ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ - Mahanayaka

ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

kashmir files
15/03/2022

ಉನ್ಮತ್ತ ಮತೀಯ ರಾಜಕಾರಣದಲ್ಲಿ ಹತ್ಯಾಕಾಂಡಗಳೂ ಲಾಭದಾಯಕವಾಗಿ ಕಾಣುತ್ತವೆ

  • ನಾ ದಿವಾಕರ

ಆಧುನಿಕ ಭಾರತೀಯ ಸಮಾಜದ ಒಂದು ವೈಶಿಷ್ಟ್ಯ ಎಂದರೆ ಇಲ್ಲಿ ಸಾವು ಅನೇಕ ಸಂದರ್ಭಗಳಲ್ಲಿ ಲಾಭದಾಯಕ ಮಾರುಕಟ್ಟೆ ವಸ್ತುವಾಗಿಬಿಡುತ್ತದೆ. ಸಾಮೂಹಿಕ ಸಾವು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಲಕಿಬಿಡುತ್ತದೆ ಅಷ್ಟೇ ವೇಗವಾಗಿ ನಮ್ಮ ಸ್ಮೃತಿಯಿಂದ ಜಾರಿಬಿಡುತ್ತದೆ. ಆಳುವ ವರ್ಗಗಳಿಗೆ ಪ್ರತಿಯೊಬ್ಬ ಪ್ರಜೆಯ ಅಸಹಜ ಸಾವೂ ಬೊಕ್ಕಸಕ್ಕೆ ಹೊರೆಯಾಗುವ ಒಂದು ವಿದ್ಯಮಾನವಾಗಿ ಕಾಣುತ್ತದೆ. ರಾಜಕೀಯ ಪಕ್ಷಗಳಿಗೆ ಸಾವುಗಳು ಜಾತಿ, ಮತ, ಧರ್ಮ ಮತ್ತು ಸಮುದಾಯದ ಅಸ್ಮಿತೆಗಳನ್ನಾಧರಿಸಿ ಪ್ರಾಧಾನ್ಯತೆ ಪಡೆದುಕೊಳ್ಳುತ್ತವೆ. ಕೋಮು ಗಲಭೆಗಳಾಗಲೀ, ಮತೀಯ ದ್ವೇಷದ ಹತ್ಯಾಕಾಂಡಗಳಾಗಲೀ, ಜಾತಿ ದ್ವೇಷದ ಕಗ್ಗೊಲೆಗಳಾಗಲೀ ಭಾರತದ ಆಡಳಿತ ವ್ಯವಸ್ಥೆಯ ಪಾಲಿಗೆ ಕೇವಲ ನಿವಾರಿಸಬೇಕಾದ ಸಮಸ್ಯೆಗಳಾಗಿ ಪರಿಣಮಿಸುವುದೇ ಹೊರತು ಮನುಜ ಸೂಕ್ಷ್ಮತೆಯುಳ್ಳ ವಿದ್ಯಮಾನವಾಗಿ ಕಾಣುವುದೇ ಇಲ್ಲ.

ಸಾಮೂಹಿಕ ಹತ್ಯಾಕಾಂಡವನ್ನು ಹೇಗೆ ವ್ಯಾಖ್ಯಾನಿಸುವುದು ? ಕನಿಷ್ಟ ಇಂತಿಷ್ಟು ಜನರ ಹತ್ಯೆಯನ್ನು ಮಾತ್ರವೇ ಸಾಮೂಹಿಕ ಎನ್ನಬಹುದೇ ? ಅಥವಾ ಒಂದಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಜನರು ಹತ್ಯೆಗೀಡಾದರೆ ಅದನ್ನೂ ಸಾಮೂಹಿಕ ಹತ್ಯೆ ಎನ್ನಬಹುದೇ ? ಇದು ಕಾನೂನು, ಶಾಸನಗಳ ಪರಿಭಾಷೆಯಲ್ಲಿ ನಿಷ್ಕರ್ಷೆಗೊಳಗಾದಾಗ ಅಂಕಿ ಸಂಖ್ಯೆಗಳೇ ಪ್ರಧಾನವಾಗಿಬಿಡುತ್ತವೆ. ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಬಿದ್ದ ಶವಗಳು ಮತ್ತು ನೀಡಬೇಕಾದ ಪರಿಹಾರದ ಮೊತ್ತ ಇವೆರಡೇ ಮುಖ್ಯವಾಗಿಬಿಡುತ್ತದೆ. ಆದರೆ ಸಾರ್ವಜನಿಕ ಪ್ರಜ್ಞೆ ಎನ್ನುವುದೊಂದಿದ್ದರೆ ಇಂತಹ ಪ್ರತಿಯೊಂದು ಸಾವು ನಮ್ಮೊಳಗಿನ ಸಾಮಾಜಿಕ-ಮಾನವೀಯ ಪ್ರಜ್ಞೆಯನ್ನು ಕದಡಬೇಕಲ್ಲವೇ ? ಸಾವಿಗೀಡಾದ ಅಥವಾ ಹತ್ಯೆಗೀಡಾದ ಅಮಾಯಕರ ಜಾತಿ, ಮತ, ಅಂತಸ್ತು ಮತ್ತು ಸಾಮಾಜಿಕ ಸ್ಥಾನಮಾನಗಳೇ ಅಪರಾಧಿಗಳನ್ನು ನಿರ್ಧರಿಸುವ ಒಂದು ವಿಕೃತ ಸಾಂಸ್ಕೃತಿಕ ವಾತಾವರಣದಲ್ಲಿರುವ ಭಾರತ, ಇಂದಿಗೂ ಸಹ ಸಾವನ್ನು ಸಂಭ್ರಮಿಸುವ ಒಂದು ದೇಶವಾಗಿಯೇ ಕಂಡರೆ ಅಚ್ಚರಿಯೇನಿಲ್ಲ.

ಒಂದು ಸಾವಿಗೆ ಮತ್ತೊಂದು ಸಾವು ಅಥವಾ ಒಂದು ಸಮುದಾಯದ ನೋವಿಗೆ ಮತ್ತೊಂದು ಸಮುದಾಯದ ನೋವು ಮುಖಾಮುಖಿಯಾಗುತ್ತಾ ಹೋದರೆ, ನೊಂದ ಮನಗಳು, ಹತ್ಯೆಗೀಡಾಗುವ ಜೀವಗಳು ಅಸ್ಮಿತೆಯ ಚೌಕಟ್ಟಿನೊಳಗೇ ಕೊಳೆತು, ಕೊಳೆತ ಶವಗಳಂತೆಯೇ ವಿಸ್ಮೃತಿಗೆ ಜಾರಿಬಿಡುತ್ತವೆ. ಹಾಗೆಯೇ ಸ್ವತಂತ್ರ ಭಾರತದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಶೋಷಿತ ಸಮುದಾಯಗಳ ವಿರುದ್ಧ, ಜಾತಿ ಶ್ರೇಣಿಯಲ್ಲಿ ನಿಕೃಷ್ಟವಾಗಿ ಕಾಣಲ್ಪಡುವ ಜನಸಮುದಾಯಗಳ ವಿರುದ್ಧ ನಡೆದ ಅನೇಕ ಹತ್ಯಾಕಾಂಡಗಳು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿಯೇ ವಿಸ್ಮೃತಿಗೆ ಜಾರಿರುವುದನ್ನು ಕಾಣಬಹುದು. ಹತ್ಯಾಕಾಂಡದ ರೂವಾರಿಗಳನ್ನು ಸಂರಕ್ಷಿಸುವ ಅಸ್ಮಿತೆಯ ರಾಜಕಾರಣವೇ ಹತ್ಯೆಗೊಳಗಾದವರ ಮೂಕ ವೇದನೆಯನ್ನೂ ನಿಶ್ಶೇಷವಾಗಿಸಿಬಿಡುತ್ತದೆ.

ಹಾಗಾಗಿಯೇ ನಮಗೆ 1984ರ ಸಿಖ್ ಹತ್ಯಾಕಾಂಡ ಮತ್ತು 2002ರ ಗುಜರಾತ್ ನರಮೇಧ ಎರಡೂ ಸಹ ಸಾಂದರ್ಭಿಕ ಪ್ರಕ್ಷುಬ್ಧತೆಯಾಗಿ ಮಾತ್ರವೇ ಕಾಣುತ್ತದೆ ಎರಡೂ ಸಂದರ್ಭಗಳಲ್ಲಿ ಮತೀಯ ರಾಜಕೀಯ ದ್ವೇಷವೇ ಪ್ರಧಾನವಾಗಿದ್ದರೂ, ಇಲ್ಲಿ ಹತ್ಯೆಗೊಳಗಾದ ನೂರಾರು ಜೀವಗಳು ಒಂದು ನಿರ್ದಿಷ್ಟ ಅಸ್ಮಿತೆಗೆ ಸಿಲುಕಿ ಸಾವಿಗೆ ಅರ್ಹತೆಯನ್ನು ಪಡೆದುಬಿಡುತ್ತವೆ. ಈ ಹತ್ಯಾಕಾಂಡಗಳ ರೂವಾರಿಗಳೂ ಸಹ ಮತ್ತೊಂದು ಅಸ್ಮಿತೆಯ ಭೂಮಿಕೆಯ ಮೇಲೆ ಮಾನ್ಯತೆ ಪಡೆದುಬಿಡುತ್ತಾರೆ. ಒಬ್ಬ ಹರ್ಷನ ಸಾವಿಗೆ ಇಡೀ ಸರ್ಕಾರವೇ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಕರಾಳ ಶಾಸನಗಳನ್ನು ಬಳಸುವ ಒಂದು ದೇಶದಲ್ಲಿ, ಗುಜರಾತ್ನ ಹತ್ಯಾಕಾಂಡದಲ್ಲಿ ಸಂಭವಿಸಿದ ಸಾವಿರಾರು ಸಾವುಗಳ ಕಾರಣಕರ್ತರು ಯಾರೆಂದೇ ತಿಳಿಯುವುದಿಲ್ಲ. 21ನೆಯ ಶತಮಾನದ ಭೀಕರ ಹತ್ಯಾಕಾಂಡಗಳಲ್ಲೊಂದಾದ ಗುಜರಾತ್ ಘಟನೆಗಳಲ್ಲಿ ಯಾರಿಗೂ ಶಿಕ್ಷೆಯಾಗುವುದೂ ಇಲ್ಲ. ಬದಲಾಗಿ ಈ ಸಾಮೂಹಿಕ ಸಾವುಗಳೇ ಉನ್ಮತ್ತ ರಾಜಕಾರಣಕ್ಕೆ ಬಂಡವಾಳವಾಗಿಬಿಡುತ್ತದೆ.

ಶ್ರೇಣೀಕೃತ ಸಮಾಜದಲ್ಲಿ ಶವಗಳೂ ಸಹ ಶ್ರೇಣೀಕರಣಕ್ಕೊಳಗಾಗುತ್ತಿರುವುದು ಅಚ್ಚರಿಯ ವಿಚಾರವೇನಲ್ಲ. ಹಾಗೆಯೇ ಹತ್ಯೆಗೊಳಗಾದ ಅಮಾಯಕ ಜೀವಗಳು ಯಾವ ಶ್ರೇಣಿಗೆ ಸೇರುತ್ತವೆ ಎನ್ನುವುದನ್ನು ಆಧರಿಸಿಯೇ ಸಾರ್ವಜನಿಕ ಅಭಿಪ್ರಾಯವನ್ನೂ ರೂಪಿಸಲಾಗುತ್ತದೆ. ಮೇಲ್ಜಾತಿಯ-ಮೇಲ್ವರ್ಗದ ಮತ್ತು ಬಂಡವಾಳಶಾಹಿಗಳ ಹಿಡಿತದಲ್ಲಿರುವ ಭಾರತದ ಮಾಧ್ಯಮಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ಸಿದ್ಧ ನಿರೂಪಣೆಗಳನ್ನೂ ಹೊಂದಿರುತ್ತವೆ. ಹತ್ಯೆಗಳು ನಡೆದಾಗ ಹತರಾದ ವ್ಯಕ್ತಿಗಳ ಸಾಮಾಜಿಕಾರ್ಥಿಕ ಶ್ರೇಣಿ ಮತ್ತು ಜಾತಿ-ಮತಗಳ ಅಸ್ಮಿತೆಗಳೇ ಇಡೀ ಘಟನೆಯ ಸುತ್ತ ನ್ಯಾಯವಿತರಣೆಯ ಕಟಕಟೆಯನ್ನು ನಿರ್ಮಿಸಲು ನೆರವಾಗುತ್ತವೆ. 1983ರಲ್ಲಿ ಅಸ್ಸಾಂನ ನೆಲ್ಲಿ ಎಂಬಲ್ಲಿ ನಡೆದ ಹತ್ಯಾಕಾಂಡ ಇದಕ್ಕೊಂದು ನಿದರ್ಶನ. ಅಧಿಕೃತ ವರದಿಗಳ ಪ್ರಕಾರವೇ ಫೆಬ್ರವರಿ 19 1983ರಂದು ನಡೆದ ಭೀಕರ ಹತ್ಯಾಕಾಂಡದಲ್ಲಿ 2000ಕ್ಕೂ ಹೆಚ್ಚು ಮುಸ್ಲಿಮರು ಹತ್ಯೆಗೊಳಗಾಗಿದ್ದರು. ಅನಧಿಕೃತವಾಗಿ ಇದು 15 ಸಾವಿರ ದಾಟಿರಬಹುದು ಎಂದೂ ಹೇಳಲಾಗುತ್ತದೆ.

ಈ ಸಾಮೂಹಿಕ ನರಮೇಧದಲ್ಲಿ ಹತ್ಯೆಗೊಳಗಾದವರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಎಲ್ಲ ಓರಿಗೆಯ ಜನರೂ ಇದ್ದರು. ಹತ್ಯೆಗೊಳಗಾದವರೆಲ್ಲರೂ ಅಕ್ರಮ ವಲಸೆಗಾರರು ಎಂಬ ಒಂದೇ ಕಾರಣ ಸಾಕಾಗಿತ್ತು ಇಡೀ ಘಟನೆ ವಿಸ್ಮೃತಿಗೆ ಜಾರಲು. ಸುಟ್ಟು ಭಸ್ಮವಾದ ಈ ಸಾವಿರಾರು ಶ್ರಮಜೀವಿಗಳಿಗೆ ವಾರಸುದಾರರು ಯಾರಾಗಬೇಕಿತ್ತು ? ಇವರ ದುಡಿಮೆಯನ್ನೇ ತಮ್ಮ ಬಂಡವಾಳ ಶೇಖರಣೆಗೆ ಕಚ್ಚಾವಸ್ತುವಿನಂತೆ ಬಳಸಿದ ಅಸ್ಸಾಂನ ಉದ್ಯಮಿಗಳೋ ಅಥವಾ ದೇಶದ ಜಿಡಿಪಿಯ ವೃದ್ಧಿಗೆ ನೆರವಾಗುವ ಈ ದುಡಿಮೆಗಾರರ ಜೀವ ಮತ್ತು ಜೀವನೋಪಾಯವನ್ನು ನಿರ್ವಹಿಸಬೇಕಾದ ಆಡಳಿತ ವ್ಯವಸ್ಥೆಯೋ ? ಅಕ್ರಮ ವಲಸೆಯೇ ಪ್ರಧಾನವಾಗಿ ಚರ್ಚೆಗೊಳಗಾದ ಕಾರಣ, ಹತ್ಯೆಗೊಳಗಾದವರು ಸಾವಿಗೆ ಅರ್ಹತೆ ಪಡೆದವರಾಗಿ ಕಂಡರೆ, ಈ ಹತ್ಯಾಕಾಂಡದ ರೂವಾರಿಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದ್ದಾರೆ. ಒಂದು ವ್ಯವಸ್ಥಿತ ನರಮೇಧವನ್ನೂ ರಾಜಕೀಯ ಕಾರಣಗಳಿಗಾಗಿ, ನೇಪಥ್ಯಕ್ಕೆ ಸರಿಸುವ ಜಾಣ್ಮೆಗೆ ಏನು ಹೇಳಬೇಕು ?

2002ರ ಗುಜರಾತ್ ನರಮೇಧದಲ್ಲೂ ಇದೇ ರೀತಿಯ ವ್ಯಾಖ್ಯಾನವನ್ನು ಕಂಡಿದ್ದೇವೆ. ಗೋದ್ರಾ ರೈಲು ದುರಂತದಲ್ಲಿ ಅಗ್ನಿಗೆ ಆಹುತಿಯಾದ 57 ಅಮಾಯಕ ಜೀವಗಳಿಗೆ ನ್ಯಾಯ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯವೇ ಆಗಿತ್ತು. ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೊಳಪಡಿಸಬೇಕಾಗಿತ್ತು. ಆದರೆ ಅಪರಾಧಿಗಳನ್ನು ವ್ಯಕ್ತಿಗಳಲ್ಲಿ ಗುರುತಿಸದೆ, ಸಮುದಾಯದಲ್ಲಿ ಗುರುತಿಸಿದ ಪರಿಣಾಮ, 2000ಕ್ಕೂ ಹೆಚ್ಚು ಜನರು ಕೋಮು ದಳ್ಳುರಿಯಲ್ಲಿ ಬೆಂದು ಕಣ್ಮರೆಯಾಗಿಹೋದರು. ಇಲ್ಲಿಯೂ ಹತ್ಯೆಗೊಳಗಾದವರು ಸಾವಿಗೆ ಅರ್ಹತೆ ಪಡೆದವರೇ ಆಗಿದ್ದರು ಏಕೆಂದರೆ, ಗೋದ್ರಾ ದುರಂತಕ್ಕೆ ಕಾರಣವಾದ ಕೆಲವೇ ವ್ಯಕ್ತಿಗಳು ಇವರ ಸಮುದಾಯಕ್ಕೆ ಸೇರಿದವರಾಗಿದ್ದರು. ಅಪರಾಧವನ್ನು ವ್ಯಕ್ತಿಯ ನೆಲೆಯಿಂದ ಸಮುದಾಯದ ನೆಲೆಗೆ ವಿಸ್ತರಿಸುವ ಒಂದು ವಿಕೃತ ನ್ಯಾಯ ವ್ಯವಸ್ಥೆ ನೆಲ್ಲಿಯಲ್ಲಿ ನಡೆದಂತೆಯೇ ಗುಜರಾತ್ನಲ್ಲೂ ಕಂಡುಬಂದಿತ್ತು. ಈ ಘಟನೆಯೂ ಸಹ ಮುಂಬರುವ ಹಲವು ದಶಕಗಳ ರಾಜಕೀಯ ಬೆಳವಣಿಗೆಗಳಿಗೆ ಕಚ್ಚಾವಸ್ತುವಾಗಿ ಪರಿಣಮಿಸಿದೆ.

ಈ ಮೂರೂ ಘಟನೆಗಳಲ್ಲಿ ಹಂತಕರು ಯಾರು, ಸಮುದಾಯವೋ ಅಥವಾ ಕೆಲವೇ ವ್ಯಕ್ತಿ-ಸಂಘಟನೆ-ಪಕ್ಷವೋ ? ಈ ಹತ್ಯಾಕಾಂಡಗಳ ಪ್ರೇರಣೆ ಏನು, ಮತೀಯ-ಜನಾಂಗೀಯ ದ್ವೇಷವೋ ಅಥವಾ ರಾಜಕೀಯ ವಿರೋಧವೋ ? ಹತ್ಯೆಗೊಳಗಾದವರು ಯಾರು, ತುಳಿತಕ್ಕೊಳಗಾದ ಶೋಷಿತ ಸಮುದಾಯಗಳೋ ಅಥವಾ ಸಮಾಜದ ಗಣ್ಯ ಮೇಲ್ಪದರದ ವರ್ಗವೋ ? ಈ ಎಲ್ಲ ಪ್ರಶ್ನೆಗಳನ್ನು ಹಾಕಿಕೊಂಡಾಗ ನಮಗೆ ಹೊಳೆಯುವ ಉತ್ತರಗಳೇ ನಮ್ಮ ಸಾಮಾಜಿಕ ಪ್ರಜ್ಞೆಯನ್ನೂ ಬಿಂಬಿಸುತ್ತವೆ. ಈ ಮೂರೂ ಘಟನೆಗಳಲ್ಲಿ ಅಪರಾಧಿಗಳು ಯಾರೆಂದು ಜಗತ್ತಿಗೇ ತಿಳಿದಿದೆ ಆದರೆ ನ್ಯಾಯ ವ್ಯವಸ್ಥೆ ಸಾಕ್ಷಿಯನ್ನು ಆಧರಿಸಿ ಶಿಕ್ಷೆ ನೀಡುತ್ತದೆ. ಸಾಕ್ಷಿ ನೀಡುವವರಾರು ? ಆಳುವ ವರ್ಗವನ್ನು ಪ್ರತಿನಿಧಿಸುವ ಶಕ್ತಿಗಳೇ ಆರೋಪಿಗಳ ಸ್ಥಾನದಲ್ಲಿರುವಾಗ ಒದಗಿಸಲಾಗುವ ಸಾಕ್ಷ್ಯಾಧಾರಗಳೂ ಸಹ ತಮ್ಮ ಸಿಂಧುತ್ವವನ್ನು ಕಳೆದುಕೊಂಡುಬಿಡುತ್ತದೆ.

ಸ್ವತಂತ್ರ ಭಾರತದಲ್ಲಿ ನಡೆದ ಈ ಮೂರು ಘಟನೆಗಳ ಹೊರತಾಗಿಯೂ ಹತ್ಯಾಕಾಂಡಗಳ ಸರಮಾಲೆಯನ್ನೇ ಈ ಸಮಾಜ ಕಂಡಿದೆ. 1968ರ ಡಿಸೆಂಬರ್ 25ರಂದು ತಮಿಳುನಾಡು ತಂಜಾವೂರು ಜಿಲ್ಲೆಯ ಕಿಲ್ವೇನ್ಮಣಿ ಎಂಬ ಗ್ರಾಮದಲ್ಲಿ ತಮ್ಮ ಭೂಮಿಯ ಹಕ್ಕುಗಳಿಗಾಗಿ ಆಗ್ರಹಿಸಿದ 44 ದಲಿತರನ್ನು ಸಜೀವ ದಹನ ಮಾಡಲಾಯಿತು. ಭೂಮಾಲೀಕರಿಂದ ನಡೆದ ಈ ಭೀಕರ ನರಮೇಧಕ್ಕೆ ಅಸ್ಪೃಶ್ಯ ಸಮುದಾಯದ ಜನತೆ ತಮ್ಮ ಕೂಲಿ ಮತ್ತು ಭೂಮಿಯ ಹಕ್ಕುಗಳಿಗೆ ಹೋರಾಡಿದ್ದೇ ಕಾರಣವಾಗಿತ್ತು. 1985ರ ಜುಲೈ 16ರಂದು ಆಂಧ್ರಪ್ರದೇಶದ ಕರಂಚೇಡು ಎಂಬ ಗ್ರಾಮದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಎಂಟು ದಲಿತರನ್ನು ಹತ್ಯೆ ಮಾಡಲಾಯಿತು. ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಯಿತು. ದಲಿತ ಕೇರಿಗಳ ಮೇಲೆ ಸವರ್ಣೀಯರು ನಡೆಸಿದ ಮಾರಣಾಂತಿಕ ಆಕ್ರಮಣದಿಂದ ದಲಿತರು ತಮ್ಮ ಮೂಲ ವಾಸಸ್ಥಳವನ್ನೇ ತೊರೆಯಬೇಕಾಯಿತು. 1997 ರ ಡಿಸೆಂಬರ್ 1, ಬಿಹಾರದ ಭೂಮಿಹಾರ್ ಸವರ್ಣೀಯ ಜಾತಿಗೆ ಸೇರಿದ ರಣವೀರ ಸೇನೆ ಲಕ್ಷ್ಮಣಪುರ-ಬಾತೆ ಎಂಬ ಗ್ರಾಮದಲ್ಲಿ 58 ದಲಿತರ ಮಾರಣ ಹೋಮ ನಡೆಸಿತ್ತು. ಹತ್ಯೆಗೊಳಗಾದವರ ಪೈಕಿ 32 ಮಹಿಳೆಯರಿದ್ದರು. ಐವರು ಅಪ್ರಾಪ್ತ ಬಾಲಕಿಯರೂ ಇದ್ದರು. ಈ ಹತ್ಯಾಕಾಂಡದಲ್ಲಿ 16 ಆರೋಪಿಗಳಿಗೆ ಜೆಹನಾಬಾದ್ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದ್ದರೂ, ಹೈಕೋರ್ಟ್ ಈ ತೀರ್ಪನ್ನು ತಳ್ಳಿಹಾಕಿತ್ತು. ಈಗ ಸುಪ್ರಿಂಕೋರ್ಟ್ನಲ್ಲಿ ಕೊಳೆಯುತ್ತಿದೆ.

1996ರ ಜುಲೈ 11, ಬಿಹಾರದ ಭೋಜಪುರ ಪ್ರಾಂತ್ಯದ ಬತಾನಿತೊಲ ಎಂಬ ಗ್ರಾಮದಲ್ಲಿ 50ಕ್ಕೂ ಹೆಚ್ಚು ರಣವೀರಸೇನೆಯ ಕಾರ್ಯಕರ್ತರು, ಬತಾನಿತೊಲ ಗ್ರಾಮದ ದಲಿತ-ಮುಸ್ಲಿಂ ಕೇರಿಯ ಮೇಲೆ ಹಠಾತ್ ಆಕ್ರಮಣ ನಡೆಸಿ, ಎರಡು ಗಂಟೆಗಳ ಅವಧಿಯಲ್ಲಿ 21 ಜನರನ್ನು ಹತ್ಯೆ ಮಾಡಿದ್ದರು. ತಾಯಿಯ ಮಡಿಲಲ್ಲಿ ನಿದ್ರಿಸುತ್ತಿದ್ದ ಹಸುಗೂಸು ತನ್ನ ತಾಯಿಯೊಡನೆಯೇ ಸಜೀವ ದಹನವಾಗಿತ್ತು. 21 ಅಮಾಯಕ ಶ್ರಮಜೀವಿಗಳು ಹಂತಕರ ರಕ್ತದಾಹಕ್ಕೆ ಬಲಿಯಾಗಿದ್ದರು. ಹತ್ಯೆಗೆ ಕಾರಣ ಬೇಕಿರಲಿಲ್ಲ. ಏಕೆಂದರೆ ಭೂಮಾಲೀಕರ ದೃಷ್ಟಿಯಲ್ಲಿ ಕೆಳಜಾತಿಯ ಶ್ರಮಜೀವಿಗಳು, ರೈತಾಪಿಗಳು ಭೂಮಿಯ ಹಕ್ಕಿಗೆ ಅರ್ಹರಾಗಿರಲಿಲ್ಲ. ಆದರೆ ಸಾವಿನ ಅರ್ಹತೆ ಪಡೆದಿದ್ದರು. 1991ರ ಆಗಸ್ಟ್ 6, ಆಂಧ್ರಪ್ರದೇಶದ ತ್ಸುಂಡೂರು ಎಂಬ ಗ್ರಾಮದಲ್ಲಿ ಸವರ್ಣೀಯ ಭೂಮಾಲೀಕರ ರಕ್ತದಾಹಕ್ಕೆ ಎಂಟು ಮಂದಿ ದಲಿತರು ಬಲಿಯಾಗಿದ್ದರು. ಈ ಎಂಟು ಜನರನ್ನು ಹತ್ಯೆಗೈದ 300ಕ್ಕೂ ಹೆಚ್ಚು ರೆಡ್ಡಿ ಮತ್ತು ಕಾಪು ಸಮುದಾಯದ ಹಂತಕರಲ್ಲಿ ಯಾರೊಬ್ಬರೂ ಶಿಕ್ಷೆಗೊಳಗಾಗಲಿಲ್ಲ. ಹತ್ಯೆಗೊಳಗಾದ ಕೆಲವರ ದೇಹಗಳನ್ನು ತುಂಡುತುಂಡು ಮಾಡಿ ಗೋಣಿ ಚೀಲಗಳಲ್ಲಿ ತುಂಬಿ ತುಂಗಭದ್ರ ನಾಲೆಯಲ್ಲಿ ಎಸೆಯಲಾಗಿತ್ತು. 2000ದ ಮಾರ್ಚ್ 11, ಕರ್ನಾಟಕದ ಶ್ರೀನಿವಾಸಪುರ ತಾಲ್ಲೂಕಿನ ಬಳಿ ಇರುವ ಕಂಬಾಲಪಲ್ಲಿ ಗ್ರಾಮದಲ್ಲಿ ಸವರ್ಣೀಯರು ದಲಿತ ಕೇರಿಯ ಮೇಲೆ ನಡೆಸಿದ ದಾಳಿಯಲ್ಲಿ ಏಳು ಮಂದಿ ದಲಿತರು ಸಜೀವ ದಹನವಾಗಿದ್ದರು. ಈ ಪ್ರಕರಣದಲ್ಲಿ 44 ಜನರ ಮೇಲೆ ಮೊಕದ್ದಮೆ ದಾಖಲಾಗಿದ್ದರೂ ಮತ್ತೊಮ್ಮೆ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲರೂ ಖುಲಾಸೆಯಾಗಿದ್ದರು.

ಕಿಲ್ವೇನ್ಮಣಿಯಿಂದ ಕಂಬಾಲಪಲ್ಲಿಯವರೆಗೆ, ನಂತರದಲ್ಲೂ ಸಹ ದಲಿತರ ಮಾರಣ ಹೋಮ ನಡೆಯುತ್ತಲೇ ಇದೆ. ಕಳೆದ ಮೂವತ್ತು ವರ್ಷಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ದಲಿತರು ಸವರ್ಣೀಯರಿಂದ ಹತ್ಯೆಗೊಳಗಾಗಿದ್ದಾರೆ. ಈ ಜೀವಗಳು ಹುತಾತ್ಮ ಪಟ್ಟ ಪಡೆಯಲಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷದ ಅಧಿಕಾರಪೀಠಕ್ಕೆ ಕಚ್ಚಾವಸ್ತುಗಳೂ ಆಗಲಿಲ್ಲ. ಸರ್ಕಾರದ ಪರಿಹಾರ ಮತ್ತು ಸಾಂತ್ವನದ ಮಾತುಗಳ ನಡುವೆಯೇ ದಲಿತ ಸಮುದಾಯದ ಸಾವಿರಾರು ಅಮಾಯಕ ಜೀವಗಳು ಸದ್ದಿಲ್ಲದೆ ಕಣ್ಮರೆಯಾಗಿಬಿಟ್ಟಿವೆ. ಈ ಯಾವ ಪ್ರಕರಣದಲ್ಲೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದರೆ ಹಂತಕರು ಯಾರು ? ಆಡಳಿತ ವ್ಯವಸ್ಥೆಯೋ ಅಥವಾ ನಮ್ಮ ದೇಶದಲ್ಲಿ ಶತಮಾನಗಳಿಂದ ಪಾರಮ್ಯ ಸಾಧಿಸಿಕೊಂಡು ಬಂದಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯೋ ? ಸಾಮೂಹಿಕ ಹತ್ಯಾಕಾಂಡಗಳು ವ್ಯಕ್ತಿಗಳಿಂದ ನಡೆಯುವುದಿಲ್ಲ, ಸಾಂಘಿಕವಾಗಿ ನಡೆಯುತ್ತವೆ, ಆದರೆ ಈ ಅಮಾಯಕ ದಲಿತರ ಬದುಕಿಗೆ ಕೊಳ್ಳಿ ಇಟ್ಟ ಆ ಸಾಂಘಿಕ ಶಕ್ತಿಯಾದರೂ ಯಾವುದು ? ಒಂದು ಈ ದೇಶದ ಜಾತಿ ವ್ಯವಸ್ಥೆಯನ್ನು ಇಂದಿಗೂ ಪೋಷಿಸುತ್ತಿರುವ ಜಾತಿ ಶ್ರೇಷ್ಠತೆ ಮತ್ತು ಪಾರಮ್ಯದ ಧೋರಣೆ ಮತ್ತೊಂದು ದೇಶದ ಸಂಪತ್ತಿನ ಒಡೆತನ ಬಯಸುವ ಔದ್ಯಮಿಕ ಹಿತಾಸಕ್ತಿಗಳು.

ಈ ಸಾವುಗಳ ಸರಮಾಲೆಯ ನಡುವೆಯೇ 1990ರಲ್ಲಿ ತಮ್ಮ ಮೂಲ ನೆಲೆಯನ್ನು ತೊರೆದು ತಮ್ಮ ರಾಜ್ಯದಲ್ಲೇ ವಲಸಿಗರಾಗಿ ಬದುಕುವ ಅನಿವಾರ್ಯತೆಯನ್ನು ಎದುರಿಸಿದ ಕಾಶ್ಮೀರದ ಪಂಡಿತರೂ ಅಪಾರ ಸಾವು ನೊವುಗಳನ್ನು ಅನುಭವಿಸಿರುವುದು ವಾಸ್ತವ. ಕಾಶ್ಮೀರ ಫೈಲ್ಸ್ ಎಂಬ ಬಾಲಿವುಡ್ ಚಿತ್ರ ಈ ಗಾಯಗಳನ್ನು ಮತ್ತೊಮ್ಮೆ ಕೆರೆದು ವ್ರಣವಾಗಿಸುವ ರೀತಿಯಲ್ಲಿ ಉನ್ಮಾದವನ್ನು ಸೃಷ್ಟಿಸಿದೆ. 1989ರ ನಂತರ ಕಾಶ್ಮೀರ ಕಣಿವೆಯಲ್ಲಿ ಉಲ್ಬಣಿಸಿದ ಉಗ್ರವಾದಿಗಳ ದಾಳಿಗಳು ಕ್ರಮೇಣ ಪಂಡಿತ ಸಮುದಾಯದ ವಿರುದ್ಧ ಕಾರ್ಯಾಚರಣೆಯಲ್ಲಿ ಪರ್ಯವಸಾನಗೊಂಡಿದ್ದು ವಾಸ್ತವ ಸಂಗತಿ. 1990ರಲ್ಲಿ ಫರೂಕ್ ಅಬ್ದುಲ್ಲಾ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಿದ ನಂತರ ಕಾಶ್ಮೀರ ಪಂಡಿತರ ವಿರುದ್ಧ ಆಕ್ರಮಣಗಳೂ ಹೆಚ್ಚಾಗಿದ್ದವು. ಕಾಶ್ಮೀರದಲ್ಲಿ ನೆಲೆಸಿದ್ದ 75343 ಪಂಡಿತ ಕುಟುಂಬಗಳ ಪೈಕಿ 70 ಸಾವಿರ ಕುಟುಂಬಗಳು ಮುಂದಿನ ಎಂಟು ವರ್ಷಗಳಲ್ಲಿ ವಲಸೆ ಹೊರಟಿದ್ದವು. 1989-90ರ ಅವಧಿಯಲ್ಲಿ ರಾಜ್ಯಪಾಲರಾಗಿದ್ದ ಜಗಮೋಹನ್ ಅವಧಿಯಲ್ಲಿ ಪಂಡಿತ ಕುಟುಂಬಗಳ ವಲಸೆ ಮತೀಯ ಸ್ವರೂಪ ಪಡೆದುಕೊಂಡಿತ್ತು. ಅಲ್ಲಿಯವರೆಗೂ ಕಾಶ್ಮೀರಿಗಳ ಸಮಸ್ಯೆಯಾಗಿದ್ದುದು, ಆನಂತರದಲ್ಲಿ ಹಿಂದೂ ಮುಸ್ಲಿಂ ಸಮಸ್ಯೆಯಾಗಿ ಪರಿಣಮಿಸಿತ್ತು. 800ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ಹತ್ಯೆಯಾಗಿತ್ತು. ಹಿಂದೂ ಸಮುದಾಯದ ಮೇಲೆ ಉಗ್ರಗಾಮಿಗಳ ಆಕ್ರಮಣಗಳೂ ಹೆಚ್ಚಾಗತೊಡಗಿದ್ದವು. ಅಂಕಿ ಅಂಶಗಳೇನೇ ಇದ್ದರೂ, ಕಾಶ್ಮೀರ ಕಣಿವೆಯಲ್ಲಿ ಪಂಡಿತರು ಉಗ್ರಗಾಮಿಗಳ ದಾಳಿಗೊಳಗಾಗಿದ್ದು ಸತ್ಯ. ಲಕ್ಷಾಂತರ ಜನರು ವಲಸೆ ಹೋಗಿ ಜಮ್ಮು ಪ್ರಾಂತ್ಯದಲ್ಲಿ ನಿರಾಶ್ರಿತರಂತೆ ನೆಲೆಸಿರುವುದು ವಾಸ್ತವ.

ಕಾಶ್ಮೀರಿ ಪಂಡಿತರ ಈ ಸಾವು ನೋವುಗಳು 30 ವರ್ಷಗಳ ನಂತರ ಅಧಿಕಾರ ರಾಜಕಾರಣಕ್ಕೆ ಕಚ್ಚಾವಸ್ತುವಾಗಿ ಪರಿಣಮಿಸಿದೆ. ಕಾಶ್ಮೀರ ಫೈಲ್ಸ್ ಎಂಬ ಒಂದು ಬಾಲಿವುಡ್ ಚಿತ್ರ ಈ ಕಾರ್ಯಸಾಧಿಸಿದೆ. ಇಂತಹ ಒಂದು ಕೋಮು ಸೂಕ್ಷ್ಮ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಕರ್ನಾಟಕ ಸರ್ಕಾರವೂ ಸಹ ತನ್ನ ಅಸೂಕ್ಷ್ಮತೆಯನ್ನು ಪ್ರದರ್ಶಿಸಿದೆ. ಸಾಮೂಹಿಕ ನರಮೇಧವನ್ನು ಅಥವಾ ಹತ್ಯಾಕಾಂಡವನ್ನು ವೈಭವೀಕರಿಸುವ ಮೂಲಕ, ವಿವಿಧ ಕೋಮುಗಳ ನಡುವೆ, ಜಾತಿಗಳ ನಡುವೆ ವಿಷಗೋಡೆಗಳನ್ನು ಕಟ್ಟುವ ಕಲೆಯನ್ನು ಈ ದೇಶದ ಮತೀಯ ರಾಜಕಾರಣ ಸಿದ್ಧಿಸಿಕೊಂಡಿದೆ. ಕಾಶ್ಮೀರ ಫೈಲ್ಸ್ ಈ ವಿಷಗೋಡೆಯನ್ನು ಗಟ್ಟಿಯಾಗಿಸುವ ಎಲ್ಲ ಪರಿಕರಗಳನ್ನೂ ಒದಗಿಸಲು ಸಿದ್ಧವಾಗಿದೆ.

ಆದರೆ ಕಾಶ್ಮೀರದ ಪಂಡಿತರ ಬವಣೆಯನ್ನು ಕಂಡು ಕಣ್ಣೀರುಗರೆಯುವ ಮನಸುಗಳಿಗೆ ಕಿಲ್ವೇನ್ಮಣಿಯಿಂದ ಕಂಬಾಲಪಲ್ಲಿಯವರೆಗಿನ ಪಯಣದಲ್ಲಿನ ಅನಾಥ ಶವಗಳು ಏಕೆ ಗೋಚರಿಸುವುದಿಲ್ಲ? ನೆಲ್ಲಿಯಿಂದ ಗುಜರಾತ್ವರೆಗಿನ ಪಯಣ ಏಕೆ ಕಾಣುವುದಿಲ್ಲ ? ಈ ಎಲ್ಲ ಘಟನೆಗಳ ಹಿಂದೆಯೂ ಒಂದು ವ್ಯವಸ್ಥಿತ ಶಕ್ತಿ ಇದೆ. ಸಂಘಟನಾತ್ಮಕ ಶಕ್ತಿ ಇದೆ. ಈ ಸಾಮೂಹಿಕ ಹತ್ಯಾಕಾಂಡಗಳಲ್ಲಿ ಬಲಿಯಾದವರೆಲ್ಲರೂ ಅಮಾಯಕ ಪ್ರಜೆಗಳೇ ಆಗಿದ್ದಾರೆ. ಹಂತಕ ಶಕ್ತಿಗಳೆಲ್ಲವೂ ಪ್ರಬಲ ಆಳುವ ವರ್ಗಗಳ ಪ್ರಾತಿನಿಧಿತ್ವವನ್ನು ಹೊಂದಿವೆ. ರಾಜಕೀಯ ಅಧಿಕಾರಕ್ಕಾಗಿ ಸಾವಿರಾರು ಶವಗಳನ್ನು ವಿಜಯ ಮಾಲೆಯಂತೆ ಧರಿಸುವ ಒಂದು ವಿಕೃತ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಇಲ್ಲಿ ಶೋಷಿತ ಸಮುದಾಯಗಳು ಸಾವಿಗೆ ಅರ್ಹತೆ ಪಡೆದ ಪ್ರಮಾಣ ಪತ್ರದೊಂದಿಗೇ ಬದುಕುತ್ತವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಕೆಳಸ್ತರದಲ್ಲಿರುವವರ ಶವಗಳು ಸಾವಿನ ನಂತರವೂ ಅದೇ ಶ್ರೇಣಿಯಲ್ಲಿ ಮುಂದುವರೆಯುತ್ತವೆ.

ಮತ್ತೊಂದೆಡೆ ಸಾವಿರಾರು ಸಾವುಗಳಿಗೆ ಕಾರಣವಾಗುವ ಕಾಣದ ಕೈಗಳು ನಿರ್ಭಿಡೆಯಿಂದ ಬದುಕುತ್ತವೆ. ಮಾರುಕಟ್ಟೆಯ ಆಧಿಪತ್ಯ, ಜಾತಿಯ ಪಾರಮ್ಯ, ಸಾಮಾಜಿಕ ಸ್ಥಾನಮಾನಗಳ ಪ್ರಾತಿನಿಧ್ಯ ಮತ್ತು ಸಂಪತ್ತಿನ ಒಡೆತನ ಇವೆಲ್ಲವೂ ಹಂತಕ ವ್ಯವಸ್ಥೆಯನ್ನು ಪೋಷಿಸುವ ಸಾಧನಗಳಾಗಿವೆ. ಭಾರತೀಯ ಸಮಾಜ 21ನೆಯ ಶತಮಾನದ ಮೂರನೆಯ ದಶಕದಲ್ಲಿದ್ದರೂ, ತನ್ನ ಕಂಬನಿಯನ್ನು ಅಸ್ಮಿತೆಗನುಗುಣವಾಗಿ ವ್ಯಯ ಮಾಡುವ ಮಟ್ಟಿಗೆ ಅಸೂಕ್ಷ್ಮತೆಯನ್ನು ಬೆಳೆಸಿಕೊಂಡಿದೆ. ಕೊಲೆ, ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಕಿರುಕುಳ, ಚಿತ್ರಹಿಂಸೆ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಲೇ ಬದುಕಬೇಕಾದ ಜನಸಮುದಾಯಗಳು ದಶಕಗಳಿಂದಲೂ ನ್ಯಾಯವಂಚಿತವಾಗಿಯೇ ಬದುಕುತ್ತಿರುವುದನ್ನು ನೆಲ್ಲಿಯಿಂದ ಕಂಬಾಲಪಲ್ಲಿಯವರೆಗೆ ಗಮನಿಸಬಹುದು. ಕಾಶ್ಮೀರದ ಪಂಡಿತರೂ ಇವುಗಳಲ್ಲೊಂದು.

ಆದರೆ ಕಾಶ್ಮೀರದ ಫೈಲುಗಳನ್ನು ತೆರೆದು, ಒಣಗಿರುವ ವ್ರಣಗಳಿಗೆ ಮತ್ತೊಮ್ಮೆ ಜೀವ ನೀಡಲು ಯತ್ನಿಸುತ್ತಿರುವ ಕ್ಷುದ್ರ ಮನಸುಗಳಿಗೆ ನೆಲ್ಲಿಯೂ ನೆನಪಾಗುವುದಿಲ್ಲ, ಕಂಬಾಲಪಲ್ಲಿಯೂ ನೆನಪಾಗುವುದಿಲ್ಲ. ಏಕೆಂದರೆ ಈ ಸಮಾಜದ ಆತ್ಮಸಾಕ್ಷಿ ಸತ್ತುಹೋಗಿದೆ. ಜೀವಂತ ಸಮಾಜದಲ್ಲಿರುವ ಮೇಲು ಕೀಳಿನ ಶ್ರೇಣೀಕರಣ ಸೂತ್ರಗಳನ್ನೇ ಶವಗಳ ನಡುವೆಯೂ ಅನುಸರಿಸುವ ಒಂದು ವಿಕೃತ ವ್ಯವಸ್ಥೆಯನ್ನು ವ್ಯವಸ್ಥಿತವಾಗಿಯೇ ಪೋಷಿಸಲಾಗಿದೆ. ಆದರೆ ಭೂಗತವಾಗಿರುವ ಫೈಲುಗಳಲ್ಲಿ ಕೊಳೆಯುತ್ತಿರುವ ಸಾವಿರಾರು ಶವಗಳು ಸಮಾಜದ ಅಂತರಾತ್ಮವನ್ನು ಎಚ್ಚರಿಸುತ್ತಲೇ ಇರಬೇಕಲ್ಲವೇ ? ಆತ್ಮಸಾಕ್ಷಿ ಇನ್ನೂ ಸತ್ತಿಲ್ಲ ಎಂದಾದರೆ ಕಾಶ್ಮೀರ ಫೈಲುಗಳೊಡನೆಯೇ ಉಳಿದ ಫೈಲುಗಳನ್ನೂ ತೆರೆದು ನೋಡೋಣವೇ ?

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ