ಕಾನೂನಿನ ಸಂಕೋಲೆಯಲ್ಲಿ ಸಿಲುಕಿದ ಕಮಲಾಕರ್ ಭಟ್ ಭವಿಷ್ಯ: ಜೈಲಿನಿಂದ ಹೊರಬರುವ ಆಸೆಯಲ್ಲಿದ್ದ ಜ್ಯೋತಿಷಿಗೆ ಮತ್ತೊಂದು ಶಾಕ್! - Mahanayaka
12:48 PM Wednesday 15 - April 2026

ಕಾನೂನಿನ ಸಂಕೋಲೆಯಲ್ಲಿ ಸಿಲುಕಿದ ಕಮಲಾಕರ್ ಭಟ್ ಭವಿಷ್ಯ: ಜೈಲಿನಿಂದ ಹೊರಬರುವ ಆಸೆಯಲ್ಲಿದ್ದ ಜ್ಯೋತಿಷಿಗೆ ಮತ್ತೊಂದು ಶಾಕ್!

kamalakar bhat
21/02/2026

ಕಾರವಾರ: ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಅವರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ಭಟ್‌ ಗೆ ಈಗ ಮತ್ತೊಂದು ಆಘಾತ ಎದುರಾಗಿದ್ದು, ಅವರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಪೋಕ್ಸೋ (POCSO) ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೈಲುವಾಸ ವಿಸ್ತರಣೆ ಸಾಧ್ಯತೆ:

ವಸಂತ್ ನಾಯ್ಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕರ ಭಟ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯ ವೇಳೆ ತಾವು ಕೊಲೆ ನಡೆದ ಸ್ಥಳದಲ್ಲಿ ಇರಲಿಲ್ಲ ಎಂದು ಅವರು ವಾದಿಸಿದ್ದರು. ತಾಂತ್ರಿಕ ತನಿಖೆಯಲ್ಲೂ ಅವರು ಘಟನಾ ಸ್ಥಳದಲ್ಲಿ ಇರಲಿಲ್ಲ ಎಂಬುದು ದೃಢಪಟ್ಟಿತ್ತು. ಇದರಿಂದಾಗಿ ಅವರು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಈಗ ದಾಖಲಾಗಿರುವ ಗಂಭೀರ ಸ್ವರೂಪದ ಪೋಕ್ಸೋ ಪ್ರಕರಣದಿಂದಾಗಿ ಅವರು ಜೈಲಿನಿಂದ ಹೊರಬರುವುದು ಮತ್ತಷ್ಟು ಕಷ್ಟಕರವಾಗಿದೆ.

ಜ್ಯೋತಿಷ್ಯದ ಮೂಲಕ ಅಪಾರ ಹಣ, ಆಸ್ತಿ ಮತ್ತು ರಾಜಕೀಯ ಪ್ರಭಾವ ಹೊಂದಿದ್ದ ಕಮಲಾಕರ ಭಟ್ ಅವರ ಭವಿಷ್ಯ ಈಗ ಕಾನೂನು ಸಂಕೋಲೆಯಲ್ಲಿ ಸಿಲುಕಿ ತಲೆಕೆಳಗಾದಂತಾಗಿದೆ. ಸಿದ್ದಾಪುರ ಪೊಲೀಸರು ಈ ಹೊಸ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ