ಬಿರು ಬಿಸಿಲಿಗೆ ತತ್ತರಿಸಿದ ಉತ್ತರ ಕರ್ನಾಟಕ: ಕಲಬುರಗಿಯಲ್ಲಿ 45 ಡಿಗ್ರಿ ತಲುಪಿದ ತಾಪಮಾನ, ‘ಆರೆಂಜ್ ಅಲರ್ಟ್’ ಘೋಷಣೆ
ಕಲಬುರಗಿ: ಏಪ್ರಿಲ್ ತಿಂಗಳ ಆರಂಭದಲ್ಲೇ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಧಗೆ ಮಿತಿ ಮೀರಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ವರದಿಯ ಪ್ರಕಾರ, ಏಪ್ರಿಲ್ 15ರಂದು ಕಲಬುರಗಿ ಜಿಲ್ಲೆಯ ಔರಾದ್ ಹೋಬಳಿಯಲ್ಲಿ ರಾಜ್ಯದಲ್ಲೇ ಗರಿಷ್ಠ ಅಂದರೆ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕಲಬುರಗಿಯ ಔರಾದ್ನಲ್ಲಿ 45 ಡಿಗ್ರಿ ದಾಖಲಾಗಿದ್ದರೆ, ಚಿಂಚೋಳಿಯ ಐನಾಪುರ ಮತ್ತು ಅಫಜಲ್ಪುರದ ಅತನೂರು ಹೋಬಳಿಯಲ್ಲಿ 44.3 ಡಿಗ್ರಿ ತಾಪಮಾನ ದಾಖಲಾಗಿದೆ.
ಬೀದರ್ನ ಸಂತಪುರದಲ್ಲಿ 44.4 ಡಿಗ್ರಿ ಹಾಗೂ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಗುರುಗುಂಟಾದಲ್ಲಿ 44.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳ ಅನೇಕ ಕಡೆಗಳಲ್ಲಿ ತಾಪಮಾನ 42 ಡಿಗ್ರಿ ದಾಟಿದೆ.
ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕಲಬುರಗಿ ಜಿಲ್ಲಾಡಳಿತವು ಏಪ್ರಿಲ್ 15 ರಿಂದ 17 ರವರೆಗೆ ‘ಆರೆಂಜ್ ಹೀಟ್ ವೇವ್ ಅಲರ್ಟ್’ ಘೋಷಿಸಿದೆ.
ಸಾರ್ವಜನಿಕರು ಅನಗತ್ಯವಾಗಿ ಬಿಸಿಲಿನಲ್ಲಿ ಓಡಾಡಬಾರದು, ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಸುಡುವ ಬಿಸಿಲಿನ ಮಧ್ಯಾಹ್ನ ಸಮಯದಲ್ಲಿ ಟ್ರಾಫಿಕ್ ಸಿಗ್ನಲ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 19 ರವರೆಗೆ ಉತ್ತರ ಒಳನಾಡಿನಲ್ಲಿ ಉಷ್ಣ ಅಲೆ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದಲ್ಲಿಯೂ ಹೆಚ್ಚಿನ ತೇವಾಂಶ ಮತ್ತು ಬಿಸಿ ವಾತಾವರಣ ಇರಲಿದೆ ಎಂದು ಎಚ್ಚರಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























