ಪುತ್ತೂರು: ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಅವಧಿ ಮೀರಿ ಧ್ವನಿವರ್ಧಕ ಬಳಕೆ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ – ಪ್ರಕರಣ ದಾಖಲು
ಪುತ್ತೂರು: ಸೆಪ್ಟೆಂಬರ್ 17ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆಯ ವೇಳೆ, ನಿಗದಿತ ಸಮಯ ಮೀರಿ ಧ್ವನಿವರ್ಧಕ (ಮೈಕ್) ಬಳಸಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೋಭಾಯಾತ್ರೆಯಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು. ಅದರಂತೆ ನಿಗದಿತ ಸಮಯದ ನಂತರ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ, ರಾತ್ರಿ 10:35ರ ಸುಮಾರಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಜಂಕ್ಷನ್ ಬಳಿ ಇದ್ದ ‘ಪಂಚಮುಖಿ ಫ್ರೆಂಡ್ಸ್’ ಎಂಬವರ ಸ್ತಬ್ಧಚಿತ್ರದಲ್ಲಿ ಮತ್ತೆ ಧ್ವನಿವರ್ಧಕ ಬಳಕೆಯಾಗುತ್ತಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಅದರಂತೆ ಮೈಕ್ ಅನ್ನು ಬಂದ್ ಮಾಡಲಾಗಿತ್ತು.
ಈ ವೇಳೆ ಕಾರ್ಯಕ್ರಮಕ್ಕೆ ಸಂಬಂಧಪಡದ ಅಜಿತ್ ರೈ ಹೊಸಮನೆ ಹಾಗೂ ಇತರರು ಸ್ಥಳಕ್ಕೆ ಬಂದು, “ಧ್ವನಿವರ್ಧಕವನ್ನು ಬಂದ್ ಮಾಡಬಾರದು” ಎಂದು ಹೇಳಿ ಆಯೋಜಕರಿಗೆ ಮತ್ತೆ ಮೈಕ್ ಬಳಸುವಂತೆ ಸೂಚಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸುಪ್ರೀಂ ಕೋರ್ಟ್ ನಿರ್ದೇಶನಗಳು ಮತ್ತು ಕಾರ್ಯಕ್ರಮದ ಷರತ್ತುಗಳ ಬಗ್ಗೆ ತಿಳಿಹೇಳಿ ಧ್ವನಿವರ್ಧಕ ನಿಲ್ಲಿಸುವಂತೆ ಸೂಚಿಸಿದರೂ, ಅವರು ಸೂಚನೆಯನ್ನು ಪಾಲಿಸದೆ ಮೈಕ್ ಬಳಕೆಯನ್ನು ಮುಂದುವರಿಸಿದ್ದಾರೆ. ಇದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದಂತಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಮತ್ತು ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.




























