ಅಮೆರಿಕದಿಂದ ಬಂದ ಭಾರತೀಯ ತನ್ನ ಮನೆಯ ಮೇಲೆ 'ಸ್ಟ್ಯಾಚು ಆಫ್ ಲಿಬರ್ಟಿ' ಪ್ರತಿಮೆ ನಿರ್ಮಿಸಿದ! - Mahanayaka

ಅಮೆರಿಕದಿಂದ ಬಂದ ಭಾರತೀಯ ತನ್ನ ಮನೆಯ ಮೇಲೆ ‘ಸ್ಟ್ಯಾಚು ಆಫ್ ಲಿಬರ್ಟಿ’ ಪ್ರತಿಮೆ ನಿರ್ಮಿಸಿದ!

liberty replica on jalandhar
23/03/2026

ಜಲಂಧರ್: ಪಂಜಾಬ್‌ನ ಜಲಂಧರ್ ಜಿಲ್ಲೆಯ ಕಿಶನ್‌ ಪುರ ಎಂಬ ಪ್ರದೇಶವೀಗ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಅಲ್ಲಿನ ಮನೆಯೊಂದರ ಮೇಲೆ ತಲೆ ಎತ್ತಿರುವ ಅಮೆರಿಕದ ಪ್ರಸಿದ್ಧ ‘ಸ್ಟ್ಯಾಚು ಆಫ್ ಲಿಬರ್ಟಿ’ಯ (Statue of Liberty) ಪ್ರತಿರೂಪ.

ಕಳೆದ 26 ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ (NRI) ಗುರ್ಜೀತ್ ಸಿಂಗ್ ಮಥಾರು ಎಂಬುವವರು, ಜಲಂಧರ್‌ ನಲ್ಲಿರುವ ತಮ್ಮ ಪೂರ್ವಜರ ಮನೆಯ ನಾಲ್ಕನೇ ಮಹಡಿಯ ಮೇಲೆ ಈ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯು ಈಗ ಸ್ಥಳೀಯವಾಗಿ ದೊಡ್ಡ ಆಕರ್ಷಣೆಯಾಗಿದೆ. ಜನರು ದಾರಿಹೋಕರು ನಿಂತು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಥಾರು, “ನಾನು ನ್ಯೂಯಾರ್ಕ್‌ನಲ್ಲಿ ಓಡಾಡುವಾಗಲೆಲ್ಲಾ ಸ್ಟ್ಯಾಚು ಆಫ್ ಲಿಬರ್ಟಿ ನೋಡಿದಾಗ ನನಗೆ ವಿಶೇಷ ಅನುಭೂತಿಯಾಗುತ್ತಿತ್ತು. ನಾನು ಪ್ರತಿ ವರ್ಷ ಭಾರತಕ್ಕೆ ಬರುತ್ತೇನೆ, ಆದರೆ ಆ ನೆನಪುಗಳು ಸದಾ ನನ್ನೊಂದಿಗಿರಲಿ ಎಂಬ ಕಾರಣಕ್ಕೆ ನನ್ನ ಮನೆಯ ಮೇಲೆಯೇ ಇದನ್ನು ನಿರ್ಮಿಸಲು ನಿರ್ಧರಿಸಿದೆ. ನ್ಯೂಯಾರ್ಕ್‌ನಲ್ಲಿ ಜನರು ಈ ಪ್ರತಿಮೆಯ ಮುಂದೆ ಫೋಟೋ ತೆಗೆದುಕೊಳ್ಳಲು ಇಷ್ಟಪಡುತ್ತಾರೆ, ಹಾಗೆಯೇ ಇಲ್ಲಿನ ಜನರಿಗೂ ಅಂತಹ ಅನುಭವ ಸಿಗಲಿ ಎಂಬುದು ನನ್ನ ಆಸೆ,” ಎಂದು ತಿಳಿಸಿದ್ದಾರೆ.

ಈ ಪ್ರತಿಮೆಯನ್ನು ನಿರ್ಮಿಸಲು ಸುಮಾರು 20 ರಿಂದ 25 ದಿನಗಳ ಸಮಯ ಹಿಡಿದಿದೆ. ಪ್ರತಿಮೆಯ ಸುತ್ತ ಅಮೆರಿಕದ ಧ್ವಜಗಳನ್ನು ಹಾಕಲಾಗಿದ್ದು, ಮಥಾರು ಅವರು ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಅಭಿಮಾನಿಯಾಗಿರುವುದರಿಂದ ಅವರ ಪೋಸ್ಟರ್‌ ಗಳನ್ನು ಸಹ ಅಲ್ಲಿ ಅಳವಡಿಸಿದ್ದಾರೆ. ಅಮೆರಿಕದಲ್ಲಿ ಇವರು ಕನ್‌ಸ್ಟ್ರಕ್ಷನ್ ಉದ್ಯಮವನ್ನು ನಡೆಸುತ್ತಿದ್ದಾರಂತೆ.

ಪಂಜಾಬ್‌ನ ದೋವಾಬಾ ಪ್ರಾಂತ್ಯದಲ್ಲಿ ಅನಿವಾಸಿ ಭಾರತೀಯರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಮನೆಗಳ ಮೇಲೆ ವಿಮಾನಗಳು, ಟ್ಯಾಂಕ್‌ ಗಳು, ಫುಟ್‌ ಬಾಲ್ ಅಥವಾ ಟ್ರಾಕ್ಟರ್‌ ಗಳ ಮಾದರಿಯ ನೀರಿನ ಟ್ಯಾಂಕ್‌ ಗಳನ್ನು ನಿರ್ಮಿಸುವುದು ಸಾಮಾನ್ಯ. ಆದರೆ ಈಗ ಈ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ ಹೊಸ ಟ್ರೆಂಡ್ ಸೃಷ್ಟಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ