್ ಬಂಧನ
ಹಿಜಾಬ್ ವಿವಾದ: ಶಾಲೆಗೆ ನಾಗಸಾಧುಗಳ ಥರ ಬರ್ತೀನಿ ಅನ್ನೋಕ್ಕಾಗಲ್ಲ: ಸಿ.ಟಿ.ರವಿ
ಬ್ರೆಜಿಲ್: ಭೀಕರ ಪ್ರವಾಹ, ಭೂ ಕುಸಿತಕ್ಕೆ 94ಕ್ಕೂ ಹೆಚ್ಚು ಮಂದಿ ಬಲಿ