ಓಲಾ ಎಲೆಕ್ಟ್ರಿಕ್ ಕಂಪನಿಯಿಂದ 500 ಉದ್ಯೋಗಿಗಳ ಜಾಬ್ ಕಟ್ ಗೆ ನಿರ್ಧಾರ!
Ola Job Cut: ಬೆಂಗಳೂರು: ಓಲಾ ಎಲೆಕ್ಟ್ರಿಕ್ ಕಂಪನಿಯು ಸುಮಾರು 500 ಉದ್ಯೋಗಿಗಳ ಜಾಬ್ ಕಟ್ ಮಾಡಲು ಮುಂದಾಗಿದೆಯಂತೆ! ಹೀಗಂತ ಮನಿಕಂಟ್ರೋಲ್ ವರದಿ ಮಾಡಿದೆ.
ಕಂಪನಿಯು ಲಾಭ ಸುಧಾರಿಸುವ ಸಲುವಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ಸಂಸ್ಥೆಯೊಳಗಿನ ಮೂಲಗಳು ತಿಳಿಸಿವೆ. ಕಂಪನಿಯು ಆರಂಭಿಕ ಷೇರು ವಿತರಣೆ ಮೂಲಕ ಷೇರುಪೇಟೆಗೆ ಪ್ರವೇಶ ಪಡೆಯುವ ಮೊದಲು ಎರಡು ಬಾರಿ ಜಾಬ್ ಕಟ್ ಮಾಡಿತ್ತು. 2022ರ ಸೆಪ್ಟೆಂಬರ್ನಲ್ಲಿ ಎರಡು ಬಾರಿ ಪುನರ್ರಚನೆ ಚಟುವಟಿಕೆ ನಡೆಸಿತ್ತು. ಇದೇ ಸಮಯದಲ್ಲಿ ಹೊಸ ನೇಮಕವನ್ನೂ ಘೋಷಿಸಲಾಗಿತ್ತು.
2022ರ ಜುಲೈ ತಿಂಗಳಿನಲ್ಲಿ ಸುಮಾರು 1 ಸಾವಿರ ಜನರು ಉದ್ಯೋಗ ಕಳೆದುಕೊಂಡಿದ್ದರು. ಈ ಸಮಯದಲ್ಲಿ ಬಳಕೆ ಮಾಡಿದ ಕಾರುಗಳು, ಕ್ಲೌಡ್ ಕಿಚನ್, ದಿನಸಿ ವಿತರಣೆ ವ್ಯವಹಾರ ಮುಚ್ಚಿತ್ತು. ಈ ಚಟುವಟಿಕೆಯಲ್ಲಿ ಸಾವಿರ ಜನರು ಉದ್ಯೋಗ ಕಳೆದುಕೊಂಡರು. ಇದೇ ಸಮಯದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ವಹಿವಾಟಿಗಾಗಿ ಸುಮಾರು 800 ಉದ್ಯೋಗಿಗಳನ್ನು ನೇಮಕ ಮಾಡುವ ಯೋಜನೆ ಪ್ರಕಟಿಸಿತ್ತು.
ಓಲಾ ಎಲೆಕ್ಟ್ರಿಕ್ ನ ಸಹೋದರಿ ಸಂಸ್ಥೆ ಓಲಾ ಕನ್ಸೂಮರ್ ಕೂಡ ಸುಮಾರು ಏಳು ತಿಂಗಳ ಹಿಂದೆ ಸಂಸ್ಥೆ ಪುನರ್ರಚನೆ ಚಟುವಟಿಕೆ ಆರಂಭಿಸಿತ್ತು. ಇದು ಸಂಸ್ಥೆಯ ಶೇಕಡ 10ರಷ್ಟು ಉದ್ಯೋಗಿಗಳ ಉದ್ಯೋಗದ ಮೇಲೆ ಪರಿಣಾಮ ಬೀರಿತ್ತು. ಇದೇ ಸಮಯದಲ್ಲಿ ಓಲಾ ಕ್ಯಾಬ್ಸ್ನ ಸಿಇಒ ಹೇಮಂತ್ ಬಕ್ಷಿ ಕೂಡ ಉದ್ಯೋಗ ಬಿಟ್ಟಿದ್ದರು ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಓಲಾ ಎಲೆಕ್ಟ್ರಿಕ್ನ ಎರಡನೇ ತ್ರೈಮಾಸಿಕದ ಫಲಿತಾಂಶ ಪ್ರಕಟವಾಗಿದೆ. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 38.5ರಷ್ಟು ಏರಿಕೆಯಾಗಿದೆ. ಕಂಪನಿಯ ಆದಾಯ 1,240 ಕೋಟಿ ರೂಗೆ ತಲುಪಿದೆ. ಕಂಪನಿಯ ಸ್ಕೂಟರ್ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ, ಗ್ರಾಹಕರಿಗೆ ನೀಡುವ ಸರ್ವೀಸ್ ವಿಚಾರಗಳ ಕುರಿತು ದೂರುಗಳ ಹೆಚ್ಚುತ್ತಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: