ನರಗುಂದ: ದಲಿತ ಬಾಲಕಿಯ ಬರ್ಬರ ಹತ್ಯೆ | ಅತ್ಯಾಚಾರ ನಡೆಸಿ ಸುಟ್ಟು ಹಾಕಿರುವ ಶಂಕೆ - Mahanayaka
6:53 PM Thursday 14 - November 2024

ನರಗುಂದ: ದಲಿತ ಬಾಲಕಿಯ ಬರ್ಬರ ಹತ್ಯೆ | ಅತ್ಯಾಚಾರ ನಡೆಸಿ ಸುಟ್ಟು ಹಾಕಿರುವ ಶಂಕೆ

naragunda
01/04/2021

ಗದಗ: ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ 15 ವರ್ಷದ ದಲಿತ ಬಾಲಕಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ವಿಚಾರಗಳು ಬಯಲಾಗಿವೆ.

ಮಾರ್ಚ್ 20ರಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ದಲಿತ ಬಾಲಕಿಯೋರ್ವಳು ತನ್ನ ಹೊಲದಲ್ಲಿ ಕೆಲಸ ಮಾಡಲು ತೆರಳಿದ್ದು,  ಆದರೆ ಆ ಬಳಿಕ ಆಕೆ ನಾಪತ್ತೆಯಾಗಿದ್ದಳು. ಬಾಲಕಿಯ ತಂದೆ, ನರಗುಂದದ ಹೊಟೇಲ್ ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಮಗಳು ಇರಲಿಲ್ಲ. ಹೀಗಾಗಿ ಆತಂಕದಿಂದ ಮಗಳಿಗೆ ಕರೆ ಮಾಡಿದ್ದಾರೆ. ಆದರೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು.

ಮಗಳಿಗೆ ಏನೋ ತೊಂದರೆಯುಂಟಾಗಿದೆ ಎಂದು ತಕ್ಷಣವೇ ಅವರು ನರಗುಂದ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ಈ ವೇಳೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ರಾತ್ರಿ 11 ಗಂಟೆಗೆ ಇಲ್ಲಿನ ನಿವಾಸಿಗಳು ಪೊಲೀಸರ ಮೇಲೆ ಒತ್ತಡ ಹಾಕಿದ ಬಳಿಕ ಪ್ರಕರಣ ದಾಖಲಿಸಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿರುವ ಬಗ್ಗೆ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಈ ನಡುವೆ ಮಾರ್ಚ್ 24ರಂದು ಬೆಳಗಾವಿಯ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಈರಪ್ಪ ಹಳೇಮನಿ ಎಂಬವರು ದೂರು ದಾಖಲಿಸಿದ್ದು, ತಮ್ಮ ಹೊಲದಲ್ಲಿ  ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ ಎಂದು  ತಿಳಿಸಿದ್ದಾರೆ.




ಮೃತದೇಹವು ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು.  ಆಕೆಯ ಮುಖವನ್ನು ಜಜ್ಜಿ ಹಾಕಲಾಗಿತ್ತು. ಬಲಗೈಯನ್ನು ಕತ್ತರಿಸಿ ಹಾಕಲಾಗಿತ್ತು. ಮೃತದೇಹ ಇಡೀ ಸುಟ್ಟು ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಾಂ ಬೆಟ್ಟಗೇರಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈತ ಮತ್ತು ಬಾಲಕಿಯ ನಡುವೆ ಪರಿಚಯವಿತ್ತು ಎಂದು ಕೆಲವರು ಆರೋಪಿಸಿದ್ದರು. ಆದರೆ ಪೊಲೀಸರ ವಿಚಾರಣೆಯ ವೇಳೆ ಆರೋಪಿಯು ಈ ಆರೋಪವನ್ನು ತಳ್ಳಿ ಹಾಕಿದ್ದಾನೆ.  ಆದರೆ ಇದೇ ಸಂದರ್ಭದಲ್ಲಿ, ಬಾಲಕಿಯು ಫೋನ್ ನಲ್ಲಿ ಕೋಪದಿಂದ ಆರೋಪಿಯ ಜೊತೆಗೆ ಒರಟಾಗಿ ಮಾತನಾಡಿದ್ದಾಳೆ ಎಂದು ಹೇಳಲಾಗಿದೆ. ಈ ಜಗಳವೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಸದ್ಯ ಪೊಲೀಸರು ಆರೋಫಿಯ ವಿರುದ್ಧ ಐಪಿಸಿ 302, 201ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಇನ್ನೂ ಬಾಲಕಿಯ ಮೃತದೇಹ ದೊರಕುತ್ತಿದ್ದಂತೆಯೇ ಈ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ ಸಮರ್ಪಕ ಮಾಹಿತಿ ಯಾರಿಗೂ ದೊರೆತಿರಲಿಲ್ಲ. ಇದೀಗ ಈ ಪ್ರಕರಣದ ಬಗ್ಗೆ ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಹೋರಾಟ ಆರಂಭಿಸಿವೆ.

ಇತ್ತೀಚಿನ ಸುದ್ದಿ