ಬ್ಯಾಂಕ್ ನೌಕರರನ್ನೂ ಗೌರವಿಸೋಣ !

- ದಮ್ಮಪ್ರಿಯ, ಬೆಂಗಳೂರು
ಇತ್ತೀಚೆಗೆ ಬ್ಯಾಂಕ್ ಗಳಲ್ಲಿ, ಮಾನವೀಯತೆಯನ್ನು ಮರೆತು ಮಾತನಾಡುವ, ಅಮಾನವೀಯವಾಗಿ ಚೀರಾಡುವ ಗ್ರಾಹಕರಿಗೇನು ಕಮ್ಮಿಯಿಲ್ಲವಾಗಿದೆ. ತಾವು ಕೊಡುವ ಸೇವೆಯಲ್ಲಿ ಸ್ವಲ್ಪ ತಡವಾದರು, ಬಾಯಿಗೆ ಬಂದಂತೆ ಮಾತನಾಡುವವರೇ ಹೆಚ್ಚಾಗಿದ್ದಾರೆ. ಮಾತನಾಡುವವರೆಲ್ಲರೂ ಬಹುತೇಕ ವಿದ್ಯಾವಂತರು, ನೌಕರರೇ ಆಗಿದ್ದಾರೆ ! ಸಾಮಾನ್ಯ ಗ್ರಾಹಕರು ಸಾಮಾನ್ಯರಂತೆ ವರ್ತಿಸುತ್ತ ತನ್ನ ಕೆಲಸ ಕಾರ್ಯವನ್ನು ಸರಾಗವಾಗಿ ನೆರವೇರಿಸಿಕೊಂಡು ಹೋಗುತ್ತಿರುತ್ತಾರೆ.
ಆದರೆ ಈ ವಿದ್ಯಾವಂತರು ಮತ್ತು ನೌಕರರು ಮಾತನಾಡುವುದು, ನೀವು ಇರುವುದೇ ನಮ್ಮ ಸೇವೆಗಾಗಿ, ನಿಮ್ಮ ಸಂಬಳ ನಮ್ಮ ತೆರಿಗೆ ಹಣದಿಂದ, ನಾವು ಹೇಳಿದ ಹಾಗೆ ನೀವು ಕೇಳಬೇಕು, “Customer is the King,” ಇದು ನಿಮ್ಮಪ್ಪನ ಸ್ವತ್ತಲ್ಲ, ಇಲ್ಲವಾದರೆ ಈ ಸೀಟಿನಿಂದ ಎದ್ದು ಹೊರಗಡೆ ನಡೆಯಿರಿ ಎಂದು ಮಾತನಾಡುತ್ತಾರೆ.
ಪ್ರತಿಯೊಬ್ಬ ಬ್ಯಾಂಕ್ ನೌಕರರ ಉದ್ಯೋಗದ ಹಿಂದೆ ಅವರದೇ ಆದ ಜವಾಬ್ದಾರಿ ಇದ್ದೆ ಇರುತ್ತದೆ. ಅವರು ಆ ಉದ್ಯೋಗ ಪಡೆಯಲು ಶ್ರಮ ಪಟ್ಟು ಓದಿರುತ್ತಾರೆ, ಪರೀಕ್ಷೆಯನ್ನು ಪಾಸ್ ಮಾಡಿರುತ್ತಾರೆ, ಅದಕ್ಕಾಗಿ ಅವರಿಗೆ ಉದ್ಯೋಗ ದೊರೆತಿರುತ್ತದೆ ಎನ್ನುವುದನ್ನು ಮರೆಯಬೇಡಿ.
ಒಬ್ಬ ಆಟೋ ಡ್ರೈವರ್, ರೈತರ, ಕೂಲಿ ಕಾರ್ಮಿಕರ ಮಕ್ಕಳು ಐಎಎಸ್, ಐಪಿಎಸ್, ಐಎಫ್ ಎಸ್ ಪಾಸ್ ಮಾಡಿ ಉದ್ಯೋಗಕ್ಕೆ ಬಂದಾಗ ಅದು ಅವರ ವಿದ್ಯೆಗೆ ತಕ್ಕ ಪ್ರತಿಫಲ, ಅವರ ಅಪ್ಪ ಅಮ್ಮನ ಶ್ರಮ, ತ್ಯಾಗದ ಮನೋಭಾವ ಎಂತೆಲ್ಲಾ ಮಾತನಾಡುವ ನಮ್ಮ ನಾಗರೀಕ ಸಮಾಜ, ಒಬ್ಬ ಬಡವನ ಮಗ ಬ್ಯಾಂಕ್ ಉದ್ಯೋಗ ಪಡೆದಾಗ ಏಕೆ ಆತನ ವಿದ್ಯೆಗೆ ತಕ್ಕ ಪ್ರತಿಫಲ, ಅವರ ಶ್ರಮ, ತಂದೆ ತಾಯಿಯ ತ್ಯಾಗದ ಪ್ರತಿಫಲ ಎಂದು ಮಾತನಾಡುವುದಿಲ್ಲ ? ಇದು ಬ್ಯಾಂಕ್ ಅಧಿಕಾರಿಗಳಿಗೆ ಮಾಡುವ ನಿಜವಾದ ಅಪಮಾನವಲ್ಲವೇ ? ಇತರೆ ಸರ್ಕಾರಿ ನೌಕರರು ಬಂದು ಮಾತನಾಡುವುದು ಇದೇ ರೀತಿಯಾಗಿಯೇ ! ಇವರಿಗೆ ತಿಂಗಳಿಗೆ ಸಂಬಳವನ್ನು ಖಾತೆಗೆ ಜಮೆ ಮಾಡುವುದು ಬ್ಯಾಂಕ್ ನೌಕರರೇ, ಅದಕ್ಕೆ ಬೇಕಾದ ವೈಯಕ್ತಿಕ ಸಾಲ ಸೌಲಭ್ಯ ನೀಡುವುದು, ಗೃಹಸಾಲ, ಮಕ್ಕಳ ವಿದ್ಯಾಭ್ಯಾಸದ ಸಾಲ ಎಲ್ಲವನ್ನು ಬ್ಯಾಂಕ್ ನಿಂದ ಪಡೆಯುತ್ತಾರೆ, ಕೊನೆಗೆ ಪುಕ್ಕಟ್ಟೆಯಲ್ಲ ಅದು ನಮ್ಮ ಸಂಬಳದ ತೆರಿಗೆಯಿಂದ ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವನ ಎಂದು ಹಿಯ್ಯಾಳಿಸಿ ಮಾತನಾಡುವುದು ಎಷ್ಟು ಸಮಂಜಸವಾದದ್ದು, ಹಾಗಾದರೆ ಇವರ ವಿದ್ಯೆಗೆ, ಶ್ರಮಕ್ಕೆ ಬೆಲೆಯೇ ಇಲ್ಲವೇ ! ಅಥವಾ ಆತ ಓದಿ ಬ್ಯಾಂಕ್ ನೌಕರಿ ಪಡೆದದ್ದೇ ತಪ್ಪೇ, ಬೇರೆ ಸರ್ಕಾರಿ ನೌಕರರು ಪಡೆಯುವ ಸಂಬಳ ಸಾಮಾನ್ಯ ಪ್ರಜೆಯ ತೆರಿಗೆಯ ಹಣದಿಂದಲ್ಲವೇ ? ಯಾಕೆ ಬ್ಯಾಂಕ್ ಉದ್ಯೋಗಿಗಳ ಬಗ್ಗೆ ಇಷ್ಟು ಸಿಟ್ಟು, ಆಕ್ರೋಶ ?
ಬ್ಯಾಂಕ್ ನೌಕರರು ಕೂಡ ಸ್ವಾಭಿಮಾನಿಗಳೇ, ಅವರಿಗೂ ಅವರದ್ದೇ ಆದ ಆತ್ಮಗೌರವವಿರುತ್ತದೆ. ಅವರಿಗೂ ಉತ್ತಮ ಸೇವೆ ಮಾಡಬೇಕು ಎನ್ನುವ ಮನೋಭಾವವಿರುತ್ತದೆ. ಸೇವೆಯಲ್ಲಿ ಸ್ವಲ್ಪ ವ್ಯತ್ಯಾಸವಾದ ತಕ್ಷಣ, ನಿಮ್ಮ ಜೀವನ ನಮ್ಮ ತೆರಿಗೆ ಹಣದಿಂದ ಎಂದು ಮಾತನಾಡಬೇಡಿ. ಹಾಗೆ ಮಾತನಾಡಿದರೆ ಅವರ ವಿದ್ಯೆಯನ್ನು, ತಂದೆ ತಾಯಿಯ ತ್ಯಾಗವನ್ನು ನೀವುಗಳು ಅವಮಾನಿಸಿದಂತೆಯೇ ಅಲ್ಲವೇ ? ಅವರ ಕುಟುಂಬವನ್ನು ಅಪಮಾನಿಸಿದಂತಲ್ಲವೇ ? ಈ ನಾಗರೀಕ ಸಮಾಜದಲ್ಲಿ ಎಲ್ಲರಿಗೂ ಗೌರವವಾಗಿ ಬದುಕುವ ಹಕ್ಕಿದೆ. ಆ ಕಾರಣಕ್ಕಾಗಿ ಯಾರು ಯಾರನ್ನೂ ದೂಷಿಸಿ ಮಾತನಾಡುವ ಅಗತ್ಯವಿಲ್ಲ. “ನಡೆವವರೆಡಹದೆ ಕುಳಿತವರೆಡಹರೇ” ಅಂದರೆ ನಡೆಯುವವರು ಎಡವ ಬೇಕೇ ಹೊರತು, ಕುಳಿತವರು ಎಡವಲು ಸಾಧ್ಯವಿಲ್ಲ. ಹಾಗಾಗಿ ತಪ್ಪುಗಳು ಸಣ್ಣ ಪುಟ್ಟ ವ್ಯತ್ಯಾಸಗಳು ಮಾನವನ ಜೀವನದಲ್ಲಿ ಸಹಜ. ಕೋಪದ ಕೈಗೆ ಬುದ್ದಿಕೊಡಬೇಡಿ, ಸಾಮಾನ್ಯವಾಗಿ ಎಲ್ಲರಿಗೂ ಇತೀಚಿನ ದಿನಗಳಲ್ಲಿ ಬಿಪಿ, ಶುಗರ್, ಹೃದಯಕ್ಕೆ ಸಂಬಂಧಿಸಿದಂತ ಕಾಯಿಲೆಗಳು ಸಾಮಾನ್ಯವಾಗಿಬಿಟ್ಟಿವೆ. ಎಲ್ಲರೂ ಜಾಗೃತವಾಗಿರಬೇಕಾಗಿದೆ.
ಕೆಲವೊಮ್ಮೆ, ಕೆಲವರು ಬ್ಯಾಂಕ್ ನೌಕರರ ಸ್ವಾಭಿಮಾನಕ್ಕೆ ದಕ್ಕೆ ತರುತ್ತಲೆ ಇರುತ್ತಾರೆ.! ಅಂತಹ ವಿದ್ಯಾವಂತರು, ಸರ್ಕಾರಿ ನೌಕರರು, ಗ್ರಾಹಕರು ಅನಾವಶ್ಯಕವಾಗಿ ಮಾತನಾಡಿದರೆ ಅಂತಹ ಅಸಭ್ಯ ವರ್ತನೆಯ ಗ್ರಾಹಕರಿಗೆ ಕಾನೂನಿನ ರೀತಿಯಲ್ಲಿ ಸೂಕ್ತ ಕ್ರಮವನ್ನು ಜರುಗಿಸುವುದು ಬಹಳ ಒಳ್ಳೆಯದು. ಒಬ್ಬ ಗ್ರಾಹಕ ಮಾತನಾಡಿದ ಮಾತನ್ನು ಯಥಾವತ್ತಾಗಿ ಮತ್ತೊಬ್ಬ ಗ್ರಾಹಕರು ಮಾತನಾಡುತ್ತಾರೆ ಎನ್ನುವುದಾದರೆ ಇಡೀ ಬ್ಯಾಂಕಿನ ಸೂಕ್ತ ಕಾರ್ಯಾಚರಣೆಯ ಸಮಯವನ್ನು ಹಾಳುಮಾಡಿದಂತಲ್ಲವೇ!! ದಯಮಾಡಿ ಎಲ್ಲರೂ ಎಲ್ಲರನ್ನು ಗೌರವಿಸೋಣ, ಎಲ್ಲರೂ ಗೌರವದಿಂದ ಬದುಕೋಣ…
ಯಾರು ಅನಾವಶ್ಯಕವಾದ ಕರೆಗಳಿಗೆ ಬ್ಯಾಂಕ್ ವಿವರವನ್ನು ನೀಡಬೇಡಿ, ತಮ್ಮ ಮೊಬೈಲ್ ಫೋನ್ ಗೆ ಬರುವ ಒಟಿಪಿ ಯನ್ನು ಯಾರಿಗೂ ತಿಳಿಸಬೇಡಿ. ಏನಾದರು ಸಂಶಯವಿದ್ದರೆ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಸೂಕ್ತ. ತಮ್ಮ ಎಟಿಎಂ ಕಾರ್ಡ್ ಹಿಂಬದಿಯಲ್ಲಿ ಗೌಪ್ಯವಾದ ಪಿನ್ ನಂಬರ್ ಅನ್ನು ಬರೆದಿಡಬೇಡಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/Ci8F6ckDmAbCBQyqgLqOPx