ಬಡವರ ಹಸಿವಿನ ಅರಿವಿಲ್ಲದವರಿಂದ ಬೀದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ: ಸಂವಿಧಾನ ವಿರೋಧಿ ಕೃತ್ಯ; ಮುನೀರ್ ಕಾಟಿಪಳ್ಳ ಆಕ್ರೋಶ
ಮಂಗಳೂರು: ಬಡವರ ಬದುಕಿನ ಕಷ್ಟ ಹಾಗೂ ಹಸಿವಿನ ಅರಿವಿಲ್ಲದೆ, ಬೀದಿಬದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸುವುದು ಸಂಪೂರ್ಣವಾಗಿ ಸಂವಿಧಾನ ವಿರೋಧಿ ಕೃತ್ಯವಾಗಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ನೇತೃತ್ವದಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಗಲು–ರಾತ್ರಿ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬೀದಿಬದಿ ವ್ಯಾಪಾರಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ಹಾಗೂ ಸಾಂಪ್ರದಾಯಿಕ ‘ಸಂಡೆ ಬಜಾರ್’ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, “ರಾಜ್ಯದ ಕೆಲವು ಸಚಿವರು ಮತ್ತು ಬಡವರ ಪರಿಸ್ಥಿತಿಯ ಅರಿವಿಲ್ಲದ ಅಧಿಕಾರಿಗಳು ಯುರೋಪ್ ರಾಷ್ಟ್ರಗಳ ಮಾದರಿಯಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ, ಅದೇ ಯುರೋಪ್ ದೇಶಗಳ ಮಾದರಿಯಲ್ಲಿ ಇಲ್ಲಿನ ಜನರಿಗೆ ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದಂತಹ ನೂರಕ್ಕೆ ನೂರರಷ್ಟು ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.
ಜನರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಕೇವಲ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ತಕ್ಷಣ ನಿಲ್ಲಿಸಬೇಕು. ಸಂಡೆ ಬಜಾರ್ ವ್ಯಾಪಾರವನ್ನು ನಂಬಿಕೊಂಡಿರುವ ಬಡ ಗ್ರಾಹಕರು ಹಾಗೂ ವ್ಯಾಪಾರಿಗಳ ಹಿತಾಸಕ್ತಿಯನ್ನು ಮಹಾನಗರ ಪಾಲಿಕೆ ಗೌರವಿಸಬೇಕು. ಒಂದು ವೇಳೆ ವ್ಯಾಪಾರಿಗಳ ಮೇಲಿನ ದಬ್ಬಾಳಿಕೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ಪಾಲಿಕೆಗೆ ಎಚ್ಚರಿಕೆ ನೀಡಿದರು.
ಸಿಐಟಿಯು ಜಿಲ್ಲಾ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಜಯಂತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಸುನಿಲ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಜ್, ರಮೇಶ್ ಉಳ್ಳಾಲ್, ರವಿಚಂದ್ರ ಕೊಂಚಾಡಿ, ಜಯಂತ್ ನಾಯ್ಕ್, ಯೋಗೀಶ್ ಜಪ್ಪಿನಮೊಗರು ಹಾಗೂ ಪದ್ಮಾವತಿ ಶೆಟ್ಟಿ ಅವರು ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದರು.
ಧರಣಿ ಸತ್ಯಾಗ್ರಹದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್. ಎಸ್, ವಿಜಯ್ ಜೈನ್, ಶಿವಪ್ಪ, ರಿಯಾಜ್ ಮದಕ, ನೌಶಾದ್ ಕಣ್ಣೂರ್, ಮಾಜಿ ವಿದ್ಯಾರ್ಥಿ ನಾಯಕ ಹಿದಾಯತುಲ್ಲ ಅಡ್ಡೂರು ಹಾಗೂ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಪ್ರಮೋದಿನಿ, ವಿಲಾಸಿನಿ ಸೇರಿದಂತೆ ನೂರಾರು ವ್ಯಾಪಾರಿಗಳು ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























