ಯೋಜಿತ ಪಿತೂರಿಯ ಭಾಗವಾಗಿ ರೈತರ ದಾರಿ ತಪ್ಪಿಸಲಾಗಿದೆ | ಪ್ರಧಾನಿ ಮೋದಿ
ಅಹ್ಮದಾಬಾದ್: ನೂತನ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯು ಕೇಂದ್ರ ಸರ್ಕಾರದ ವಿರುದ್ಧದ ಯೋಜಿತ ಪಿತೂರಿಯ ಭಾಗವಾಗಿದೆ. ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಗುಜರಾತ್ ನ ಕಚ್ ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ವರ್ಷಗಳಿಂದ ಕೇಳುತ್ತಿದ್ದ ಬೇಡಿಕೆಗಳನ್ನೇ ಕೃಷಿ ಕಾಯ್ದೆಗಳ ತಿದ್ದುಪಡಿಗಳು ಒಳಗೊಂಡಿವೆ. ಭಾರತ ಸರ್ಕಾರವು ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ಅವರ ಕಳಕಳಿಗೆ ಸರ್ಕಾರ ಓಗೊಡಲಿದೆ. ಕೇಂದ್ರ ಸರ್ಕಾರದ ವಿರುದ್ಧದ ಯೋಜಿತ ಪಿತೂರಿಯ ಭಾಗವಾಗಿ ಪ್ರತಿಭಟನಾ ನಿರತ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
ವಿರೋಧ ಪಕ್ಷಗಳಲ್ಲಿ ಕುಳಿತಿರುವವರು ಅವರ ಆಡಳಿತಾವಧಿಯಲ್ಲಿ ಈ ಕೃಷಿ ಕಾಯ್ದೆ ತಿದ್ದುಪಡಿಗಳ ಕಡೆಗೆ ಒಲವು ತೋರಿದ್ದರು. ಆಗಿನ ಸರ್ಕಾರ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈಗ ದೇಶವು ಐತಿಹಾಸಿಕ ಹೆಜ್ಜೆ ಇಟ್ಟಿರುವ ಸಮಯದಲ್ಲಿ ಅದೇ ಜನರು ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.