ಬಿ.ಎಲ್.ಒ.ಗೆ ಜಾತಿ ನಿಂದನೆ ಆರೋಪ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ದಿನೇಶ್ ಮುಳೂರು ಆಗ್ರಹ
ಬೆಳ್ತಂಗಡಿ: ತಾಲ್ಲೂಕಿನಲ್ಲಿ ಎಸ್ ಐಆರ್ ಕರ್ತವ್ಯ ನಿರ್ವಹಿಸಲು ತೆರಳಿದ್ದ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ.) ಅವರಿಗೆ ಜಾತಿ ನಿಂದನೆ ಮಾಡಿ ಅವಮಾನಿಸಲಾಗಿದೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ದಿನೇಶ್ ಮುಳೂರು ತೀವ್ರವಾಗಿ ಖಂಡಿಸಿದ್ದಾರೆ.
ಭಾರತದ ಸಂವಿಧಾನದ ಆರ್ಟಿಕಲ್ 14 ಎಲ್ಲರಿಗೂ ಕಾನೂನಿನ ಮುಂದೆ ಸಮಾನತೆ ಹಾಗೂ ಸಮಾನ ಕಾನೂನು ರಕ್ಷಣೆಯನ್ನು ಖಾತರಿಪಡಿಸುತ್ತದೆ. ಆರ್ಟಿಕಲ್ 15 ಜಾತಿ, ಧರ್ಮ, ಲಿಂಗ, ಜನ್ಮಸ್ಥಳ ಮೊದಲಾದ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯವನ್ನು ನಿಷೇಧಿಸುತ್ತದೆ. ಆರ್ಟಿಕಲ್ 17 ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಅದರ ಯಾವುದೇ ರೂಪದ ಆಚರಣೆಯನ್ನು ಕಾನೂನುಬಾಹಿರವೆಂದು ಘೋಷಿಸಿದೆ. ಕರ್ತವ್ಯ ನಿರ್ವಹಿಸಲು ತೆರಳಿದ ಸರ್ಕಾರಿ ಅಧಿಕಾರಿಯನ್ನು ಜಾತಿಯ ಹೆಸರಿನಲ್ಲಿ ಅವಮಾನಿಸುವುದು ಈ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದ ಕೃತ್ಯವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸುವಂತಹ ವಾತಾವರಣವನ್ನು ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಖಚಿತಪಡಿಸಬೇಕು. ಜಾತಿ ಆಧಾರಿತ ದೌರ್ಜನ್ಯ ಮತ್ತು ಅವಮಾನ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹ ಕೃತ್ಯವಾಗಿದ್ದು, ಇಂತಹ ಘಟನೆಗಳಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ಪ್ರಕರಣದ ಕುರಿತು ಪೊಲೀಸ್ ಇಲಾಖೆ ನಿಷ್ಪಕ್ಷಪಾತ ಹಾಗೂ ಶೀಘ್ರ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಸೇರಿದಂತೆ ಅನ್ವಯಿಸುವ ಎಲ್ಲಾ ಕಾನೂನುಗಳಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಮುಳೂರು ಆಗ್ರಹಿಸಿದ್ದಾರೆ.
ಜಾತಿ ನಿಂದನೆ ಮತ್ತು ಸಾಮಾಜಿಕ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಸಂವಿಧಾನ ನೀಡಿರುವ ಸಮಾನತೆ, ಗೌರವ ಮತ್ತು ನ್ಯಾಯದ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























