ದುಃಖದಲ್ಲಿ ಅಂತ್ಯವಾದ ರಕ್ಷಾ ಬಂಧನ ಸಂಭ್ರಮ: ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರಿಯರ ದಾರುಣ ಸಾವು
ಇಟಾವಾ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ರಕ್ಷಾ ಬಂಧನ ಹಬ್ಬದ ಸಂಭ್ರಮ ಮುಗಿಸಿ ಮರಳುತ್ತಿದ್ದ ಕುಟುಂಬವೊಂದಕ್ಕೆ ಭೀಕರ ಅಪಘಾತ ಸಂಭವಿಸಿದ್ದು, ಟ್ರಕ್ ಡಿಕ್ಕಿಹೊಡೆದು ಇಬ್ಬರು ಸಹೋದರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.
ಮಧ್ಯಪ್ರದೇಶ ಮೂಲದ ಕುಟುಂಬವೊಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲು ತಮ್ಮ ಸಹೋದರನ ಮನೆಗೆ ತೆರಳಿತ್ತು. ಹಬ್ಬದ ಸಂಭ್ರಮ ಮುಗಿಸಿಕೊಂಡು ಗ್ವಾಲಿಯರ್ ಮೂಲಕ ಭಿಂಡ್ನಲ್ಲಿರುವ ತಮ್ಮ ಮನೆಗೆ ಮರಳಲು ಇಟಾವಾದ ಎಕ್ದಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲಾಮ್ಪುರ್ ತಿರುವಿನ ಬಳಿ ಅವರು ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದರು.
ಆಗ ವೇಗವಾಗಿ ಬಂದ ಟ್ರಕ್ ವೊಂದು ಅವರು ಪ್ರಯಾಣಿಸುತ್ತಿದ್ದ ಬೈಕ್ ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.ಪರಿಣಾಮವಾಗಿ ನಿಶಾ ಕುಮಾರಿ (26) ಮತ್ತು ಅವರ ಕಿರಿಯ ಸಹೋದರಿ ಆಶಿ (19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಿಶಾ ಅವರ ಪತಿ ನೀರಜ್ ಗೋಯಲ್ (28), ಅವರ ಸಹೋದರ ಆಯುಷ್ ಗೋಯಲ್ ಮತ್ತು ಆರು ತಿಂಗಳ ಮಗು ಶಿವಾಂಶ್ ಗಾಯಗೊಂಡಿದ್ದಾರೆ.
ಬೈಕ್ ನಲ್ಲಿ ಐವರು ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ಸಹೋದರಿಯರು ರಸ್ತೆಗೆ ಎಸೆಪಟ್ಟು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಪಘಾತದ ನಂತರ ಟ್ರಕ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಯುಷ್ ಮತ್ತು ನೀರಜ್ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗು ಶಿವಾಂಶ್ ಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಇಟಾವಾ ಎಸ್ ಎಸ್ ಪಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಅವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತಲೆಮರೆಸಿಕೊಂಡಿರುವ ಟ್ರಕ್ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























